ಶಬರಿಮಲೆಯಲ್ಲಿ ನಟ ದಿಲೀಪ್‌ಗೆ ವಿಐಪಿ ದರ್ಶನ: ದೇವಸ್ವಂ ಮಂಡಳಿಗೆ ಕೇರಳ ಹೈಕೋರ್ಟ್ ಛೀಮಾರಿ

ನಟ ದಿಲೀಪ್ ವಿಐಪಿ ದರ್ಶನ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರಿಂದ ಉಳಿದ ಯಾತ್ರಾರ್ಥಿಗಳಿಗೆ ಅಡಚಣೆಯಾಗಿದೆ ಎಂದಿರುವ ಪೀಠ ಸಮಗ್ರ ವರದಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.
Dileep and Sabarimala Temple
Dileep and Sabarimala Temple Instagram
Published on

ಶಬರಿಮಲೆ ದೇವಸ್ಥಾನದಲ್ಲಿ ಡಿಸೆಂಬರ್ 5 ರಂದು ಮಲಯಾಳಂ ನಟ ದಿಲೀಪ್‌ಗೆ ವಿಐಪಿ ದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯನ್ನು (ಟಿಡಿಪಿ) ಕೇರಳ ಹೈಕೋರ್ಟ್‌ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ನಟನಿಗೆ ವಿಐಪಿ ದರ್ಶನ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರಿಂದ ಉಳಿದ ಯಾತ್ರಾರ್ಥಿಗಳಿಗೆ ಅಡಚಣೆಯಾಗಿದೆ ಎಂದಿರುವ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಮುರಳಿ ಕೃಷ್ಣ ಅವರಿದ್ದ ಪೀಠ ಘಟನೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.

Also Read
ಮಲಯಾಳಂ ನಟ ದಿಲೀಪ್‌ಗೆ ಹಿನ್ನಡೆ: ಸಾಕ್ಷ್ಯವನ್ನು ಹೊಸದಾಗಿ ವಿಧಿ ವಿಜ್ಞಾನ ಪರೀಕ್ಷೆಗೊಳಪಡಿಸಲು ಕೇರಳ ಹೈಕೋರ್ಟ್ ಆದೇಶ

ವಿಐಪಿ ದರ್ಶನ ಅವಕಾಶ ಪಡೆದು ಯಾತ್ರಾರ್ಥಿಗಳ ಪೂಜೆಗೆ ಅಡ್ಡಿಪಡಿಸುವವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಟಿಡಿಬಿಗೆ ಎಚ್ಚರಿಕೆ ನೀಡಿದೆ.

ಶಬರಿಮಲೆ ದೇವಸ್ಥಾನದಲ್ಲಿ ದಿಲೀಪ್ ವಿಐಪಿ ದರ್ಶನ ಪಡೆದಾಗ ಗರ್ಭಗುಡಿಯ ಮುಂದಿನ ಸಾಲಿನಲ್ಲಿ ದಟ್ಟಣೆ ಉಂಟಾಗಿ, ವೀಕ್ಷಣೆಗೆ ಅಡ್ಡಿಯುಂಟಾಯಿತು. ಇದರಿಂದ ಉಳಿದ ಯಾತ್ರಾರ್ಥಿಗಳು ತೊಂದರೆ ಅನುಭವಿಸಿದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

Also Read
ಕೇರಳ ನಟಿ ಮೇಲಿನ ಹಲ್ಲೆ ಪ್ರಕರಣ: ಪಲ್ಸರ್ ಸುನಿಗೆ ಸುಪ್ರೀಂ ಕೋರ್ಟ್ ಜಾಮೀನು

ಶಬರಿಮಲೆ ಯಾತ್ರೆ ಮೊದಲುಗೊಂಡಿರುವುದರಿಂದ ಮಂಡಲ-ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಜನದಟ್ಟಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಟಿಡಿಬಿಗೆ ಬುದ್ಧಿವಾದ ಹೇಳಿದೆ.

ದೇಗುಲದ ಬಳಿ ಎಳೆಯ ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರು ಸೇರಿದಂತೆ ಯಾತ್ರಾರ್ಥಿಗಳ ದರ್ಶನಕ್ಕೆ ಅಡ್ಡಿ ಉಂಟಾಗುವಂತಹ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅದು ಹೇಳಿದೆ. ಇಂದು (ಡಿಸೆಂಬರ್ 7) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com