ರಜನಿ ಅಭಿನಯದ ಕೂಲಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಿದ್ದಕ್ಕೆ ಆಕ್ಷೇಪ: ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

'ಶಿವ' (1989) ಚಿತ್ರದ ಬಳಿಕ ಮೂರು ದಶಕಗಳಲ್ಲಿ 'ಎ' ಪ್ರಮಾಣಪತ್ರ ಪಡೆದ ರಜನಿಕಾಂತ್ ಅವರ ಮೊದಲ ಚಿತ್ರ ಇದಾಗಿರುವುದರಿಂದ ಪ್ರಕರಣ ಮಹತ್ವ ಪಡೆದುಕೊಂಡಿದೆ.
Coolie poster, Madras High Court
Coolie poster, Madras High Court
Published on

ನಟ ರಜನಿಕಾಂತ್ ಅವರ ಇತ್ತೀಚಿನ ʼಕೂಲಿʼ ಚಿತ್ರಕ್ಕೆ ನೀಡಲಾದ 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ಪ್ರಶ್ನಿಸಿ ಚಿತ್ರ ನಿರ್ಮಾಣ  ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇಂದು ವಜಾಗೊಳಿಸಿದೆ.  

ಬೆಳಿಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಟಿ ವಿ ತಮಿಳಸೆಲ್ವಿ  ಅರ್ಜಿಗೆ ಯಾವುದೇ ಅರ್ಹತೆ ಇಲ್ಲ ಎಂದರು.

Also Read
ಆದಿತ್ಯನಾಥ್‌ ಕುರಿತ ಚಿತ್ರ: ಯಾವುದೇ ಬದಲಾವಣೆ ಇಲ್ಲದೆ 'ಅಜಯ್' ಸಿನಿಮಾ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ

ಕಳೆದ ಮೂರು ದಶಕಗಳಲ್ಲಿ 'ಎ' ಪ್ರಮಾಣಪತ್ರವನ್ನು ಪಡೆದ ಏಕೈಕ ರಜನಿಕಾಂತ್ ಚಿತ್ರ ಇದಾಗಿರುವುದರಿಂದ ಈ ಪ್ರಕರಣವು ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೂ ಮೊದಲು 'ಎʼ ಪ್ರಮಾಣಪತ್ರ ಪಡೆದಿದ್ದ ರಜನಿ ಅಭಿನಯದ ಕೊನೆಯ ಚಿತ್ರ 'ಶಿವ' (1989) ಆಗಿತ್ತು. ಪ್ರಮುಖವಾಗಿ ಸಾಮೂಹಿಕ ಮನರಂಜನಾತ್ಮಕ ಸಿನಿಮಾಗಳಿಗೆ 'ಎ' ರೇಟಿಂಗ್ ನೀಡುವುದು ಕೌಟುಂಬಿಕ ಪ್ರೇಕ್ಷಕರನ್ನು ನಿರ್ಬಂಧಿಸುತ್ತದೆ ಎಂದು ನಿರ್ಮಾಪಕರು ವಾದಿಸಿದ್ದರು.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್‌ ಸುಂದರೇಶನ್ ಅವರು ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡುವ ನಿರ್ಧಾರ ಸಮರ್ಥಿಸಿಕೊಂಡರು.

'ಕೂಲಿ' ಚಿತ್ರದಲ್ಲಿ ವಿವಿಧ ಹಿಂಸಾತ್ಮಕ ಮತ್ತು ಅತಿ ಬೆದರಿಕೆಯ ದೃಶ್ಯಗಳಿದ್ದು ಆಗಾಗ್ಗೆ ಧೂಮಪಾನ ಮತ್ತು ಮದ್ಯಪಾನದ ಚಿತ್ರಣಗಳಿವೆ ಇವು ಮಕ್ಕಳು ವೀಕ್ಷಿಸಲು ಸೂಕ್ತವಲ್ಲ ಎಂದು ಅವರು ವಾದಿಸಿದರು.

