
ಒಂದು ಕಂಪೆನಿಯ ಉದ್ಯೋಗಿಯೊಬ್ಬ ಆ ಕಂಪೆನಿಯ ಪ್ರತಿಸ್ಪರ್ಧಿ ಕಂಪೆನಿಯಲ್ಲಿ ಬೇರೆ ಉದ್ಯೋಗ ಹುಡುಕಿದರೆ ಅದು ಅಪ್ರಾಮಾಣಿಕ ಅಥವಾ ಅನೈತಿಕವಲ್ಲದ ಕಾರಣ ನೈತಿಕ ಅಧಃಪತನ ಎನಿಸಿಕೊಳ್ಳುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಮೆಸರ್ಸ್ ಎಕ್ಸ್‌ಪ್ರೊ ಇಂಡಿಯಾ ಲಿಮಿಟೆಡ್ ಮತ್ತು ಪ. ಬಂಗಾಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತನ್ನ ಮಾಜಿ ಉದ್ಯೋಗಿಗಳಲ್ಲಿ ಒಬ್ಬರಿಗೆ ಗ್ರಾಚ್ಯುಟಿ ಪಾವತಿಸಬೇಕು ಎಂದು ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರ ನೀಡಿದ್ದ ಆದೇಶ ಪ್ರಶ್ನಿಸಿ ಮೆಸರ್ಸ್ ಎಕ್ಸ್‌ಪ್ರೋ ಇಂಡಿಯಾ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಂಪಾ ದತ್ (ಪಾಲ್) ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಸ್ಪರ್ಧಿ ಕಂಪೆನಿಯಲ್ಲಿ (ಈ ಪ್ರಕರಣದಲ್ಲಿ ಹಾಗೆ ಮಾಡಿರುವುದು ಸಾಬೀತಾಗದೇ ಇದ್ದರೂ) ಉತ್ತಮ ಸವಲತ್ತು ಮತ್ತು ಸೌಲಭ್ಯ ಸಿಕ್ಕರೆ ಬೇರೆ ಉದ್ಯೋಗ ಹುಡುಕುವುದು ಉದ್ಯೋಗಿಯ ಮೂಲಭೂತ ಹಕ್ಕಾಗಿದ್ದು ಪ್ರಾಮಾಣಿಕತೆ, ನಮ್ರತೆ ಅಥವಾ ನೈತಿಕತೆಗೆ ವಿರುದ್ಧವಲ್ಲದ ಕಾರಣ ಅದು ನೈತಿಕ ಅಧಃಪತನ ಎನಿಸಿಕೊಳ್ಳುವುದಿಲ್ಲ ಎಂದು ಪೀಠ ತೀರ್ಪು ನೀಡಿದೆ.
ತನ್ನ ಪ್ರತಿಸ್ಪರ್ಧಿ ಕಂಪೆನಿಗೆ ಸೇರಿದ ವ್ಯಕ್ತಿಗಳೊಂದಿಗೆ ಖಾಸಗಿ ಸಭೆಯಲ್ಲಿ ಪಾಲ್ಗೊಂಡು ತನ್ನ ಉತ್ಪಾದನಾ ಪ್ರಕ್ರಿಯೆಗಳ ಬಗ್ಗೆ ಗೌಪ್ಯ ಮಾಹಿತಿ ಹಂಚಿಕೊಂಡು ಉದ್ಯೋಗಿ ಒಪ್ಪಂದದ ನಿಯಮ ಉಲ್ಲಂಘಿಸಿದ್ದ. ಹೀಗಾಗಿ ತಾನು ವಿಚಾರಣೆ ನಡೆಸಿದ್ದೆ. ಬಳಿಕ ಉದ್ಯೋಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ನಂತರ ತಾನು ರಾಜೀನಾಮೆ ತಿರಸ್ಕರಿಸಿದ್ದೆ ಎಂದು ಎಕ್ಸ್‌ಪ್ರೊ ಇಂಡಿಯಾ ಹೇಳಿತ್ತು.
