
ದೂರುದಾರರು ಮಹಿಳೆಯಾಗಿದ್ದಾಗ, ಆಕೆಯ ಹೇಳಿಕೆಯನ್ನಷ್ಟೇ ಆಧರಿಸಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಏಕಪಕ್ಷೀಯವಾಗಿ ತನಿಖೆ ನಡೆಸದಂತೆ ಪೊಲೀಸರಿಗೆ ಕೇರಳ ಹೈಕೋರ್ಟ್ ಈಚೆಗೆ ಎಚ್ಚರಿಕೆ ನೀಡಿದೆ [ನೌಶಾದ್ ಕೆ ವಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹಾಗೆ ಮಾಡುವುದು ತಪ್ಪು ಪರಿಣಾಮಗಳಿಗೆ ಕಾರಣವಾಗಿ ಆರೋಪಿತರ ವ್ಯಕ್ತಿತ್ವಕ್ಕೆ ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.
ಕ್ರಿಮಿನಲ್ ತನಿಖೆ ವೇಳೆ, ಅಧಿಕಾರಿಗಳು ಮಹಿಳೆಯ ಹೇಳಿಕೆಯನ್ನು ಪರಮ ಸತ್ಯವೆಂದು ಪರಿಗಣಿಸುವ ಬದಲು ದೂರುದಾರರು ಮತ್ತು ಆರೋಪಿಗಳಿಬ್ಬರ ಹೇಳಿಕೆಗಳನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ವಿವರಿಸಿದರು.
ತನಿಖೆಯ ಸಮಯದಲ್ಲಿ, ಮಹಿಳೆಯೊಬ್ಬರು ಪುರುಷನ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿರುವುದು ಪೊಲೀಸ್ ಅಧಿಕಾರಿಗಳಿಗೆ ಕಂಡುಬಂದರೆ, ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ಅವರಿಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
"ದೂರುದಾರರೊಬ್ಬರೇ ದಾಖಲಿಸಿರುವ ಪ್ರಕರಣದ ಏಕಪಕ್ಷೀಯ ತನಿಖೆ ಕೂಡದು. ದೂರುದಾರರು ಮಹಿಳೆ ಎಂಬ ಕಾರಣಕ್ಕೆ, ಎಲ್ಲಾ ಸಂದರ್ಭಗಳಲ್ಲಿ ಅವರ ಹೇಳಿಕೆಗಳು ಸತ್ಯ ಎಂಬ ಯಾವುದೇ ಊಹೆ ಇರಿಸಿಕೊಳ್ಳುವಂತಿಲ್ಲ ಮತ್ತು ಪೊಲೀಸರು ಆರೋಪಿಯ ವಾದ ಪರಿಗಣಿಸದೆ ಆಕೆಯ ಹೇಳಿಕೆಯ ಆಧಾರದ ಮೇಲೆ ಮುಂದುವರೆಯಬಾರದು" ಎಂದು ನ್ಯಾಯಾಲಯ ಹೇಳಿದೆ.
ತನಿಖಾಧಿಕಾರಿಗಳು ಸರಿಯಾದ ತನಿಖೆ ಆಧಾರದ ಮೇಲೆ ಉತ್ತಮ ವಿಶ್ವಾಸದಿಂದ ನಡೆದುಕೊಂಡರೆ ಕಾನೂನು ಅವರನ್ನು ರಕ್ಷಿಸುತ್ತದೆ ಎಂದ ಅವರು, ಅಂತಹ ಕ್ರಮ ತೆಗೆದುಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅವರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಅಮಾಯಕರನ್ನು ಸುಳ್ಳೇ ಸಿಲುಕಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಹಣಕಾಸಿನ ಪರಿಹಾರ ನೀಡಿಬಿಟ್ಟರೆ ಅದರಿಂದ ಆರೋಪಿತರ ವರ್ಚಸ್ಸಿಗೆ ಆಗುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು. ಜೊತೆಗೆ ನ್ಯಾಯಯುತ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದರು.
57 ವರ್ಷದ ಕೆ ನೌಶಾದ್ ವಿರುದ್ಧ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿ (ದೂರುದಾರೆ) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಲಾಗಿತ್ತು. ಲೈಂಗಿಕ ಉದ್ದೇಶದಿಂದ ತನ್ನ ತೋಳುಗಳನ್ನು ಹಿಡಿದಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿಯರ (ಬಿಎನ್ಎಸ್) ಸೆಕ್ಷನ್ 75(1) (ಲೈಂಗಿಕ ಕಿರುಕುಳ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಕಾರಣಕ್ಕೆ ತನ್ನ ಮೇಲೆ ಆಕೆ ಸುಳ್ಳು ಆರೋಪ ಮಾಡಿದ್ದಾಳೆ ಎಂದು ತಿಳಿಸಿದ ನೌಶಾದ್ ಪ್ರಕರಣದಲ್ಲಿ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಾದ ಆಲಿಸಿದ ನ್ಯಾಯಾಲಯ ಮಹಿಳಾ ಉದ್ಯೋಗಿಯ ದೂರಿಗೂ ಮೊದಲು ನೌಶಾದ್ ನೀಡಿದ್ದ ದೂರನ್ನು ಪೊಲೀಸರು ತನಿಖೆ ಮಾಡಿರಲಿಲ್ಲ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವ ಮೊದಲು ಆಡಿಯೋ ಸಾಕ್ಷ್ಯವನ್ನು ಸಹ ಪರಿಗಣಿಸಲಾಗಿಲ್ಲ ಎಂಬುದನ್ನು ಗಮನಿಸಿತು. ಅಂತೆಯೇ ಸಾಕ್ಷ್ಯಗಳನ್ನು ಪರಿಗಣಿಸಿ ಮತ್ತು ಹಿಂದೆ ನೀಡಲಾಗಿದ್ದ ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಾಲಯ ನೌಶಾದ್‌ಗೆ ಕೆಲ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು.