ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ 'ಬಿʼ ವರದಿ ಸಲ್ಲಿಕೆ: ಇಡಿಯಿಂದ ವಿಶೇಷ ನ್ಯಾಯಾಲಯಕ್ಕೆ ಪ್ರತಿಭಟನಾ ಅರ್ಜಿ

ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಲೋಕಾಯುಕ್ತದ ಜೊತೆ ನವೆಂಬರ್‌ 30 ಮತ್ತು 2025ರ ಜನವರಿ 24ರಂದು ಹಂಚಿಕೊಳ್ಳಲಾಗಿದೆ. ಆದರೆ, ಅದನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ ಎಂದು ಇ ಡಿ ಆಕ್ಷೇಪಿಸಿದೆ.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ 'ಬಿʼ ವರದಿ ಸಲ್ಲಿಕೆ: ಇಡಿಯಿಂದ ವಿಶೇಷ ನ್ಯಾಯಾಲಯಕ್ಕೆ ಪ್ರತಿಭಟನಾ ಅರ್ಜಿ
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಾದ ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ʼಬಿʼ ರಿಪೋರ್ಟ್‌ ಸಲ್ಲಿಸಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯವು ವಿಚಾರಣಾಧೀನ ನ್ಯಾಯಾಲಯಕ್ಕೆ ಮಂಗಳವಾರ ಪ್ರತಿಭಟನಾ ಅರ್ಜಿ ಸಲ್ಲಿಸಿದೆ. ಮುಕ್ತಾಯ ವರದಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸುವುದಕ್ಕೂ ಮುನ್ನ ಬಾಧಿತರಾಗಿರುವ ತಮ್ಮ ಪ್ರತಿಭಟನೆ ಆಲಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಅವರಿಗೆ ಲೋಕಾಯುಕ್ತ ಪೊಲೀಸರು 2025ರ ಫೆಬ್ರವರಿ 20ರಂದು ಕ್ಲೀನ್‌ಚಿಟ್‌ ನೀಡಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಕ್ತಾಯ ವರದಿ ಸಲ್ಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ನೀಡಿದ್ದನ್ನು ಆಧರಿಸಿ 2024ರ ಸೆಪ್ಟೆಂಬರ್‌ 25ರಂದು ಎಫ್‌ಐಆರ್‌ ದಾಖಲಿಸಲು ಮೈಸೂರು ಲೋಕಾಯುಕ್ತ ಪೊಲೀಸರು ಆದೇಶಿಸಿದ್ದರು. ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 120ಬಿ, 166, 403, 406, 420, 426, 465, 468, 340, 351 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 9 & 13, ಬೇನಾಮಿ ವರ್ಗಾವಣೆಗಳ ಕಾಯಿದೆ ಸೆಕ್ಷನ್‌ 3, 53 & 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಇದರ ಬೆನ್ನಿಗೇ, 2024ರ ಅಕ್ಟೋಬರ್‌ 1ರಂದು ಜಾರಿ ನಿರ್ದೇಶನಾಲಯವು ಐಪಿಸಿ ಸೆಕ್ಷನ್‌ಗಳಾದ 120ಬಿ, 420, ಭ್ರಷ್ಟಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 9 & 13ರ ಅಡಿ ಪ್ರಕರಣ ದಾಖಲಿಸಿತ್ತು. ಇದು ಪಿಎಂಎಲ್‌ ಕಾಯಿದೆ ಅಡಿ ಷೆಡ್ಯೂಲ್‌ ಅಪರಾಧವಾಗಿದೆ. ತದನಂತರ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಲೋಕಾಯುಕ್ತದ ಜೊತೆ ನವೆಂಬರ್‌ 30 ಮತ್ತು 2025ರ ಜನವರಿ 24ರಂದು ಹಂಚಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಲೋಕಾಯುಕ್ತ ಪೊಲೀಸ್‌ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು 2025ರ ಮಾರ್ಚ್‌ 26ರಂದು ಇ ಡಿಗೆ ನೀಡಲಾಗಿದೆ. ಕೆಸರೆ ಗ್ರಾಮದ ಸರ್ವೇ ನಂಬರ್‌ 464ರಲ್ಲಿನ ಆಕ್ಷೇಪಾರ್ಹವಾದ 3.16 ಎಕರೆ ಡಿನೋಟಿಫಿಕೇಶನ್‌ ಸಂಬಂಧದ ಅಕ್ರಮ ಕುರಿತು ಸಾಕ್ಷ್ಯವನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿದೆ. ಆದರೆ, ಅದನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ ಎಂದು ಇ ಡಿ ಆಕ್ಷೇಪಿಸಿದೆ.

ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಆಕ್ಷೇಪಾರ್ಹವಾದ ಭೂಮಿ ಖರೀದಿಸುವುದಕ್ಕೂ ಮುನ್ನ ಮೆಸರ್ಸ್‌ ಎಲ್‌ & ಟಿ ಲಿಮಿಟೆಡ್‌ ಅಭಿವೃದ್ಧಿ ಕೆಲಸ ನಡೆಸಿರುವ ಸಂಬಂಧದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿತ್ತು. 2001, 2002 & 2003ರಲ್ಲಿ ರಸ್ತೆ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ಯಾಟಲೈಟ್‌ ಚಿತ್ರಗಳನ್ನು ಅಡಕಗೊಳಿಸಲಾಗಿತ್ತು. ಅದನ್ನೂ ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ.

ಮುಡಾ ಅಭಿವೃದ್ಧಿಪಡಿಸಿರುವ ರಸ್ತೆಯನ್ನು ಬಳಸದೇ ಆಕ್ಷೇಪಾರ್ಹವಾದ ಭೂಮಿಗೆ ಅದರ ಮಾರಾಟಕ್ಕೂ ಮುನ್ನ ದೇವರಾಜು ಮತ್ತು ಮಲ್ಲಿಕಾರ್ಜುನಸ್ವಾಮಿ ಅವರು ಹೋಗಿರಲಿಕ್ಕಿಲ್ಲ. ಹೀಗಾಗಿ, ಮುಡಾ ಅಭಿವೃದ್ಧಿ ಕೆಲಸ ನಡೆಸಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂಬ ವಾದವನ್ನು ಒಪ್ಪಲಾಗದು. ಅದಾಗ್ಯೂ, ಮುಡಾ ವಿರುದ್ಧ ಆಕ್ಷೇಪ ಅಥವಾ ಪರಿಹಾರ ಪಡೆಯುವ ಕೆಲಸವನ್ನು ದೇವರಾಜು ಮತ್ತು ಮಲ್ಲಿಕಾರ್ಜುನ ಸ್ವಾಮಿ ಮಾಡಿಲ್ಲ ಎಂದು ವಿವರಿಸಲಾಗಿದೆ.

ಮುಡಾ ಅಭಿವೃದ್ಧಿ ಮಾಡುತ್ತಿರುವ ನಡುವೆಯೇ ಕಂದಾಯ ಇಲಾಖೆ ಅಂದರೆ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಭೂಮಿ ವರ್ಗಾವಣೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ ಕೋರಿಕೆಯ ಮೇರೆಗೆ ಇದನ್ನು ಮಾಡಲಾಗಿದೆ. ಆಕ್ಷೇಪಾರ್ಹವಾದ ಭೂಮಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಅದನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಇದನ್ನು ವರದಿಯಲ್ಲಿ ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿದೆ.

2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಆಕ್ಷೇಪಾರ್ಹವಾದ ಭೂಮಿ ಖರೀದಿಸಿದ್ದು, 2010ರಲ್ಲಿ ಅದನ್ನು ಪಾರ್ವತಿ ಅವರಿಗೆ ದಾನ ಮಾಡಲಾಗಿದೆ. ಆದರೆ, 2014ರವರೆಗೆ ಅಂದರೆ ಒಟ್ಟಾರೆ ಒಂದು ದಶಕದ ಕಾಲ ಮುಡಾದಿಂದ ಯಾವುದೇ ಪರಿಹಾರ ಕೋರಿಲ್ಲ. ಇದನ್ನೂ ಲೋಕಾಯುಕ್ತ ಪೊಲೀಸರು ತಮ್ಮ ವರದಿಯಲ್ಲಿ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.

