ದೀರ್ಘ ಕಾಲದ ಒಮ್ಮತದ ವ್ಯಭಿಚಾರಿಕ ಸಂಬಂಧ ಅತ್ಯಾಚಾರವಾಗದು: ಅಲಾಹಾಬಾದ್ ಹೈಕೋರ್ಟ್

ಮದುವೆಯಾಗುವುದಾಗಿ ನೀಡಿದ ಭರವಸೆ ಮೊದಲಿನಿಂದಲೂ ಸುಳ್ಳು ಎಂದು ಸಾಬೀತಾಗದಿದ್ದರೆ ಸಮ್ಮತಿಯ ಸಂಭೋಗ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
Allahabad High Court
Allahabad High Court
Published on

ಯಾವುದೇ ವಂಚನೆಯ ಅಂಶವಿಲ್ಲದೆ ದೀರ್ಘಾವಧಿಯ ಸಮ್ಮತಿಯ ವ್ಯಭಿಚಾರದ ದೈಹಿಕ ಸಂಬಂಧ ಐಪಿಸಿ ಸೆಕ್ಷನ್‌ 375ರ ಅಡಿ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಹೇಳಿದೆ [ಶ್ರೇಯ್ ಗುಪ್ತಾ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಮದುವೆಯಾಗುವುದಾಗಿ ನೀಡಿದ ಭರವಸೆ ಮೊದಲಿನಿಂದಲೂ ಸುಳ್ಳು ಎಂದು ಸಾಬೀತಾಗದಿದ್ದರೆ ಸಮ್ಮತಿಯ ಸಂಭೋಗ ತನ್ನಿಂತಾನೇ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರು ಹೇಳಿದ್ದಾರೆ.

Also Read
ಮಧ್ಯಂತರ ಜೀವನಾಂಶ ನೀಡದಿರಲು ಪತ್ನಿಯ ವ್ಯಭಿಚಾರ ಕುರಿತಾದ ಸಾಮಾಜಿಕ ಮಾಧ್ಯಮ ಸಾಕ್ಷಿ ಅವಲಂಬಿಸಬಹುದು: ಪಂಜಾಬ್ ಹೈಕೋರ್ಟ್

ಸಂಬಂಧದ ಆರಂಭದಿಂದಲೂ ಆರೋಪಿಯ ಕಡೆಯಿಂದ ಮದುವೆಯಾಗುವುದಾಗಿ ನೀಡಿದ ಭರವಸೆ ಸುಳ್ಳು ಎಂದು ಸಾಬೀತಾಗದ ಹೊರತು ಸಮ್ಮತಿಯ ಲೈಂಗಿಕ ಸಂಭೋಗ ತಪ್ಪು ಕಲ್ಪನೆಯಿಂದ ಆದದ್ದು ಎಂದು ಪರಿಗಣಿಸಲಾಗದು. ಸಂಬಂಧದ ಆರಂಭದಿಂದಲೂ ಆರೋಪಿ ನೀಡಿದ ಭರವಸೆಯಲ್ಲಿ ಸ್ವಲ್ಪವಾದರೂ ವಂಚನೆಯ ಅಂಶಗಳಿದ್ದವು ಎಂದು ನಿರೂಪಿತವಾಗದಿದ್ದರೆ ಅದನ್ನು ವಿವಾಹವಾಗುವುದಾಗಿ ನೀಡಿದ ಸುಳ್ಳು ಭರವಸೆ ಎಂದು ಪರಿಗಣಿಸಲಾಗದು ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

 ಆದ್ದರಿಂದ ಶ್ರೇಯ್ ಗುಪ್ತಾ ಎಂಬ ವ್ಯಕ್ತಿಯ ವಿರುದ್ಧ ವಿಧವೆಯೊಬ್ಬರು ಸಲ್ಲಿಸಿದ್ದ ಅತ್ಯಾಚಾರದ ಪ್ರಕರಣವನ್ನು ಅದು ರದ್ದುಗೊಳಿಸಿತು.

ಗಂಡನ ಮರಣದ ನಂತರ ಗುಪ್ತಾ ವಿವಾಹವಾಗುವುದಾಗಿ ನಂಬಿಸಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು. ತನ್ನನ್ನೇ ಮದುವೆಯಾಗುವುದಾಗಿ ಗುಪ್ತಾ ಪದೇ ಪದೇ ಭರವಸೆ ನೀಡಿದ್ದರೂ ಅದನ್ನು ಮುರಿದು ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅಲ್ಲದೆ ತಾವು ಸಲಿಗೆಯಿಂದ ಇರುವ ವೀಡಿಯೊವನ್ನು ಬಹಿರಂಗಪಡಿಸುವುದಾಗಿ ತಿಳಿಸಿ ಆತ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರೆ ಹೇಳಿದ್ದರು.

 ಆಕೆಯ ದೂರು ಆಧರಿಸಿ ವಿಚಾರಣಾ ನ್ಯಾಯಾಲಯ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 386 (ಸುಲಿಗೆ) ಅಡಿಯಲ್ಲಿ ಆರೋಪಿಯ ಕೃತ್ಯವನ್ನು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿತ್ತು.

ಆದರೆ ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಆರೋಪಪಟ್ಟಿ ಮತ್ತು ಇಡೀ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಆರೋಪಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಇದು ಸಹಮತದ ಸಂಬಂಧವಾಗಿತ್ತು. ಅಲ್ಲದೆ ಅತ್ಯಾಚಾರ ಮತ್ತು ಸುಲಿಗೆ ಆರೋಪಗಳು ಆಧಾರರಹಿತ ಎಂದು ಆತ ವಾದಿಸಿದರು.

Also Read
ಮಗುವನ್ನು ಸುಪರ್ದಿಗೆ ನೀಡದಿರಲು ವ್ಯಭಿಚಾರ ಕಾರಣವಾಗದು: ಬಾಂಬೆ ಹೈಕೋರ್ಟ್

ವಾಸ್ತವಾಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ ದೂರುದಾರೆಯ ಪತಿ ಜೀವಂತ ಇದ್ದಾಗಲೂ ದೂರುದಾರೆ ಮತ್ತು ಆರೋಪಿ ಸುಮಾರು 12ರಿಂದ 13 ವರ್ಷ ಒಮ್ಮತದ ಶಾರೀರಿಕ ಸಂಬಂಧ ಹೊಂದಿದ್ದರು ಎಂದಿತು. ಅಲ್ಲದೆ ದೂರುದಾರೆ ತನಗಿಂತಲೂ ಕಿರಿಯನಾದ ಮತ್ತು ಮೃತ ಪತಿಯ ಬಳಿ ಉದ್ಯೋಗಿಯಾಗಿದ್ದ ಆರೋಪಿ ಮೇಲೆ ಅನಗತ್ಯ ಪ್ರಭಾವ ಬೀರಿರುವುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಆರೋಪಗಳು ಅತ್ಯಾಚಾರ ಅಥವಾ ಸುಲಿಗೆಗೆ ಪೂರಕವಾದ ಕಾನೂನು ಮಾನದಂಡಗಳನ್ನು ಪೂರೈಸುವುದಿಲ್ಲ ಎಂದ ನ್ಯಾಯಾಲಯ ಶ್ರೇಯ್ ಗುಪ್ತಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತು,

Kannada Bar & Bench
kannada.barandbench.com