ಹಾಸ್ಯ ಕಲಾವಿದ ಕಮ್ರಾಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು

ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆಯ ಬೆದರಿಕೆ ಇರುವುದರಿಂದ ಕಮ್ರಾ ಮಹಾರಾಷ್ಟ್ರದ ನ್ಯಾಯಾಲಯಗಳ ಮೆಟ್ಟಿಲೇರಲು ಆಗುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಹಾಸ್ಯ ಕಲಾವಿದ ಕಮ್ರಾಗೆ ಮದ್ರಾಸ್ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು
Facebook
Published on

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅಪಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರಿಗೆ ಮದ್ರಾಸ್ ಹೈಕೋರ್ಟ್ ಏಪ್ರಿಲ್ 7 ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.

ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆಯ ಬೆದರಿಕೆ ಇರುವುದರಿಂದ ಕಮ್ರಾ ಮಹಾರಾಷ್ಟ್ರದ ನ್ಯಾಯಾಲಯಗಳ ಮೆಟ್ಟಿಲೇರಲು ಆಗುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಸುಂದರ್ ಮೋಹನ್ ಈ ಆದೇಶ ನೀಡಿದರು. ತಮ್ಮ ವಾದಕ್ಕೆ ಪೂರಕವಾಗಿ ಕಮ್ರಾ ಪರ ವಕೀಲರು ದೈನಿಕ ಮಾಧ್ಯಮಗಳ ವರದಿಗಳನ್ನು ಸಹ ನೀಡಿದ್ದರು.

Also Read
ಕುನಾಲ್‌ ಕಮ್ರಾ ಹಾಸ್ಯ ಕಾರ್ಯಕ್ರಮ ವಿವಾದ: ದಾಂಧಲೆ ಎಸಗಿದ 12 ಮಂದಿಗೆ ಮುಂಬೈ ನ್ಯಾಯಾಲಯ ಜಾಮೀನು

ವಾಕ್ ಸ್ವಾತಂತ್ರ್ಯದ ಭಾಗವಾಗಿ ವಿಡಂಬನೆಗೆ ರಕ್ಷಣೆ ಇದ್ದು ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ಹೆಸರಿಸಿಲ್ಲ ಎಂದು  ಅವರ ಪರ ವಕೀಲರು ಹೇಳಿದರು.

ಹಾಸ್ಯ ಕಾರ್ಯಕ್ರಮವೊಂದರಲ್ಲಿ 2022ರಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ರಾಜಕೀಯ ಬಂಡಾಯ ಎದ್ದಿದ್ದನ್ನು ಪ್ರಸ್ತಾಪಿಸಿ ಶಿಂಧೆ ದೇಶದ್ರೋಹಿ ಎಂದು ಕಮ್ರಾ ಬಣ್ಣಿಸಿದ್ದರು. ಶಿಂಧೆ ಬಂಡಾಯದ ನಂತರ ಶಿವಸೇನೆ ಹೋಳಾಗಿತ್ತು. ಶಿಂಧೆ ಅವರ ಆಲೋಚನೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗಿನ ಮೈತ್ರಿಯನ್ನು ಅಣಕಿಸಿ  ಬಾಲಿವುಡ್ ಚಲನಚಿತ್ರ ದಿಲ್ ತೋ ಪಾಗಲ್ ಹೈ ಚಿತ್ರದ 'ಬೊಲೀಸಿ ಸೂರತ್‌' ಹಾಡನ್ನು ವಿಡಂಬನಾತ್ಮಕವಾಗಿ ಕಮ್ರಾ ಪ್ರಸ್ತುತಪಡಿಸಿದ್ದರು.

ಶಿವಸೇನಾ ಶಾಸಕ ಮುರಾಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಕಮ್ರಾ ವಿರುದ್ಧ ಸೆಕ್ಷನ್ 353(1)(b), 353(2) (ಸಾರ್ವಜನಿಕ ಕಿರುಕುಳ) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.

Also Read
ಐಟಿ ನಿಯಮಾವಳಿಗೆ ತಿದ್ದುಪಡಿ: ಹಾಸ್ಯ ಕಲಾವಿದ ಕಮ್ರಾ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ

ಕಮ್ರಾ ತಮಿಳುನಾಡಿನ ವಿಲ್ಲುಪರಂ ನಿವಾಸಿಯಾಗಿದ್ದರೂ, ಕಮ್ರಾ ವಿರುದ್ಧದ ಎಫ್‌ಐಆರ್ ಮುಂಬೈನಲ್ಲಿ ದಾಖಲಾಗಿದೆ. ನಂತರ ಅವರು ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಯಾವುದೇ ವ್ಯಕ್ತಿ ವಿರುದ್ಧ ಬೇರೆ ರಾಜ್ಯದಲ್ಲಿ ಎಫ್‌ಐಆರ್‌ ದಾಖಲಾಗಿದ್ದಾಗ ಆತ ತನ್ನ ಸ್ವಂತ ರಾಜ್ಯದಲ್ಲಿ ಬಂಧನಪೂರ್ವ ಜಾಮೀನು ಪಡೆಯುವುದನ್ನು ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಎಂದು ಕರೆಯಲಾಗುತ್ತದೆ.

Kannada Bar & Bench
kannada.barandbench.com