ವಿಚಾರಣಾಧಿಕಾರಿ ಸಲ್ಲಿಸಿದ ವರದಿ ಪ್ರಕಾರ ಉದ್ಯೋಗಿ ಪ್ರತಿಸ್ಪರ್ಧಿ ಸಂಸ್ಥೆಯೊಂದಿಗೆ ಹಲವು ಸಭೆಗಳನ್ನು ನಡೆಸಿ ಉತ್ಪಾದನಾ ವ್ಯವಸ್ಥೆ ಸ್ಥಾಒಪನೆಗೆ ಸಹಾಯ ಮಾಡಲು ತನ್ನ ಬೇರೆ ಉದ್ಯೋಗಿಗಳನ್ನು ಸಂಪರ್ಕಿಸುವ ಮೂಲಕ ಮಧ್ಯವರ್ತಿಯಾಗಿಐೂ ಕಾರ್ಯ ನಿರ್ವಹಿಸುವ ಮೂಲಕ ಆತ ನೈತಿಕ ಅಧಃಪತನಕ್ಕೆ ಕಾರಣವಾಗುವ ದುಷ್ಕೃತ್ಯದಲ್ಲಿ ತೊಡಗಿದ್ದರು. ಹೀಗಾಗಿ ತಾನು ಆತನನ್ನು ಸೇವೆಯಿಂದ ವಜಾಗೊಳಿಸಿದ್ದು . 1972 ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6) ರ ಅಡಿಯಲ್ಲಿ ಅವರ ಗ್ರಾಚ್ಯುಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿತು.
ಆದರೆ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರ ಆತನಿಗೆ ಗ್ರಾಚ್ಯುಟಿ ಪಾವತಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಎಕ್ಸಪ್ರೋ, ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣಾಧಿಕಾರಿಯ ವರದಿ ಪರಿಶೀಲಿಸಿದ ಹೈಕೋರ್ಟ್, ಕಂಪೆನಿ ತನ್ನ ಆರೋಪ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ಅಥವಾ ಕರೆ ದಾಖಲೆಗಳನ್ನು ಒದಗಿಸಿಲ್ಲ. ಉದ್ಯೋಗಿ ಪ್ರತಿಸ್ಪರ್ಧಿ ಕಂಪೆನಿಯೊಂದಿಗೆ ನಂಟು ಹೊಂದಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಒದಗಿಸಿಲ್ಲ. ಹೀಗಾಗಿ ತನಿಖಾಧಿಕಾರಿಯ ನಡೆ ಅಧಿಕಾರದ ದುರುಪಯೋಗ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
ಈ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿದ ಅದು ಎರಡು ತಿಂಗಳೊಳಗೆ ಉದ್ಯೋಗಿಗೆ ಗ್ರಾಚ್ಯುಟಿ ಮತ್ತು ಬಡ್ಡಿಯನ್ನು ಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಿತು. ಉದ್ಯೋಗದಾತರಿಗೆ ಸೇರಿದ ಆಸ್ತಿಗೆ ಉದ್ಯೋಗಿ ಹಾನಿ ಅಥವಾ ನಷ್ಟ ಉಂಟು ಮಾಡಿದ್ದಾನೆ ಅಥವಾ ಗಲಭೆ, ಅರಾಜಕತೆ ಅಥವಾ ನೈತಿಕ ಅಧಃಪತನಕ್ಕೆ ಸಂಬಂಧಿಸಿದ ಯಾವುದೇ ಕ್ರಿಯೆಯೂ ಪ್ರಕರಣದಲ್ಲಿ ಸಾಬೀತಾಗಿಲ್ಲ ಎಂದು ನ್ಯಾಯಾಲಯ ನುಡಿಯಿತು.
[ತೀರ್ಪಿನ ಪ್ರತಿ]