ಸೇನಾಧಿಕಾರಿ ಸೋಫಿಯಾ ಕುರೇಷಿ ನಿಂದನೆ: ಮಧ್ಯಪ್ರದೇಶ ಬಿಜೆಪಿ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

ಇಂದು ಸಂಜೆಯೊಳಗೆ ಎಫ್ಐಆರ್ ದಾಖಲಿಸಬೇಕು, ಇಲ್ಲದಿದ್ದರೆ ನಾಳೆ ತಾನು ಡಿಜಿ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.
Colonel Sofia Qureshi
Colonel Sofia Qureshi
Published on

ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಕುರೇಷಿ ಅವರನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವ ಕುವರ್‌ ವಿಜಯ್ ಶಾ ನೀಡಿದ ಹೇಳಿಕೆ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ.

ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ಅನುರಾಧಾ ಶುಕ್ಲಾ ಅವರಿದ್ದ ಪೀಠ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಶಾ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ) ನಿರ್ದೇಶನ ನೀಡಿತು.

Also Read
ಕರ್ನಲ್ ಸೋಫಿಯಾ ಕುರೇಷಿ ಅವರ ಸಾಧನೆಗಳನ್ನು ಕೊಂಡಾಡಿದ್ದ ಸುಪ್ರೀಂ ಕೋರ್ಟ್

ಇಂದು ಸಂಜೆಯೊಳಗೆ ಎಫ್ಐಆರ್ ದಾಖಲಿಸಬೇಕು, ಇಲ್ಲದಿದ್ದರೆ ನಾಳೆ ಡಿಜಿ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.

 “ಯಾವುದೇ ನೆಪಗಳನ್ನು ನಾವು ಕೇಳುವುದಿಲ್ಲ. (ಎಫ್‌ಐಆರ್‌) ದಾಖಲಾಗುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಸರ್ಕಾರ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ ಎಂದು ಪ್ರಮಾಣ ಮಾಡಿ ಹೇಳಬಲ್ಲೆ, ಈ ವಿಚಾರದಲ್ಲಿ ನಾವು ನಿರ್ಲಕ್ಷ್ಯದಿಂದ ಇರಲು ಸಾಧ್ಯವಿಲ್ಲ” ಎಂದು ನ್ಯಾ. ಶ್ರೀಧರನ್‌ ಅವರು ಅಡ್ವೊಕೇಟ್‌ ಜನರಲ್‌ ಪ್ರಶಾಂತ್‌ ಸಿಂಗ್‌ ಅವರನ್ನು ಉದ್ದೇಶಿಸಿ ಹೇಳಿದರು.

ಕರ್ನಲ್‌ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಕರೆದು ಸಚಿವ ಶಾ ಕ್ಷಮಿಸಲಾಗದಂತಹ ಹೇಳಿಕೆ ನೀಡಿದ್ದಾರೆ. ದೇಶದ ಸಶಸ್ತ್ರ ಪಡೆಗಳನ್ನು ಗುರಿಯಾಗಿಸಿಕೊಂಡಿರುವುದರಿಂದ ಅವರ ಹೇಳಿಕೆಗಳು ಅಪಾಯಕಾರಿ. ಭಾರತೀಯ ನ್ಯಾಯ ಸಂಹಿತೆ 2023 ರ ವಿವಿಧ ಸೆಕ್ಷನ್‌ಗಳನ್ನು ಅದರಲ್ಲಿಯೂ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕ್ರಮಗಳನ್ನು ಅಪರಾಧೀಕರಿಸುವ ಬಿಎನ್‌ಎಸ್‌ನ ಸೆಕ್ಷನ್ 152ನ್ನು  ಶಾ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ನುಡಿಯಿತು.

ಅಲ್ಲದೆ ಸೋಫಿಯಾ ಅವರು ಮುಸ್ಲಿಂ ಧರ್ಮೀಯರಾಗಿರುವುದರಿಂ ಶಾ ಅವರ ಹೇಳಿಕೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದನ್ನು ಅಪರಾಧೀಕರಿಸುವ ಬಿಎನ್‌ಎಸ್‌ನ ಸೆಕ್ಷನ್ 196 ಅಡಿಯೂ ಅಪರಾಧ ಕೃತ್ಯವಾಗುತ್ತದೆ. ಅದರಂತೆ ಅವರ ವಿರುದ್ಧ ಕೂಡಲೇ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಪೀಠ ಆದೇಶಿಸಿತು.

Also Read
ಆಪರೇಷನ್ ಸಿಂಧೂರ್ ವಾಣಿಜ್ಯ ಚಿಹ್ನೆ ಕೋರಿಕೆ: ಅರ್ಜಿ ಹಿಂಪಡೆದ ರಿಲಯನ್ಸ್

ಆದೇಶ ಪಾಲಿಸಲು ಅಡ್ವೊಕೇಟ್‌ ಜನರಲ್‌ ಸಿಂಗ್‌ ಅವರು ಹೆಚ್ಚಿನ ಸಮಯಾವಕಾಶ ಕೋರಿದರು. ಆದರೆ ನಾಳೆಯೊಳಗೆ ಆದೇಶ ಪಾಲಿಸದಿದ್ದರೆ ಅನೇಕ ಸಮಸ್ಯೆಗಳು ತಲೆದೋರುತ್ತವೆ ಎಂದು ನ್ಯಾ. ಶ್ರೀಧರನ್‌ ಎಚ್ಚರಿಕೆ ನೀಡಿದರು.

ಸಚಿವರ ಹೇಳಿಕೆಯನ್ನು ತಿರುಚಿರುವ ಸಾಧ್ಯತೆ ಇರುವುದರಿಂದ ತನಿಖಾ ಸಂಸ್ಥೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಎಜಿ ಹೇಳಲು ಮುಂದಾದರು. ಆಗಲೂ ತೃಪ್ತವಾಗದ ನ್ಯಾಯಾಲಯ ಎಫ್‌ಐಆರ್‌ ನೋಂದಾಯಿಸಿ. ಇಂತಹ ಪ್ರಕರಣಗಳಲ್ಲಿ ನಾಳೆ ಎಂಬುದು ಇರುವುದಿಲ್ಲ ಎಂದಿತು. ಎಜಿ ಅವರು ನ್ಯಾಯಾಲಯದ ಮನವೊಲಿಸಲು ಯತ್ನಿಸಿದರಾದರೂ ಅದು ಫಲ ನೀಡಲಿಲ್ಲ. ನಾಳೆ (ಗುರುವಾರ) ಬೆಳಿಗ್ಗೆ ಪ್ರಕರಣದ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com