
ಲಿವ್-ಇನ್ ಸಂಬಂಧಗಳು ಹೆಚ್ಚು ಪ್ರಚಲಿತವಾಗುತ್ತಿದ್ದರೂ, ಅವುಗಳಿಗೆ ಇನ್ನೂ ಪೂರ್ಣ ಸಾಮಾಜಿಕ ಮನ್ನಣೆ ದೊರೆತಿಲ್ಲ. ಜೊತೆಗೆ ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಲಿವ್ ಇನ್ ಸಂಬಂಧದಿಂದ ಜನಿಸುವ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಗುರಿ ಇದೆ ಎಂದು ಉತ್ತರಾಖಂಡ್ ಹೈಕೋರ್ಟ್ ಗುರುವಾರ ಹೇಳಿದೆ.
ರಾಜ್ಯದ ಯುಸಿಸಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಹಾಗೂ ಲಿವ್-ಇನ್ ಜೋಡಿಯೊಂದು ಸಲ್ಲಿಸಿದ್ದ ಪ್ರತ್ಯೇಕ ಪಿಐಎಲ್‌ಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ತಿವಾರಿ ಮತ್ತು ಆಶಿಶ್ ನೈಥಾನಿ ಅವರಿದ್ದ ಪೀಠ ಈ ಅವಲೋಕನ ಮಾಡಿತು.
ಈ ಸಂಬಂಧ ಕಕ್ಷಿದಾರರಿಗೆ ನೋಟಿಸ್ ನೀಡಿದ ನ್ಯಾಯಾಲಯ ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಉಳಿದ ಅರ್ಜಿಗಳ ಜೊತೆಗೆ ಒಟ್ಟಿಗೆ ಏಪ್ರಿಲ್ 1 ರಂದು ಆಲಿಸುವುದಾಗಿ ತಿಳಿಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್, ಸರ್ಕಾರ ಜನರ ಮೇಲೆ ಅನವಶ್ಯಕ ಕಣ್ಗಾವಲು ಇಡಲು ಮತ್ತು ಪೊಲೀಸ್ ಗಿರಿ ಸಕ್ರಿಯಗೊಳಿಸಲು ಯುಸಿಸಿ ಕಾಯಿದೆ ಮತ್ತು ಅದರ ನಿಬಂಧನೆಗಳು ಅನುವು ಮಾಡಿಕೊಡುತ್ತವೆ ಎಂದು ವಾದಿಸಿದರು. ಸಂಗಾತಿಯ ಆಯ್ಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ, ಅಧಿಕಾರ ಚಲಾಯಿಸುವ ಮತ್ತು ದಂಡಿಸುವ ಕಠಿಣ ಶಾಸನಬದ್ಧ ಅವಕಾಶವನ್ನು ಯುಸಿಸಿ ಒದಗಿಸುತ್ತದೆ ಎಂದು ಅವರು ವಾದಿಸಿದರು.
ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ತಿವಾರಿ ಅವರು ಸಂಬಂಧ ನೋಂದಣಿ ಮಾಡಿಕೊಳ್ಳುವುದು ಅಸಾಂವಿಧಾನಿಕ ಎಂದು ಪ್ರಶ್ನಿಸಲು ಸಾಧ್ಯವೇ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರೋವರ್, ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕ್ರಮವಾಗಿ ಕಾನೂನನ್ನು ಮಂಡಿಸಲಾಗಿದ್ದರೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಬಹುಸಂಖ್ಯಾತರ ಮಾನದಂಡಗಳಿಗೆ ಅನುಗುಣವಾಗಿಲ್ಲದ ಮಹಿಳೆಯರು ಮತ್ತು ಜೋಡಿಯ ವಿರುದ್ಧ ಕಿರುಕುಳ ಮತ್ತು ಹಿಂಸೆ ಹೆಚ್ಚಿಸುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಅಲ್ಲದೆ ಆಧಾರ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು ಎಂದಿರುವುದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲಂಘಿಸುತ್ತದೆ ಎಂದರು.
ರಾಜ್ಯದ ಪರವಾಗಿ ಹಾಜರಾದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಜೊತೆಗೆ ಎಲ್ಲಾ ಸಂಬಂಧಿತ ಭಾಗೀದಾರರೊಂದಿಗೆ ವ್ಯಾಪಕವಾಗಿ ಸಮಾಲೋಚನೆ ನಡೆಸಿದ ಬಳಿಕವೇ ಶಾಸನಬದ್ಧ ಯೋಜನೆ ರೂಪಿಸಲಾಗಿದೆ ಎಂದರು. ವಾದ ಆಲಿಸಿದ ನ್ಯಾಯಾಲಯ ಕಕ್ಷಿದಾರರಿಗೆ ನೋಟಿಸ್ ನೀಡಿತು.