ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-12-2020

>> ʼಹಿಂದುತ್ವ ಎಂಬುದು ರಾಜಕೀಯ ಸಿದ್ಧಾಂತʼ: ಅಭಿನವ್ ಚಂದ್ರಚೂಡ್ >> ತೃತೀಯಲಿಂಗಿಗಳ ಔದ್ಯೋಗಿಕ ಅರ್ಜಿ ಸ್ವೀಕರಿಸಿ: ಪಾಟ್ನಾ ಹೈಕೋರ್ಟ್ >> ಇ-ನ್ಯಾಯಾಲಯದ ಶುಲ್ಕ ಮರು ಪಾವತಿಗೆ ಕೋರ್ಟ್ ಆದೇಶ ಬೇಕಿಲ್ಲ >> ಕೃಷಿ ಕಾಯಿದೆ ಕುರಿತ ಮನವಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-12-2020

ಹಿಂದುತ್ವಕ್ಕೆ ಮಾಡಿದ ಅವಮಾನ ಧಾರ್ಮಿಕ ಅಪಮಾನವಲ್ಲ: ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯವಾದಿ ಅಭಿನವ್ ಚಂದ್ರಚೂಡ್ ವಾದ ಮಂಡನೆ

“ಹಿಂದುತ್ವ ಎಂಬುದು ಒಂದು ಧರ್ಮವಲ್ಲ. ಅದನ್ನು ಅವಮಾನಿಸುವುದನ್ನು ಧಾರ್ಮಿಕ ಅಪಮಾನದಡಿ ಪರಿಗಣಿಸಲಾಗದು,” ಎಂದು ನ್ಯಾಯವಾದಿ ಡಾ. ಅಭಿನವ್‌ ಚಂದ್ರಚೂಡ್‌ ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದರು. ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಆಕ್ಷೇಪಾರ್ಹ ಫಲಕ ಹೊಂದಿದ್ದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಕಾನೂನು ವಿದ್ಯಾರ್ಥಿನಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿನಿ ಪರವಾಗಿ ವಾದ ಮಂಡಿಸಿದ ಅಭಿನವ್‌ ಅವರು “ಹಿಂದುತ್ವದ ವಿರುದ್ಧ ಯಾರಾದರೂ ಅವಮಾನಿಸಿದರೆ ಅಥವಾ ನಿಂದನಾತ್ಮಕ ಭಾಷೆ ಬಳಸಿದರೆ, ಅದು ಒಂದು ಧರ್ಮಕ್ಕೆ ಮಾಡಿದ ಅವಮಾನವಾಗದು, ಆದರೆ ರಾಜಕೀಯ ಸಿದ್ಧಾಂತಕ್ಕೆ ಮಾಡಿದ ಅಪಮಾನ” ಎಂದು ಪ್ರತಿಪಾದಿಸಿದರು.

Reject CAB, Boycott NRC
Reject CAB, Boycott NRC

“ಹೀಗಾಗಿ ವಿದ್ಯಾರ್ಥಿನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ ಅನ್ವಯವಾಗದು. ಅಲ್ಲದೆ ಎರಡು ಸಮುದಾಯಗಳ ನಡುವೆ ಆಕೆ ಕೋಮುದ್ವೇಷ ಹರಡದೇ ಇರುವುದರಿಂದ ಸೆಕ್ಷನ್ 153-ಎ ಕೂಡ ಅನ್ವಯಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಜೊತೆಗೆ, "ಎಫ್ಐಆರ್‌ನಲ್ಲಿರುವ ವಿಚಾರಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರೂ ಸಹ ಸೆಕ್ಷನ್ 153-ಎ ಮತ್ತು 295-ಎ ಅಡಿಯಲ್ಲಿ ಆಕೆ ಯಾವುದೇ ಅಪರಾಧ ಮಾಡಿದ್ದಾರೆ ಎನ್ನಲಾಗದು" ಎಂದು ತಿಳಿಸಿದರು. ಇದೇ ವೇಳೆ ಅವರು ಕೆಲ ಉಲ್ಲೇಖಗಳನ್ನು ದಾಖಲೆಯಲ್ಲಿ ನೀಡಬೇಕಿರುವುದರಿಂದ ಪ್ರಕರಣವನ್ನು ಮುಂದೂಡಬೇಕೆಂದು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರನ್ನು ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಡಿ. 21ಕ್ಕೆ ಮುಂದೂಡಿದೆ.