ಸಿಬಿಎಫ್‌ಸಿಯ ಪರಿಶೀಲನೆ ಮತ್ತು ಪರಿಷ್ಕರಣಾ ಸಮಿತಿಗಳೆರಡೂ ಚಿತ್ರಕ್ಕೆ 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡುವಂತೆ ಸೂಚಿಸಿವೆ. ಆಯ್ದ ದೃಶ್ಯಗಳನ್ನು ಕತ್ತರಿಸಲು ಚಿತ್ರ ನಿರ್ಮಾಪಕರು ಒಪ್ಪಿದರೆ ಯು/ಎ ಪ್ರಮಾಣಪತ್ರ (ಪೋಷಕರ ಮಾರ್ಗದರ್ಶನದೊಂದಿಗೆ ಅನಿರ್ಬಂಧಿತ ವೀಕ್ಷಣೆ) ನೀಡಲು ಸಿಬಿಎಫ್‌ಸಿ ಮುಂದಾಗಿತ್ತು. ಆದರೆ, ಚಿತ್ರದ ಯಾವುದೇ ದೃಶ್ಯಗಳನ್ನು ಕತ್ತರಿಸಲು ತಾವು ಸಿದ್ಧರಿಲ್ಲ ಎಂದು ನಿರ್ಮಾಪಕರು ತಿಳಿಸಿದರು. ಆಗಸ್ಟ್ 4ರಂದೇ ಚಿತ್ರಕ್ಕೆ ಪ್ರಮಾಣಪತ್ರ ನೀಡಿದ್ದರೂ ಆಗಸ್ಟ್ 18ರಂದು ಅದನ್ನು ಪ್ರಶ್ನಿಸಲಾಯಿತು ಎಂದು ಅವರು ವಿವರಿಸಿದರು. 

ಸನ್ ಪಿಕ್ಚರ್ಸ್ ಪರ ವಕೀಲರು ಈ ವಾದಗಳನ್ನು ಬಲವಾಗಿ ವಿರೋಧಿಸಿದರು. 'ಎ' ಪ್ರಮಾಣಪತ್ರ ನೀಡಿದರೆ ಕುಟುಂಬಗಳು ಚಿತ್ರ ನೋಡದಂತೆ ತಡೆಯುತ್ತದೆ. ಇದರಿಂದಾಗಿ ಟಿಕೆಟ್ ಮಾರಾಟ ಮತ್ತು ಪ್ರೇಕ್ಷಕರ ಸಂಖ್ಯೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾದಿಸಲಾಯಿತು.

Also Read
ಚಿತ್ರ ಶೀರ್ಷಿಕೆಯನ್ನು ಚಲನಚಿತ್ರ ಸಂಘದಲ್ಲಿ ನೋಂದಾಯಿಸಿದ್ದರೂ ಅದಕ್ಕೆ ಹಕ್ಕುಸ್ವಾಮ್ಯ ರಕ್ಷಣೆ ಇರದು: ಬಾಂಬೆ ಹೈಕೋರ್ಟ್

ಪ್ರಮಾಣಪತ್ರ ನೀಡಿಕೆ ಮನಸೋ ಇಚ್ಛೆಯಿಂದ ಕೂಡಿದ್ದು ಅಸಮಂಜಸವಾಗಿದೆ ಎಂದು ನಿರ್ಮಾಪಕರು ವಾದಿಸಿದರು  ಕೆಜಿಎಫ್ ರೀತಿಯ ಯಥೇಚ್ಛ ಹೊಡೆದಾಟ- ಬಡಿದಾಟಗಳಿರುವ ಚಿತ್ರಗಳಿಗೇ ಯು/ಎ ಪ್ರಮಾಣಪತ್ರ ನೀಡಲಾಗಿದೆ ಎಂದು ಅವರು ಹೇಳಿದರು.

ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದದ ಹೊರತಾಗಿಯೂ, ಕೂಲಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದು ಮೊದಲ ವಾರದಲ್ಲಿ ವಿಶ್ವಾದ್ಯಂತ ಅಂದಾಜು ₹400 ಕೋಟಿ ಗಳಿಸಿದೆ. ಸನ್ ನೆಟ್‌ವರ್ಕ್ ಪರ ವಕೀಲರಾದ ಎಂ ಸ್ನೇಹಾ, ವಿಮಲ್ ಮೋಹನ್ ಹಾಗೂ ದಿನೇಶ್ ವಾದ ಮಂಡಿಸಿದರು.

Kannada Bar & Bench
kannada.barandbench.com