

ಸಮಿತಿಗಳು ಮತ್ತು ಸ್ವಯಂಸೇವಕರ ಜಾಲ ಬಳಸಿಕೊಂಡು ಸರ್ಕಾರದ ಕಲ್ಯಾಣ ಕ್ರಮಗಳ ಕುರಿತು ಕೇರಳದ ಎಲ್ಲಾ ಮನೆಗಳಿಂದ ಪ್ರತಿಕ್ರಿಯೆ ಸಂಗ್ರಹಿಸಲು ಪ್ರಸ್ತಾಪಿಸಲಾದ 'ನವ ಕೇರಳ - ಪ್ರಜಾ ಪ್ರತಿಕ್ರಿಯೆ ಕಾರ್ಯಕ್ರಮʼವನ್ನು ಕೇರಳ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ [ಮುಬಾಸ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].
2026ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪ್ರಚಾರದಂತೆ ತೋರುವ ದೊಡ್ಡ ಪ್ರಮಾಣದ ಮನೆಮನೆ ಸಮೀಕ್ಷೆಗಾಗಿ ಸಾರ್ವಜನಿಕ ಹಣ ಮತ್ತು ಆಡಳಿತ ವ್ಯವಸ್ಥೆಯನ್ನು ಸರ್ಕಾರ ಬಳಸುವಂತಿಲ್ಲಎಂದು ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಮತ್ತು ನ್ಯಾ. ಶ್ಯಾಮ್ ಕುಮಾರ್ ವಿ ಎಂ ಅವರಿದ್ದ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.
ಸಮೀಕ್ಷೆಗೆ ಸರ್ಕಾರದ ಬೊಕ್ಕಸದಲ್ಲಿದ್ದ ₹20 ಕೋಟಿ ನಿಧಿಯನ್ನು ಹಣಕಾಸು ಅನುಮೋದನೆ ಅಥವಾ ಬಜೆಟ್ ಮಂಜೂರಾತಿ ಇಲ್ಲದೆ ಬಳಸಲಾಗಿದೆ ಎಂಬುದನ್ನೂ ನ್ಯಾಯಾಲಯ ಗಮನಿಸಿತು.
ಸರ್ಕಾರ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕೆ ತಡೆ ಇರುವುದಿಲ್ಲ. ಆದರೆ ಯಾವುದೇ ವೆಚ್ಚಕ್ಕೆ ಹಣಕಾಸು ಅನುಮೋದನೆ ಪಡೆದಿರಬೇಕು, ಅದು ಹಣಕಾಸು ನಿಯಮಗಳಿಗೆ ಅನುಗುಣವಾಗಿರಬೇಕು. ಇಂತಹ ಅಧ್ಯಯನ ಕೈಗೊಳ್ಳುವ ಸಚಿವ ಸಂಪುಟದ ವಿವೇಚನೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಅದನ್ನು ಜಾರಿಗೆ ತರಲು ಹಣಕಾಸು ನಿಯಮಗಳಿಗೆ ಹೊರತಾದ ನಿಧಿಗಳನ್ನು ಬಳಸಲಾಗಿದ್ದರೆ ಅದರ ಬಳಕೆ ಕಾನೂನುಬಾಹಿರವೆಂದು ಘೋಷಿಸುವುದು ತನ್ನ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಅದು ಸಮೀಕ್ಷಾ ಪ್ರಕ್ರಿಯೆಯನ್ನು ಮುಂದುವರೆಸದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಿದೆ.
ಕಾರ್ಯಕ್ರಮ ಪ್ರಶ್ನಿಸಿ ಎರಡು ಪಿಐಎಲ್‌ಗಳನ್ನು ಸಲ್ಲಿಸಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯ ಮುಬಾಸ್ ಎಂಎಚ್ ಮತ್ತು ಕೇರಳ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಲೋಷಿಯಸ್ ಕ್ಸೇವಿಯರ್ ಅರ್ಜಿ ಸಲ್ಲಿಸಿದ್ದರು. ಮನೆಗಳು, ಸಾರ್ವಜನಿಕ ಸ್ಥಳಗಳು, ಕುಟುಂಬ ಶ್ರೀ ಘಟಕಗಳು ಹಾಗೂ ಕೆಲಸದ ಸ್ಥಳಗಳಲ್ಲಿ ವೈಯಕ್ತಿಕ ಮತ್ತು ಕುಟುಂಬದ ವಿವರ ಸಂಗ್ರಹಿಸುವುದು ಗೌಪ್ಯತಾ ಹಕ್ಕಿನ ಉಲ್ಲಂಘನೆಯಾಗುತ್ತದೆ; ಕಾನೂನು ಆಧಾರವಿಲ್ಲದೆ ಮತ್ತು ಸಮರ್ಪಕ ರಕ್ಷಣಾ ವ್ಯವಸ್ಥೆಯಿಲ್ಲದೆ ದತ್ತಾಂಶ ಸಂಗ್ರಹಿಸಲಾಗುತ್ತಿದೆ ಎಂದು ಅವರು ವಾದಿಸಿದ್ದರು.
ಅಲ್ಲದೆ ಚುನಾವಣೆ ಹೊಸ್ತಿಲಲ್ಲಿ ಸಮೀಕ್ಷೆ ನಡೆಸುತ್ತಿರುವುದರಿಂದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (ಎಲ್‌ಡಿಎಫ್) ಅಧಿಕೃತ ವ್ಯವಸ್ಥೆಗಳ ಮೂಲಕ ಮತದಾರರನ್ನು ಸಂಪರ್ಕಿಸಲು ಅವಕಾಶ ನೀಡಿ ಸಮಾನ ಸ್ಪರ್ಧಾ ಸ್ಥಿತಿಗೆ ಧಕ್ಕೆ ಒದಗಿಸಿದಂತಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಸಮೀಕ್ಷೆ ರದ್ದುಗೊಳಿಸಿದೆ.