

'ದ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್ ' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಗುರುವಾರ ನೀಡಿದ್ದ ತಡೆಯಾಜ್ಞೆಯನ್ನು ವಿಭಾಗೀಯ ಪೀಠ ಶುಕ್ರವಾರ ತೆರವುಗೊಳಿಸಿದೆ [ಶ್ರೀದೇವ್ ನಂಬೂದಿರಿ ಮತ್ತು ಭಾರತ ಒಕ್ಕೂಟ ಇನ್ನಿತರರು ಹಾಗೂ ಸಂಬಂಧಿತ ಪ್ರಕರಣಗಳು].
ಗುರುವಾರ ಏಕಸದಸ್ಯ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ವಿಧಿಸಿದ್ದ ತಡೆಯಾಜ್ಞೆಯನ್ನುನ್ಯಾಯಮೂರ್ತಿಗಳಾದ ಎಸ್ ಎ ಧರ್ಮಾಧಿಕಾರಿ ಮತ್ತು ಪಿ ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠ ತೆರವುಗೊಳಿಸಿತು.
ಫೆಬ್ರವರಿ 26ರ ಗುರುವಾರ ಮಧ್ಯಾಹ್ನ 3 ಗಂಟೆಗೆ ನ್ಯಾಯಮೂರ್ತಿ ಥಾಮಸ್ 15 ದಿನಗಳ ಕಾಲ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಿ, ಚಿತ್ರದ ವಿರುದ್ಧ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸುವಂತೆ ಸಿಬಿಎಫ್‌ಸಿಗೆ ಸೂಚಿಸಿದ್ದರು.
ಚಿತ್ರದ ನಿರ್ಮಾಪಕರು ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಲೆಂದು ಅದೇ ದಿನ ಸಂಜೆ 7.30ಕ್ಕೆ ವಿಭಾಗೀಯ ಪೀಠ ತುರ್ತು ವಿಶೇಷ ಕಲಾಪ ನಡೆಸಿತ್ತು. ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ವಿವರವಾಗಿ ವಾದ ಆಲಿಸಿದ ಬಳಿಕ ಪೀಠ ತೀರ್ಪನ್ನು ಕಾಯ್ದಿರಿಸಿತು. ಇಂದು ಮಧ್ಯಾಹ್ನ 4 ಗಂಟೆಗೆ ತೀರ್ಪು ಪ್ರಕಟವಾಗಿದೆ.
ಸಿಬಿಎಫ್‌ಸಿ ಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿ ಪ್ರಮಾಣಪತ್ರ ನೀಡಿರುವುದರಿಂದ, ಅದರ ನಿರ್ಧಾರ ಸಮಗ್ರ ಪರಿಶೀಲನೆಯ ಮೇಲೇ ಆಧಾರಿತವಾಗಿದೆ ಎಂಬ ಊಹೆ ಇದೆ. ಒಂದು ವೇಳೆ ಚಲನಚಿತ್ರ ಕೋಮು ಉದ್ವಿಗ್ನತೆಯನ್ನು ಉಂಟುಮಾಡಿದರೆ, ಅದನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ ಎಂದು ವಿಭಾಗೀಯ ಪೀಠ ನುಡಿದಿದೆ.
ಕೇವಲ ಟೀಸರ್ ಮತ್ತು ಟ್ರೇಲರ್ ಆಧರಿಸಿ ಚಿತ್ರ ಸಿಬಿಎಫ್‌ಸಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂಬ ತೀರ್ಮಾನಕ್ಕೆ ಬರಲಾಗದು. ಸಿಬಿಎಫ್‌ಸಿ ಪ್ರಮಾಣಪತ್ರ ಪಡೆದಿರುವ ಚಿತ್ರವೊಂದನ್ನು ಬಿಡುಗಡೆಗೂ ಮುನ್ನ ತಡೆ ಹಿಡಿಯುವುದು ಅತ್ಯಂತ ಕಠಿಣ ಕ್ರಮವಾಗಿದ್ದು ಅದನ್ನು ಸರಳವಾಗಿ ಅನುಮತಿಸಲು ಆಗದು ಎಂದು ಅದು ಹೇಳಿತು.
ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ತೀರ್ಪುಗಳ ಆಧರಿಸಿ ಹೇಳುವುದಾದರೆ ಸಿಬಿಎಫ್‌ಸಿಯಂತಹ ತಜ್ಞ ಸಂಸ್ಥೆ ಚಿತ್ರಕ್ಕೆ ಅನುಮೋದನೆ ನೀಡಿದ ಬಳಿಕ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ನೆಪವಾಗಿಟ್ಟುಕೊಂಡು ಚಿತ್ರಕ್ಕೆ ತಡೆ ನೀಡಲಾಗದು ಎಂದು ಅದು ಅಭಿಪ್ರಾಯಪಟ್ಟಿತು.