ವಿಪತ್ತಿಗೆ ತುತ್ತಾದವರ ಸಾಲ ಮನ್ನಾ ಆಗದಂತೆ ಕಾಯಿದೆಗೆ ತಿದ್ದುಪಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಛೀಮಾರಿ

ಭಾರತೀಯ ರಸ್ತೆಗಳಿಗೆ ವಿಪತ್ತು ಸಿದ್ಧತೆ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಇದೇ ವೇಳೆ ಸೂಚಿಸಿದೆ.
Flooded Roads
Flooded Roads
Published on

ಕಳೆದ ವರ್ಷ ಅಂದರೆ 2024ರಲ್ಲಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಿಂದ ಹಾನಿಗೊಳಗಾದವರ ಸಾಲಮನ್ನಾ ಮಾಡುವಂತೆ ಬ್ಯಾಂಕುಗಳಿಗೆ ನಿರ್ದೇಶಿಸಲು ಅಧಿಕಾರವಿಲ್ಲದಂತೆ ವಿಪತ್ತು ನಿರ್ವಹಣಾ ಕಾಯಿದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರವನ್ನು ಹೈಕೋರ್ಟ್‌ ಈಚೆಗೆ ಛೀಮಾರಿ ಹಾಕಿದೆ [ಕೇರಳದಲ್ಲಿ ನೈಸರ್ಗಿಕ ವಿಕೋಪಗಳ ತಡೆ ಮತ್ತು ನಿರ್ವಹಣೆ ಕುರಿತು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣ].

ಸಂವಿಧಾನದ 73ನೇ ವಿಧಿಯಡಿ ಸಾಲ ಮನ್ನಾ ಆದೇಶ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಪಿ.ಎಂ.ಮನೋಜ್ ಅವರಿದ್ದ ಪೀಠ ಶುಕ್ರವಾರ ತಿಳಿಸಿದೆ.

Also Read
ಅನುಕಂಪ ಕಳೆದುಕೊಂಡಿದ್ದೇವೆ: ವಯನಾಡ್‌ ಭೂದುರಂತದ ಪರಿಹಾರದ ಹಣದಲ್ಲಿ ಇಎಂಐ ಕಡಿತಕ್ಕೆ ಕೇರಳ ಹೈಕೋರ್ಟ್‌ ಕಿಡಿ

"ಕೇಂದ್ರದ ಪ್ರತಿ ಅಫಿಡವಿಟ್‌ಗೆ ಸಹಿ ಹಾಕಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧೀನ ಕಾರ್ಯದರ್ಶಿ, ಸಾಲ ಮನ್ನಾ ಆದೇಶ ನೀಡುವ ಅಧಿಕಾರ ಕೇಂದ್ರಕ್ಕೆ ಇಲ್ಲ ಎಂದು ಹೇಳಿದ್ದಾರೆ. ಕೇಂದ್ರಕ್ಕೆ ಅಧಿಕಾರವಿಲ್ಲ ಎಂದು ಹೇಳಬೇಡಿ. ಸಾಲಮನ್ನಾಗೆ ಹಿಂಜರಿಯುತ್ತಿರುವುದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ. ಆದರೆ ನೀವು ಅದನ್ನು ಮಾಡುವುದಿಲ್ಲ ಎಂದು ಹೇಳುವ ಧೈರ್ಯವನ್ನಾದರೂ ಮಾಡಿಬಿಡಿ. ಅಧೀನ ಕಾರ್ಯದರ್ಶಿ ಹೀಗೆ ಹೇಳಬಹುದಾದರೂ ಕೇಂದ್ರ ಸರ್ಕಾರ ತನಗೆ ಅಧಿಕಾರವಿಲ್ಲ ಎಂದು ಹೇಳಲು ಸಾಧ್ಯವಿಲ್ಲ.  (ಸಂವಿಧಾನದ) 73ನೇ ವಿಧಿಯಡಿ ಅಧಿಕಾರ ಇದೆ. ಅರೆ-ಒಕ್ಕೂಟ ವ್ಯವಸ್ಥೆಯಾಗಿರುವ ದೇಶದಲ್ಲಿ, ಉಳಿದ ಅಧಿಕಾರವು ಒಕ್ಕೂಟದೊಂದಿಗೆ ಇರುವಾಗ, ಕೇಂದ್ರ ಸರ್ಕಾರ ಅಧಿಕಾರಹೀನವಾಗಿದೆ ಎಂದು ದಯವಿಟ್ಟು ನಮಗೆ ಹೇಳಬೇಡಿ. ನಮಗೆ ಅಧಿಕಾರವಿಲ್ಲ ಎಂದು ಹೇಳುವುದಕ್ಕಾಗಿ ಕಾನೂನು ನಿಬಂಧನೆಯ ಹಿಂದೆ ಅಡಗಿಕೊಳ್ಳಬೇಡಿ" ಎಂದು ನ್ಯಾಯಮೂರ್ತಿ ನಂಬಿಯಾರ್ ಮೌಖಿಕವಾಗಿ ಟೀಕಿಸಿದರು.

ದೆಹಲಿಯಲ್ಲಿ ಕುಳಿತಿರುವ ಅಧೀನ ಕಾರ್ಯದರ್ಶಿಯೊಬ್ಬರು ಹೇಳುವುದನ್ನು ಆಧರಿಸಿ ನಾವು ಕಾನೂನನ್ನು ಅರ್ಥಮಾಡಿಕೊಳ್ಳಬಾರದು...
ಕೇರಳ ಹೈಕೋರ್ಟ್

ಜುಲೈ 2024ರಲ್ಲಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಸಂಭವಿಸಿದ ಪರಿಣಾಮ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ಮೇಲ್ವಿಚಾರಣೆಗಾಗಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.

ಭೂಕುಸಿತದ ಸಂತ್ರಸ್ತರು ಪಡೆದಿರುವ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದನ್ನು ಪರಿಗಣಿಸುವಂತೆ ಪೀಠ  ಈ ಹಿಂದೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

Also Read
ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ಇದೇ ವೇಳೆ ಭಾರತೀಯ ರಸ್ತೆಗಳಿಗೆ, ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳಿಗೆ ರಾಷ್ಟ್ರಮಟ್ಟದ ವಿಪತ್ತು ನಿರ್ವಹಣಾ ಯೋಜನೆ ರೂಪಿಸುವಂತೆ  ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. 

ದೇಶಾದ್ಯಂತ ನೈಸರ್ಗಿಕ ವಿಕೋಪಗಳಲ್ಲಿ ಏರಿಕೆ ಕಂಡುಬಂದಿದ್ದು, ಯೋಜನೆಯನ್ನು ಜಾರಿಗೆ ತರುವುದು ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದು ಪೀಠ ಕಿವಿಮಾತು ಹೇಳಿತು.  ಈ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ರೂಪಿಸುವತ್ತ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿತು.

Kannada Bar & Bench
kannada.barandbench.com