ವಯನಾಡು ಪರಿಹಾರ: ಕೇಂದ್ರದಿಂದ ಹಣ ಪಡೆಯುವ ರಾಜ್ಯ ಸರ್ಕಾರದ ವಿಧಾನಕ್ಕೆ ಕೇರಳ ಹೈಕೋರ್ಟ್ ಅಸಮಾಧಾನ

ವಯನಾಡಿನಲ್ಲಿ ಭೂಕುಸಿತ ಪುನರ್ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸದ ರಾಜ್ಯ ಸರ್ಕಾರದ ಬಗ್ಗೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.
Kerala High Court, Flood
Kerala High Court, Flood
Published on

ಕೇರಳದಲ್ಲಿ ನೈಸರ್ಗಿಕ ವಿಕೋಪ ತಡೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಕೋರಿರುವ ರಾಜ್ಯ ಸರ್ಕಾರ ವಯನಾಡಿನಲ್ಲಿ ಭೂಕುಸಿತದ ನಂತರದ ಪುನರ್ವಸತಿ ಯೋಜನೆ ಪೂರ್ಣಗೊಳಿಸುವ ಕಾಲಮಿತಿಯ ವಿವರ ನೀಡದೆ ಇರುವುದಕ್ಕೆ ರಾಜ್ಯ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಸೂಕ್ತ ಕಾಲಮಿತಿ ಇಲ್ಲದೆ ಇಂತಹ ಪುನರ್ವಸತಿ ಯೋಜನೆಗಳನ್ನು ಮುಂದುವರೆಸಲು ಹೇಗೆ ಪ್ರಸ್ತಾಪಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಈಶ್ವರನ್ ಎಸ್ ಅವರಿದ್ದ ವಿಭಾಗೀಯ ಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

Also Read
ಅನುಕಂಪ ಕಳೆದುಕೊಂಡಿದ್ದೇವೆ: ವಯನಾಡ್‌ ಭೂದುರಂತದ ಪರಿಹಾರದ ಹಣದಲ್ಲಿ ಇಎಂಐ ಕಡಿತಕ್ಕೆ ಕೇರಳ ಹೈಕೋರ್ಟ್‌ ಕಿಡಿ

ರಾಜ್ಯ ಸರ್ಕಾರ 16 ಪುನರ್ವಸತಿ ಯೋಜನೆಗಳನ್ನು ರೂಪಿಸಿರುವಾಗ ಕಾಲಮಿತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯೋಜನೆ ಪೂರ್ಣಗೊಳಿಸುವ ದಿನಾಂಕ ರಾಜ್ಯ ಸರ್ಕಾರದ ಬಳಿ ಇಲ್ಲದಿದ್ದರೆ ಕೇಂದ್ರ ಸರ್ಕಾರದ ಉಳಿದ ಹಣ ನಿಮಗೆ ಸಿಗದು ಎಂದು ನ್ಯಾ. ನಂಬಿಯಾರ್‌ ಹೇಳಿದರು.

ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿದ ನಂತರ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆಗಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿತ್ತು.

ರಾಜ್ಯ ಸರ್ಕಾರ 50 ವರ್ಷಗಳವರೆಗೆ ಬಡ್ಡಿರಹಿತ ಸಾಲ ನೀಡುವ ವಿಶೇಷ ಯೋಜನೆಯಡಿಯಲ್ಲಿ ಕೇಂದ್ರದಿಂದ ಆರ್ಥಿಕ ಸಹಾಯ ಬಯಸಿತ್ತು. ಯೋಜನೆಯಡಿ ಹಣ ಬಳಸಿಕೊಂಡು ಕೈಗೊಳ್ಳಲಾದ ಪುನರ್ವಸತಿ ಯೋಜನೆಗಳನ್ನು ಮಾರ್ಚ್ 31, 2025 ರೊಳಗೆ ಪೂರ್ಣಗೊಳಿಸಬೇಕೆಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿತ್ತು. ವಯನಾಡ್ ಪುನರ್ವಸತಿ ಯತ್ನಗಳಿಗೆ ಈ ಗಡುವಿನ ಅಪ್ರಾಯೋಗಿಕತೆ ತಿಳಿಸಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಶುಕ್ರವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಅಡ್ವೊಕೇಟ್ ಜನರಲ್, ಗಡುವಿನೊಳಗೆ ಯೋಜನೆಗಳನ್ನು ಪೂರ್ಣಗೊಳಿಸಲು ಇರುವ ತೊಂದರೆಗಳನ್ನು ವಿವರಿಸುವುದಕ್ಕಾಗಿ ಕೇಂದ್ರಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಪತ್ರ ಸಿದ್ಧಪಡಿಸಿದೆ ಎಂದು ವಾದಿಸಿದರು,

ಕೇಂದ್ರವು ಹಣಕಾಸಿನ ನೆರವು ನೀಡಲು ಅಂತಹ ಸಮಯದ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ವಾದಿಸಿತು. ಆದರೂ, ಪರಿಣಾಮಕಾರಿ ಪುನರ್ವಸತಿಗೆ ರಚನಾತ್ಮಕ ಕಾಲಮಿತಿಯ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿತು. ವೆಚ್ಚ ಯೋಜನೆಗಳು ಮತ್ತು ಯೋಜನೆಯ ಸಮಯದ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸ್ಪಷ್ಟೀಕರಣ ಪಡೆಯಬೇಕು. ಜೊತೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಎಂದು ಅದು ಹೇಳಿತು.

Also Read
ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ಈ ಮಧ್ಯೆ ಭೂಕುಸಿತ ಪ್ರದೇಶಗಳು ಮತ್ತು ಜಲಮೂಲಗಳಲ್ಲಿ ಬಿದ್ದಿರುವ ಅವಶೇಷ ತೆಗೆದುಹಾಕುವಲ್ಲಿ ಇರುವ ಸಮಸ್ಯೆಯನ್ನು ಅಮಿಕಸ್‌ ಕ್ಯೂರಿ ರಂಜಿತ್‌ ಥಂಪನ್‌ ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅವಶೇಷಗಳನ್ನು ತೆಗೆಯುವುದಕ್ಕೆ ಆದ್ಯತೆ ನೀಡಲಾಗುವುದು ಎಂದಿತು.

ಮಳೆಗಾಲಕ್ಕೆ ಮುನ್ನ ನದಿಗಳ ಬಳಿ ಅವಶೇಷಗಳನ್ನು ತೆಗೆಯುವ ಕಾರ್ಯ ಪೂರ್ಣಗೊಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಮುಂದಿನ ವಿಚಾರಣೆ ನಡೆಯಲಿರುವ ಮಾರ್ಚ್ 3ರ ಹೊತ್ತಿಗೆ ಪ್ರಗತಿ ವರದಿ ಮತ್ತು ರಚನಾತ್ಮಕ ಕಾಲಮಿತಿಯ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.

Kannada Bar & Bench
kannada.barandbench.com