ಐಷಾರಾಮಿ ಸೆರೆವಾಸ ಪ್ರಕರಣ: ಶಶಿಕಲಾ, ಇಳವರಸಿಗೆ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದ ವಿಶೇಷ ನ್ಯಾಯಾಲಯ

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಆದೇಶಿಸಿತ್ತು. ಇದಕ್ಕೆ ಗೈರಾದ ಹಿನ್ನೆಲೆಯಲ್ಲಿ ಶಶಿಕಲಾ ಮತ್ತು ಇಳವರಸಿ ವಿರುದ್ಧ ಆದೇಶ ಮಾಡಲಾಗಿದೆ.
Bengaluru City Civil court
Bengaluru City Civil court
Published on

ಐಷಾರಾಮಿ ಸೆರೆವಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಆಪ್ತೆ ವಿ ಕೆ ಶಶಿಕಲಾ ಹಾಗೂ ಇಳವರಸಿ ಅವರ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ನಿಗದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಆದೇಶಿಸಿತ್ತು. ಇದಕ್ಕೆ ಗೈರಾದ ಹಿನ್ನೆಲೆಯಲ್ಲಿ ಶಶಿಕಲಾ ಮತ್ತು ಇಳವರಸಿ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಧಾಕೃಷ್ಣ ಅವರು ಆದೇಶಿಸಿದ್ದಾರೆ.

“ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಬಿ ಸುರೇಶ್‌ ಅವರು ಹಾಜರಾಗಿದ್ದಾರೆ. ಶಶಿಕಲಾ ಮತ್ತು ಇಳವರಸಿ ಅವರು ಗೈರಾಗಿದ್ದು, ಅವರ ವಿರುದ್ಧ ಜಾಮೀನುರಹಿತ ವಾರೆಂಟ್‌ ಹೊರಡಿಸಬೇಕು. ಜಾಮೀನು ನೀಡುವ ಭದ್ರತೆ ನೀಡಿರುವವರಿಗೂ ನೋಟಿಸ್‌ ಜಾರಿ ಮಾಡಬೇಕು” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್‌ 5ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಮತ್ತು ಶಶಿಕಲಾ ಸೇರಿದಂತೆ ನಾಲ್ವರು ದೋಷಿಗಳು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಹೀಗಾಗಿ, ಶಶಿಕಲಾ ಅವರು 2017ರ ಫೆಬ್ರುವರಿ 15ರಂದು ಪೊಲೀಸರಿಗೆ ಶರಣಾಗಿ, 2020ರ ಜನವರಿ 21ರ ವರೆಗೆ ಜೈಲು ಶಿಕ್ಷೆ ಪೂರೈಸಿದ್ದರು.

Also Read
ಐಷಾರಾಮಿ ಸೆರೆವಾಸ: ಪ್ರಕರಣದ ವಜಾ ಕೋರಿ ಹೈಕೋರ್ಟ್‌ ಕದ ತಟ್ಟಿದ ವಿ ಕೆ ಶಶಿಕಲಾ, ಇಳವರಸಿ

ಈ ಸಂದರ್ಭದಲ್ಲಿ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಅಪರಾಧಿಯಾಗಿರುವ ಶಶಿಕಲಾ ಮತ್ತು ಇತರರಿಗೆ ಅಧಿಕಾರಿಗಳ ನೆರವಿನಿಂದ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಇದಲ್ಲಿ ಬಂಧೀಖಾನೆಯ ಡಿಜಿಪಿ ಸತ್ಯನಾರಾಯಣ ರಾವ್‌ ಅವರ ಪಾತ್ರವಿದೆ ಎಂದು ಅಂದಿನ ಡಿಐಜಿಯಾಗಿದ್ದ ಡಿ ರೂಪಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಅವರ ನೇತೃತ್ವದ ಸಮಿತಿಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಮಧ್ಯೆ, ಸರ್ಕಾರಿ ಅಧಿಕಾರಿಗಳಾದ ಕೃಷ್ಣ ಕುಮಾರ್‌, ಡಾ. ಆರ್‌ ಅನಿತಾ, ಬಿ ಸುರೇಶ್‌, ಗಜರಾಜ ಮಕನೂರು, ತಮಿಳುನಾಡಿನ ವಿ ಕೆ ಶಶಿಕಲಾ ಮತ್ತು ಇಳವರಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 109, 465, 468, 471, 120ಬಿ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಸಿ), 13(2) ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com