ಪೋಕ್ಸೊ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವಿಚಾರಣಾ ನ್ಯಾಯಾಲಯವು ಜುಲೈ 15ಕ್ಕೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮನವಿ ಮಾಡಿದೆ. ಜುಲೈ 6ರಂದು ವಿಚಾರಣಾಧೀನ ನ್ಯಾಯಾಲಯವು ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳು ಖುದ್ದು ಹಾಜರಾಗಬೇಕು ಎಂದು ಆದೇಶಿಸಿತ್ತು.
ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಹಾಗೂ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ಹಾಗೂ ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರುಣ ವೈ ಎಂ ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ನಡೆಸಿತು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅಡ್ವೊಕೇಟ್ ಜನರಲ್ ಅವರು ಊರಿನಲ್ಲಿ ಇಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.
ಅರ್ಜಿದಾರ ಬಿಎಸ್‌ವೈ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಪ್ರಕರಣ ಇದೇ ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿಲ್ಲ. ನಮ್ಮ ವಾದ ಆಲಿಸಲೇಬೇಕು. ಬಿಎಸ್‌ವೈ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ಆರೋಪ ಪಟ್ಟಿ ಸ್ವೀಕರಿಸಿ, ಸಂಜ್ಞೇ ಪರಿಗಣಿಸಿದೆ. ಖುದ್ದು ಹಾಜರಾಗಲು ಆದೇಶಿಸಿದೆ. ಹೀಗಾಗಿ, ಬಿಎಸ್‌ವೈ ಜುಲೈ 15ರಂದು (ಸೋಮವಾರ) ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಸಂಜ್ಞೇ ಪರಿಗಣಿಸಿರುವುದೇ ಸರಿಯಿಲ್ಲ. ಕಾರ್ಯ ವಿಧಾನದ ಜಾರಿಯೇ ಸರಿಯಿಲ್ಲ” ಎಂದು ಆಕ್ಷೇಪಿಸಿದರು.
ಆಗ ಪೀಠವು “ಬಿಎಸ್‌ವೈಗೆ ಮಧ್ಯಂತರ ಆದೇಶದ ಮೂಲಕ ರಕ್ಷಣೆ ಒದಗಿಸಲಾಗಿದೆ. ಸೋಮವಾರ ವಿಚಾರಣೆಯಿಂದ ಬಿಎಸ್‌ವೈಗೆ ವಿನಾಯಿತಿ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕೋರಲಾಗುವುದು” ಎಂದಿತು.
ಆನಂತರ ಸಂತ್ರಸ್ತೆಯ ತಾಯಿಯಾದ ದೂರುದಾರೆಯು ಸಾವನ್ನಪ್ಪಿರುವುದರಿಂದ ಯಾರನ್ನು ಪ್ರತಿವಾದಿಯನ್ನಾಗಿಸಬೇಕು ಎಂಬ ವಿಚಾರ ನ್ಯಾಯಾಲಯದ ಜಿಜ್ಞಾಸೆಗೆ ಒಳಪಟ್ಟಿತು.
ಸಂತ್ರಸ್ತೆಯನ್ನೇ ಪ್ರತಿವಾದಿಯಾಗಿ ಮಾಡಬಹುದು ಎಂದು ಹೆಚ್ಚುವರಿ ಎಸ್‌ಪಿಪಿ ಜಗದೀಶ್ ಹೇಳಿದರು. ಆಕೆ ಅಪ್ರಾಪ್ತೆಯಾಗಿರುವುದರಿಂದ ಹಾಗೆ ಮಾಡಲಾಗದು ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.
ಸಂತ್ರಸ್ತೆ ತಂದೆ ಬದುಕಿರುವುದರಿಂದ ಅವರನ್ನೇ ಪ್ರತಿವಾದಿಯನ್ನಾಗಿಸಬಹುದು ಎಂದು ಬಿಎಸ್‌ವೈ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಸಲಹೆ ನೀಡಿದರು.
ಆಗ ಸಂತ್ರಸ್ತೆಯ ಸಹೋದರನ ಪರವಾಗಿ ಹಾಜರಾಗಿದ್ದ ವಕೀಲ ಎಸ್ ಬಾಲನ್ ಅವರು ತಂದೆಯ ಜೊತೆ ವಿವಾದವಿದೆ. ಹೀಗಾಗಿ, ಸಹೋದರನ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಸಹೋದರನನ್ನೇ ಪ್ರತಿವಾದಿಯನ್ನಾಗಿಸಬಹುದು ಎಂದರು.
ಇದಕ್ಕೆ ಆಕ್ಷೇಪಿಸಿದ ನಾಗೇಶ್ ಅವರು ಸಹೋದರನನ್ನು ಗಾರ್ಡಿಯನ್ ಆಗಿ ಪರಿಗಣಿಸಲು ಅವಕಾಶವಿಲ್ಲ ಎಂದರು. ಇದಕ್ಕೆ ಪೀಠವೂ ಸಹಮತ ವ್ಯಕ್ತಪಡಿಸಿತು. ಅಂತಿಮವಾಗಿ ಸಹೋದರನನ್ನು ಗಾರ್ಡಿಯನ್ ಆಗಿ ಪರಿಗಣಿಸಿ ಪ್ರತಿವಾದಿಯನ್ನಾಗಿಸಬಹುದೇ ಎಂಬುದರ ಕುರಿತು ಅಧ್ಯಯನ ನಡೆಸಿ, ಮುಂದಿನ ವಿಚಾರಣೆಯಲ್ಲಿ ವಾದಿಸುವಂತೆ ಪಕ್ಷಕಾರರಿಗೆ ಆದೇಶಿಸಿತು.
ಕೊನೆಯದಾಗಿ, ಬಿಎಸ್‌ವೈಗೆ ಸೋಮವಾರ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕೆ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ವಿನಾಯಿತಿ ನೀಡಬೇಕು. ಹಾಲಿ ಪ್ರಕರಣವನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುವವರೆಗೆ ಬಿಎಸ್‌ವೈಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಜುಲೈ 26ಕ್ಕೆ ಮುಂದೂಡಿತು.