ತೃತೀಯಲಿಂಗಿ ಸಮುದಾಯ ಹೊರಗಿಟ್ಟು ಕಾನ್‌ಸ್ಟೇಬಲ್‌ ಹುದ್ದೆಗೆ ಜಾಹೀರಾತು: ಸಾಂವಿಧಾನಿಕ ಆದೇಶದ ಉಲ್ಲಂಘನೆ ಎಂದ ಪಾಟ್ನಾ ಹೈಕೋರ್ಟ್‌

ಕೇಂದ್ರ ಆಯ್ಕೆ ಮಂಡಳಿ ಹೊರಡಿಸಿರುವ 'ಕಾನ್‌ಸ್ಟೇಬಲ್' ಹುದ್ದೆಯ ಜಾಹೀರಾತಿನಲ್ಲಿ ತೃತೀಯಲಿಂಗಿ ಅರ್ಜಿದಾರರಿಗೆ ಪ್ರತ್ಯೇಕ ಕಾಲಂ ಇಲ್ಲದಿರುವುದನ್ನು ಗಮನಿಸಿದ ಪಾಟ್ನಾ ಹೈಕೋರ್ಟ್ ಸಂವೇದನಾಶೀಲ ನಡೆ ಅಳವಡಿಸಿಕೊಳ್ಳುವಂತೆ ಬಿಹಾರ ಸರ್ಕಾರಕ್ಕೆ ಸೂಚಿಸಿದ್ದು ತೃತೀಯಲಿಂಗಿಗಳಿಗೆ ಅವಕಾಶ ನೀಡುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಹೇಳಿದೆ. ಜಾಹೀರಾತು ಮಾತ್ರವಲ್ಲದೆ ಹುದ್ದೆಗಾಗಿ ಸಲ್ಲಿಸುವ ಅರ್ಜಿಯಲ್ಲಿ ಕೂಡ ತೃತೀಯಲಿಂಗಿಗಳಿಗೆ ಅವಕಾಶ ಇಲ್ಲದಿರುವುದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾ ಎಸ್ ಕುಮಾರ್ ಅವರಿದ್ದ ಪೀಠದ ಗಮನಕ್ಕೆ ಬಂದಿತು. ‘ಪುರುಷʼ ಮತ್ತು ‘ಸ್ತ್ರೀʼಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ʼಇದು ತೃತೀಯಲಿಂಗಿ ಸಮುದಾಯದ ವ್ಯಕ್ತಿಗಳು ಅರ್ಜಿ ಸಲ್ಲಿಸಬಾರದೆಂಬ ಸೂಚನೆಯೇ?ʼ ಎಂದು ಪ್ರಶ್ನಿಸಿತು.

Chief Justice Sanjay Karol, Justice Sanjay Kumar
Chief Justice Sanjay Karol, Justice Sanjay Kumar

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು “ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಮೀಸಲಾತಿ ಸೌಲಭ್ಯ ಇಲ್ಲ” ಎಂದರು. ಆಗ ನ್ಯಾಯಾಲಯ “ಮೀಸಲಾತಿಯ ವಿಚಾರಕ್ಕೆ ನಾವೀಗ ಹೋಗಬೇಕಾಗಿಲ್ಲ. ನಮಗೆ ಕಂಡು ಬಂದ ಅಂಶವೇನೆಂದರೆ ತೃತೀಯಲಿಂಗಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಕಾನ್‌ಸ್ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಸಂಪೂರ್ಣ ಹೊರಗುಳಿದಿದ್ದಾರೆ. ಇದು ಹೆಚ್ಚೂ ಕಡಿಮೆ ಅವರ ಮೀಸಲಾತಿ ಹಕ್ಕನ್ನು ದಮನ ಮಾಡಿದಂತೆ” ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಪರಿಹಾರ ಕ್ರಮಗಳನ್ನು ದಾಖಲೆಯಲ್ಲಿ ಒದಗಿಸುವಂತೆ ಪೀಠ ಸರ್ಕಾರಕ್ಕೆ ಸೂಚಿಸಿದ್ದು ಡಿ. 22ಕ್ಕೆ ವಿಚಾರಣೆ ಮುಂದೂಡಿದೆ.

ಬಳಕೆಯಾಗದ, ತಪ್ಪಾಗಿ ಖರೀದಿಸಿದ ಇ-ನ್ಯಾಯಾಲಯದ ಶುಲ್ಕ ಮರುಪಾವತಿಗೆ ನ್ಯಾಯಾಲಯದ ಆದೇಶ ಬೇಕಿಲ್ಲ: ದೆಹಲಿ ಹೈಕೋರ್ಟ್‌

ತಪ್ಪಾಗಿ ಇ-ನ್ಯಾಯಾಲಯದ ಶುಲ್ಕ ಖರೀದಿಸಿದರೆ, ಪಾವತಿಸಿದ್ದರೆ ಅಥವಾ ಅದನ್ನು ಬಳಸದೇ ಇದ್ದರೆ ಸಂಬಂಧಿತ ಅಧಿಕಾರಿಗಳಿಗೆ ಅದು ಬಳಕೆಯಾಗದೆ, ಹಾಳಾಗದೆ ಇದೆ ಎಂದೆನಿಸಿದರೆ ಆಗ ನ್ಯಾಯಾಲಯದಿಂದ ಯಾವುದೇ ತೆರನಾದ ಆದೇಶ ಬಯಸದೇ ಹಣವನ್ನು ಮರು ಪಾವತಿಸಬೇಕು ಎಂದು ದೆಹಲಿ ಹೈಕೋರ್ಟ್‌ ನಿರ್ದೇಶಿಸಿದೆ.