ಪಿಎಂಎಲ್‌ ಕಾಯಿದೆ ಅಡಿ ನಿವೇಶನ ಹಂಚಿಕೆ ಸೇರಿರುವುದನ್ನೂ ಒಳಗೊಂಡು ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಸಿದ್ದರಾಮಯ್ಯ ಆಪ್ತರು ಅನಗತ್ಯ ಪ್ರಭಾವ ಬೀರಿದ್ದಾರೆ. ಈ ಸಂಬಂಧ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರ ಜೊತೆ ಹಂಚಿಕೊಂಡಿದ್ದು, ಅದನ್ನೂ ಲೋಕಾಯುಕ್ತರು ಪರಿಗಣಿಸಿಲ್ಲ ಎಂದು ದೂರಲಾಗಿದೆ.

ಮುಡಾದಲ್ಲಿ ಭಾರಿ ಹಗರಣ ನಡೆದಿದೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿದ್ದು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಅನುಮತಿಸುವಾಗ ಅದನ್ನೂ ಉಲ್ಲೇಖಿಸಿದ್ದಾರೆ. ಇದನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಸಂಗ್ರಹಿಸಲಾಗಿರುವ ಸಾಕ್ಷಿಗಳಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ಅಪಾರ ಪ್ರಮಾಣದ ಹಗರಣ ನಡೆದಿದ್ದು, ಇದರಲ್ಲಿ ನಗದು, ಚರ/ಸ್ಥಿರಾಸ್ತಿಯನ್ನು ನಿವೇಶನ ಹಂಚಿಕೆ ಮಾಡಲು ಮುಡಾ ಅಧಿಕಾರಿಗಳು ಪಡೆದಿದ್ದಾರೆ. ಇದನ್ನು ಲೋಕಾಯುಕ್ತ ಪೊಲೀಸರಿಗೆ ಒದಗಿಸಲಾಗಿದೆ. ಅದಾಗ್ಯೂ, ಯಾವುದೇ ಕ್ರಮವಾಗಿಲ್ಲ ಎಂದು ಇ ಡಿ ಹೇಳಿದೆ.

Also Read
ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರ ಅಂತಿಮ ವರದಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಸ್ನೇಹಮಯಿ ಕೃಷ್ಣ ಆಕ್ಷೇಪ

ಹೀಗಾಗಿ, ಪ್ರೆಡಿಕೇಟ್‌ ಅಪರಾಧದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಅವರಿಗೆ ಕ್ಲೀನ್‌ಚಿಟ್‌ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು ಒಪ್ಪಬಾರದು. ಸೂಕ್ತ ತನಿಖೆಗೆ ನಿರ್ದೇಶಿಸಬೇಕು ಎಂದು ಇ ಡಿ ಕೋರಿದೆ.

ಪ್ರತಿಭಟನಾ ಅರ್ಜಿ ಸಲ್ಲಿಸಲು ಹಕ್ಕಿದೆ: ದೂರುದಾರರು ಅಥವಾ ಸಂತ್ರಸ್ತರು/ಬಾಧಿತರು ಪ್ರತಿಭಟನಾ ಅರ್ಜಿ ಸಲ್ಲಿಸಬಹುದು ಎಂಬುದಕ್ಕೆ ಹಲವು ನ್ಯಾಯಾಂಗ ಆದೇಶಗಳಿವೆ. ಪಿಎಂಎಲ್‌ಎ ಅಡಿ ಇಡಿಯು ಪ್ರಾಸಿಕ್ಯೂಷನ್‌ ಸಂಸ್ಥೆಯಾಗಿರುವುದರಿಂದ ಇಲ್ಲಿ ಇ ಡಿಯನ್ನು ಬಾದಿತ ವ್ಯಕ್ತಿ ಎಂದು ಪರಿಗಣಿಸಬೇಕು ಎಂದು ಕೋರಲಾಗಿದೆ. ಆದ್ದರಿಂದ, ಪ್ರೆಡಿಕೇಟ್‌ ಅಪರಾಧದಲ್ಲಿ ಇಡಿಯು ಸಂತ್ರಸ್ತ/ಬಾಧಿತ ವ್ಯಕ್ತಿಯಾಗಿದೆ. ಹೀಗಾಗಿ, ಅಂತಿಮ ವರದಿಯ ಸಂಬಂಧ ಆದೇಶ ಮಾಡುವುದಕ್ಕೂ ಮುನ್ನ ಪ್ರತಿಭಟನೆ ಆಲಿಸಬೇಕು ಎಂದು ಕೋರಲಾಗಿದೆ.

Kannada Bar & Bench
kannada.barandbench.com