ಒಂಬತ್ತು ಉಪ ಕುಲಪತಿಗಳು ನಿರಾಳ: ರಾಜ್ಯಪಾಲರ ಅಂತಿಮ ಆದೇಶದವರೆಗೆ ಹುದ್ದೆಯಲ್ಲಿ ಮುಂದುವರೆಯಲು ಕೇರಳ ಹೈಕೋರ್ಟ್ ತೀರ್ಪು

ಉಪ ಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ರಾಜ್ಯಪಾಲರು ಬರೆದ ಪತ್ರವನ್ನು ಸೂಕ್ತ ನೋಟಿಸ್‌ ನೀಡದೆ ರವಾನಿಸಲಾಗಿದ್ದು ಪತ್ರ ಸಿಂಧುವಲ್ಲ ಎಂದು ನ್ಯಾಯಾಲಯ ಹೇಳಿದೆ.
Kerala High Court
Kerala High Court

ಕೇರಳದ ಒಂಬತ್ತು ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ (ವಿ ಸಿ) ರಾಜೀನಾಮೆ ನೀಡುವಂತೆ ಸೂಚಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೊರಡಿಸಿದ್ದ ಪತ್ರಕ್ಕೆ ಮಾನ್ಯತೆ ಇಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಪತ್ರ ಬರೆದ ನಂತರ ರಾಜ್ಯಪಾಲರೇ ಖುದ್ದು ಉಪಕುಲಪತಿಗಳಿಗೆ ಪ್ರತಿಕ್ರಿಯಿಸಲು ಸೂಚಿಸಿ ಶೋಕಾಸ್‌ ನೋಟಿಸ್‌ ನೀಡಿರುವುದರಿಂದ ಮೊದಲಿನ ಪತ್ರಕ್ಕೆ ಮಾನ್ಯತೆ ಇಲ್ಲವಾಗಿದೆ ಎಂದು ಹೇಳಿದೆ.

“ಯಾವುದೇ ಅರ್ಜಿದಾರರ ವಿರುದ್ಧ ಕುಲಪತಿಗಳು (ರಾಜ್ಯಪಾಲರು) ಅಂತಿಮ ಆದೇಶ ಹೊರಡಿಸುವವರೆಗೆ, ಅರ್ಜಿದಾರರು ಕಾನೂನಿನ ಪ್ರಕಾರ ಉಪಕುಲಪತಿಗಳಾಗಿರುತ್ತಾರೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರು ರಾಜೀನಾಮೆ ಸಲ್ಲಿಸಲು ಸೂಚಿಸಿದ್ದ ಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಾಲಯದ ರಜೆ ದಿನವಾದ ದೀಪಾವಳಿಯಂದು  ನ್ಯಾ. ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠವು ವಿಶೇಷ ಕಲಾಪ ನಡೆಸಿ ಆದೇಶ ಹೊರಡಿಸಿತು.

Also Read
ಶಾಲಾಮಕ್ಕಳಿಗೆ ಮಾಂಸದೂಟ, ಡೈರಿ ಫಾರಂಗಳಿಗೆ ನಿರ್ಬಂಧ ಹೇರಿದ್ದ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

“ಯಾರನ್ನೂ ಬಲವಂತವಾಗಿ ರಾಜೀನಾಮೆ ನೀಡುವಂತೆ ಹೇಳಲಾಗದು ಎನ್ನುವುದನ್ನು ಈ ನ್ಯಾಯಾಲಯ ತಿಳಿಸಬೇಕಾದ ಅಗತ್ಯವಿಲ್ಲ. ಅಲ್ಲದೆ, ಕುತೂಹಲಕಾರಿಯಾದ ಅಂಶವೆಂದರೆ ಇದು ಆದೇಶವಲ್ಲ ಆದರೆ ಸಲಹೆಯಾಗಿದೆ ಎಂದು ವಾದಿಸಲಾಗಿದೆ. ಈ ನ್ಯಾಯಾಲಯವು ಅದನ್ನು ದೃಢೀಕರಿಸುವುದಿಲ್ಲ ಮತ್ತು (ರಾಜ್ಯಪಾಲರ) ಪತ್ರ ವಿಫಲವಾಗಿದೆ" ಎಂದು ನ್ಯಾಯಾಲಯವು ಹೇಳಿದೆ.  

“ಕುಲಪತಿಗಳು ಹೊರಡಿಸಿರುವ ಪತ್ರದ ಬಗ್ಗೆ ನ್ಯಾಯಾಲಯಕ್ಕೆ ಭಾರೀ ಅತೃಪ್ತಿ ಇದೆ. ಏಕೆಂದರೆ ಅದು ಸೂಕ್ತ ನೋಟಿಸ್‌ ನೀಡದೆ ಅಕ್ಟೋಬರ್ 24, 2022ರಿಂದ ಮುಂದುವರೆಯದಂತೆ ಉಪ ಕುಲಪತಿಗಳು ರಾಜೀನಾಮೆ ನೀಡಬೇಕೆಂದು ಅದು ಕೇಳುತ್ತದೆ” ಎಂದು ಪೀಠ ತಿಳಿಸಿದೆ.

“ಅವರು ನಿಸ್ಸಂಶಯವಾಗಿ ಇನ್ನೂ ಸೇವೆಯಲ್ಲಿದ್ದು ವಿಶ್ಲೇಷಣೆ ಬಳಿಕ ಅಗತ್ಯವಿದ್ದರೆ ಅವರನ್ನು ಕಾನೂನಿನ ಪ್ರಕಾರ ತೆಗೆದುಹಾಕಬಹುದು” ಎಂದು ವಿವರಿಸಿರುವ ತೀರ್ಪು “ಆದರೆ, ಕುಲಪತಿಗಳ ಅಧಿಕಾರ ವ್ಯಾಪ್ತಿ ಸೇರಿದಂತೆ ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಇರಿಸಲಾಗಿದೆ” ಎಂದು ಸ್ಪಷ್ಟಪಡಿಸಿದೆ.  

ಹಿನ್ನೆಲೆ

ಇಂದು ಬೆಳಿಗ್ಗೆ 11:00 ಗಂಟೆಯೊಳಗೆ ರಾಜ್ಯಪಾಲರು ಒಂಬತ್ತು ಉಪ ಕುಲಪತಿಗಳು ರಾಜೀನಾಮೆ ನೀಡಬೇಕೆಂದು ಅಕ್ಟೋಬರ್ 23ರ ಭಾನುವಾರದಂದು (ನಿನ್ನೆ) ರಾಜ್ಯಪಾಲರು ಸೂಚಿಸಿದ್ದರು. ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ನೇಮಕವನ್ನು ರದ್ದುಗೊಳಿಸಿ ಪ್ರೊ. ಶ್ರೀಜಿತ್‌ ಪಿ ಎಸ್‌ ಮತ್ತು ಡಾ. ರಾಜಶ್ರೀ ಎಂ ಎಸ್‌ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಪತ್ರ ರವಾನಿಸಿದ್ದರು ಎನ್ನಲಾಗಿದೆ.

Related Stories

No stories found.
Kannada Bar & Bench
kannada.barandbench.com