ಗೋಮಾಂಸ ಸೇವನೆ ದೃಶ್ಯ ತೆಗೆಯುವಂತೆ ಸೂಚಿಸಿದ ಕೇರಳ ಹೈಕೋರ್ಟ್: ಹಾಲ್ ಚಿತ್ರ ನಿರ್ಮಾಪಕರಿಗೆ ಭಾಗಶಃ ಪರಿಹಾರ

ಗೋಮಾಂಸ ಬಿರಿಯಾನಿ ತಿನ್ನುವ ದೃಶ್ಯವನ್ನು ತೆಗೆದುಹಾಕುವುದು ಮತ್ತು ಪ್ರಮುಖ ನಟಿ ಮುಸ್ಲಿಂ ಉಡುಪಿನಲ್ಲಿ ಕಾಣಿಸಿಕೊಳ್ಳುವ ಹಾಡಿನ ಸನ್ನಿವೇಶವನ್ನು ತೆಗೆದುಹಾಕುವುದು ಸೇರಿದಂತೆ ಆರು ಮಾರ್ಪಾಡುಗಳನ್ನು ಸಿಬಿಎಫ್‌ಸಿ ಸೂಚಿಸಿತ್ತು.
HAAL
HAAL
Published on: 

ʼಹಾಲ್‌ʼ ಮಲಯಾಳಂ ಚಿತ್ರದ ಆರು ದೃಶ್ಯಗಳನ್ನು ಕತ್ತರಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಫ್‌ಸಿ) ನೀಡಿದ್ದ ಆದೇಶ ರದ್ದುಗೊಳಿಸಿರುವ ಕೇರಳ ಹೈಕೋರ್ಟ್‌ ಶುಕ್ರವಾರ ಚಿತ್ರ ನಿರ್ಮಾಪಕರಿಗೆ ಭಾಗಶಃ ಪರಿಹಾರ ನೀಡಿದೆ [ಜುಬಿ ಥಾಮಸ್‌ ಮತ್ತಿತತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಆರು ಮಾರ್ಪಾಡುಗಳನ್ನು ಮಾಡಿದರೆ ಮಾತ್ರ ಚಿತ್ರಕ್ಕೆ ʼಎʼ (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಲಾಗುವುದು ಎಂದು ಹೇಳಿದ್ದ ಸಿಬಿಎಫ್‌ಸಿ ಆದೇಶವನ್ನು ನ್ಯಾಯಮೂರ್ತಿ ವಿ ಜಿ ಅರುಣ್ ರದ್ದುಗೊಳಿಸಿದರಾದರೂ ಎರಡು ಮಾರ್ಪಾಡುಗಳನ್ನು ಮಾಡುವಂತೆ ಸೂಚಿಸಿದರು.  

Also Read
ʼಹಾಲ್ʼ ಸಿನಿಮಾ ಬಗ್ಗೆ ಕ್ರೈಸ್ತರ ತಕರಾರು: ಸಿನಿಮಾ ವೀಕ್ಷಿಸಲಿದೆ ಕೇರಳ ಹೈಕೋರ್ಟ್

ಗೋಮಾಂಸ ಸೇವನೆ ದೃಶ್ಯ ತೆಗೆಯುವುದು ಹಾಗೂ "ಅದಿಲ್ ತನ್ನೆ...ಮಥ ತಿಲೆಕ್ಕುಮಿ ಕಾಣು.. ." ಸಂಭಾಷಣೆ ತೆಗೆಯುವಂತೆ ಪೀಠ ಹೇಳಿತು. ಮಾರ್ಪಾಡುಗಳ ಬಳಿಕ ಪ್ರಮಾಣಪತ್ರಕ್ಕಾಗಿ ಚಿತ್ರ ನಿರ್ಮಾಪಕರು ಮತ್ತೆ ಸಿಬಿಎಫ್‌ಸಿಗೆ ಅರ್ಜಿ ಸಲ್ಲಿಸಬಹುದು. ಎರಡು ವಾರಗಳಲ್ಲಿ ಮನವಿ ಕುರಿತು ಸಿಬಿಎಫ್‌ಸಿ ನಿರ್ಧರಿಸಬೇಕು ಎಂದು ಅದು ಸ್ಪಷ್ಟಪಡಿಸಿತು.

ನ್ಯಾಯಮೂರ್ತಿ ಅರುಣ್ ಅವರು ಆದೇಶ ಹೊರಡಿಸುವ ಮೊದಲು ಸಿಬಿಎಫ್‌ಸಿ ಎತ್ತಿದ ಆಕ್ಷೇಪಣೆಗಳು ಸಮರ್ಥನೀಯವೇ ಎಂದು ನಿರ್ಣಯಿಸಲು ಚಿತ್ರವನ್ನು ವೀಕ್ಷಿಸಿದ್ದರು.

Also Read
'ಹಾಲ್ʼ ಸಿನಿಮಾ ವಿವಾದ: ಅಕ್ಟೋಬರ್ 25ಕ್ಕೆ ಸಿನಿಮಾ ವೀಕ್ಷಿಸಲಿರುವ ಕೇರಳ ಹೈಕೋರ್ಟ್

ಚಲನಚಿತ್ರದಲ್ಲಿ ಕಂಡುಬರುವ ಒಂದು ಸಂಸ್ಥೆಯ ಹೆಸರನ್ನು ಮಸುಕುಗೊಳಿಸುವುದು, ಗೋಮಾಂಸ ಬಿರಿಯಾನಿ ತಿನ್ನುವ ದೃಶ್ಯವನ್ನು ತೆಗೆದುಹಾಕುವುದು ಮತ್ತು ಪ್ರಮುಖ ನಟಿ ಮುಸ್ಲಿಂ ಉಡುಪಿನಲ್ಲಿ ಕಾಣಿಸಿಕೊಳ್ಳುವ ಹಾಡಿನ ಸನ್ನಿವೇಶವನ್ನು ತೆಗೆದುಹಾಕುವುದು ಸೇರಿದಂತೆ ಆರು ಮಾರ್ಪಾಡುಗಳನ್ನು ಸಿಬಿಎಫ್‌ಸಿ ಸೂಚಿಸಿತ್ತು.

ಹಾಲ್ ಚಿತ್ರ  ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ನಡುವಿನ ಅಂತರ್ಧರ್ಮೀಯ ಪ್ರೇಮಕಥೆಯನ್ನು ಹೇಳುತ್ತದೆ. ಶೇನ್ ನಿಗಮ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಗಮನಾರ್ಹ ಅಂಶವೆಂದರೆ ಕ್ಯಾಥೋಲಿಕ್ ಕಾಂಗ್ರೆಸ್ ತಮರಚ್ಚೇರಿ ಡಯಾಸಿಸ್‌ ಕೂಡ ಚಿತ್ರವನ್ನು ವಿರೋಧಿಸಿದ್ದು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ನ್ಯಾಯಾಲಯ ಅನುಮತಿಸಿತ್ತು.   ಚಿತ್ರದಲ್ಲಿ ಕೆಲ ಧಾರ್ಮಿಕ ನಾಯಕರನ್ನು ನಕಾರಾತ್ಮಕವಾಗಿ ಬಿಂಬಿಸಿದ್ದು ಲವ್‌ ಜಿಹಾದ್‌ ಉತ್ತೇಜಿಸುವಂತಿದೆ ಎಂದು ಕ್ರೈಸ್ತ ಸಂಘಟನೆ ಹೇಳಿಕೊಂಡಿತ್ತು.