Lawyers, Advocates, litigants
Lawyers, Advocates, litigants

ಅರ್ಜಿದಾರರು ಖರೀದಿಸಿದ್ದ 7.45 ಲಕ್ಷ ರೂಪಾಯಿ ಮೌಲ್ಯದ ಇ-ನ್ಯಾಯಾಲಯದ ಶುಲ್ಕವನ್ನು ಮರುವಾತಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನವೀನ್‌ ಜಾವ್ಲಾ ಅವರಿದ್ದ ಏಕಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ. ದೂರು ದಾಖಲಿಸುವ ಉದ್ದೇಶದಿಂದ ಅರ್ಜಿದಾರರು ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ನಿಂದ ಇ-ನ್ಯಾಯಾಲಯ ಶುಲ್ಕವನ್ನು ಖರೀದಿಸಿದ್ದರು. ದೂರು ದಾಖಲಿಸದೇ ಇದ್ದುದರಿಂದ ಇ-ನ್ಯಾಯಾಲಯದ ಶುಲ್ಕ ಬಳಕೆಯಾಗದೇ ಹಾಗೆ ಇತ್ತು. ಅದನ್ನು ಮರಳಿಸುವಂತೆ ರೋಹಿಣಿಯ ವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ಅರ್ಜಿದಾರರು ಕೋರಿದ್ದಾಗ ಅವರು ಅದನ್ನು ಮರುಪಾವತಿಸುವ ಸಂಬಂಧ ನ್ಯಾಯಾಲಯದ ಆದೇಶ ಸಲ್ಲಿಸುವಂತೆ ಸೂಚಿಸಿದ್ದರು.

[ಕೃಷಿ ಕಾಯಿದೆಗಳು] ಕಾರ್ಯಾಂಗದ ಪ್ರಾಧಿಕಾರಗಳಿಗೆ ನ್ಯಾಯ ನಿರ್ಣಿಸುವ ಅಧಿಕಾರ ನೀಡುವುದು ಸಂವಿಧಾನ ವಿರೋಧಿ ನಿಲುವು: ದೆಹಲಿ ಕಾನೂನು ಸಂಘಗಳು

ಕೃಷಿ ಕಾಯಿದೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಕಾರ್ಯಾಂಗದ ಅಧಿಕಾರಿಗಳ ಬದಲಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ಒಳಗೊಂಡ ವಿಶೇಷ ನ್ಯಾಯಾಲಯ ನ್ಯಾಯ ನಿರ್ಣಯಿಸಬೇಕು ಎಂದು ದೆಹಲಿ ವಕೀಲರ ಪರಿಷತ್ತು ಮತ್ತು ದೆಹಲಿಯ ಎಲ್ಲಾ ವಕೀಲರ ಸಂಘಗಳ ಸಮನ್ವಯ ಸಮಿತಿ ಪ್ರಸ್ತಾವನೆ ಮಂಡಿಸಿವೆ.

Farmers in Punjab staging a protest against the Farm Bills
Farmers in Punjab staging a protest against the Farm BillsSikh24

ಕನಿಷ್ಠ 20 ರೂಪಾಯಿ ನ್ಯಾಯಾಲಯದ ಶುಲ್ಕ ಪಾವತಿಸಿ ದಾಖಲಿಸುವ ಅರ್ಜಿಯನ್ನು ವಿಶೇಷ ನ್ಯಾಯಾಲಯವು ವಿಚಾರಣೆಗೆ ಸ್ವೀಕರಿಸಬೇಕು. ರೈತರಿಗೆ ಸಂಬಂಧಿಸಿದ ವಿವಾದಗಳನ್ನು ಕಾರ್ಯಾಂಗ ನಿರ್ಣಯಿಸುವುದಕ್ಕೆ ಕೃಷಿಕರು ಪ್ರಮುಖವಾಗಿ ತಗಾದೆ ಎತ್ತಿದ್ದಾರೆ. ನ್ಯಾಯ ನಿರ್ಣಯಿಸುವ ಅಧಿಕಾರವನ್ನು ಎಸ್‌ಡಿಎಂ/ಎಡಿಎಂಗಳಿಗೆ ನೀಡುವುದು ಅಸಮರ್ಥನೀಯವಾಗಿದ್ದು, ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಎರಡು ವಕೀಲರ ಸಂಘಗಳು ಆಪಾದಿಸಿವೆ. ಕಾಯಿದೆಯ ಅನ್ವಯ ಸಂಧಾನ ಮಂಡಳಿಯ ನೇತೃತ್ವವನ್ನು ತಹಶೀಲ್ದಾರ್‌ ಬದಲಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ವಹಿಸಬೇಕು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

Related Stories

No stories found.
Kannada Bar & Bench
kannada.barandbench.com