ಮಾರುಕಟ್ಟೆ ನಿಗಮದ ಮೇಲೆ ಇ ಡಿ ದಾಳಿ: ತಮಿಳುನಾಡು ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಮಾರ್ಚ್ 6ರಿಂದ 8ರವರೆಗೆ ತಮಿಳುನಾಡು ಮಾರುಕಟ್ಟೆ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಸಲಾದ ಇ ಡಿ ದಾಳಿ ಪ್ರಶ್ನಿಸಿ ಟಿಎಎಸ್ಎಂಎಸಿ ಮತ್ತು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದ್ದವು.
TASMAC
TASMAC
Published on

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟಿಎಎಸ್‌ಎಂಎಸಿ) ಆವರಣದಲ್ಲಿ ಮಾರ್ಚ್ 6ರಿಂದ 8ರವರೆಗೆ ಜಾರಿ ನಿರ್ದೇಶನಾಲಯ ನಡೆಸಿದ್ದ ದಾಳಿಯ ಸಿಂಧುತ್ವವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಇ ಡಿ ದಾಳಿಗಳ ಕಾನೂನುಬದ್ಧತೆ ಪ್ರಶ್ನಿಸಿ ಟಿಎಎಸ್ಎಂಎಸಿ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಕೆ ರಾಜಶೇಖರ್ ಅವರಿದ್ದ ಪೀಠ ವಜಾಗೊಳಿಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ಮುಂದುವರೆಸಲು ಇ ಡಿ ಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.

Also Read
ಇ ಡಿ ವರ್ಸಸ್ ಮಾರುಕಟ್ಟೆ ನಿಗಮ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರ್ಗಾವಣೆ ಅರ್ಜಿ ಹಿಂಪಡೆದ ತಮಿಳುನಾಡು

ಜಾರಿ ನಿರ್ದೇಶನಾಲಯದ ಶೋಧ ರಾಜಕೀಯ ಪ್ರೇರಿತ ಎಂಬ ರಾಜ್ಯ ಸರ್ಕಾರ ಮತ್ತು ಟಿಎಎಸ್ಎಂಎಸಿ ವಾದ ತಿರಸ್ಕರಿಸಿದ ನ್ಯಾಯಾಲಯ ಅಂತಹ ಪ್ರಕರಣ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

"ರಾಜಕೀಯ ಶಕ್ತಿಗಳು ಆಟವಾಡುತ್ತಿವೆಯೇ ಅಥವಾ ರಾಜಕೀಯ ಆಟದಲ್ಲಿ ಭಾಗಿಯಾಗಿವೆಯೇ ಎಂದು ನ್ಯಾಯಾಲಯವು ಪರಿಶೀಲಿಸಬಹುದೇ? ಖಂಡಿತವಾಗಿಯೂ ಇಲ್ಲ. ಅದು ನ್ಯಾಯಾಲಯದ ಕೆಲಸವಲ್ಲ. ಇದನ್ನು ನಿರ್ಧರಿಸುವ ತಾಣ ನ್ಯಾಯಾಲಯಗಳೇ ?" ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ, ಎದುರಾಳಿ ಪಕ್ಷ ಅದರ ವಿರುದ್ಧ ಹಲವಾರು ಆರೋಪಗಳನ್ನು ಮಾಡಬಹುದು ಎಂದು ಪೀಠವು ಹೇಳಿದೆ. ಆದರೂ, ನ್ಯಾಯಾಲಯ ಅಂತಹ ಆರೋಪ ಪರಿಶೀಲಿಸುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಗೊಳಿಸಿದೆ.

ಇದೇ ವೇಳೆ ಪೀಠವು, ನ್ಯಾಯಾಲಯಗಳ ಇತಿಮಿತಿ ಹಾಗೂ ರಾಜಕೀಯ ವಾದಗಳನ್ನು ಎಲ್ಲಿ ಮಾಡಬೇಕು ಎನ್ನುವ ಸೂಕ್ಷ್ಮದ ಬಗ್ಗೆಯೂ ಹೇಳಿತು. "ಯಾವುದೇ ಪಕ್ಷದ ವಿಚಾರವಿರಲಿ, ನ್ಯಾಯಾಲಯವು ತನ್ನ ಮುಂದೆ ಇರುವ ದಾಖಲೆಗಳನ್ನು, ಘಟಿಸಿರುವ ಅಪರಾಧವನ್ನು ಮಾತ್ರವೇ ನೋಡಬಹುದು. ಅದರ ಅನುಸಾರ ನ್ಯಾಯವನ್ನು ದೊರಕಿಸಿಕೊಡುವುದನ್ನು ನ್ಯಾಯಾಲಯ ಖಾತರಿಪಡಿಸುತ್ತದೆ. ಇನ್ನು ಇಲ್ಲಿ ಮಾಡಲಾಗಿರುವ ವಾದಗಳನ್ನು ಮಂಡಿಸಲು ಸೂಕ್ತವಾದ ಸ್ಥಳವೆಂದರೆ ಅದು ಈ ದೇಶದ ಜನತೆ. ಅವರು ಅಧಿಕಾರದಲ್ಲಿರುವ ವ್ಯಕ್ತಿಗಳ ಕ್ರಿಯೆಗಳಿಗೆ ಸಾಕ್ಷಿಯಾಗಿರುತ್ತಾರೆ. ಹಾಗಾಗಿ ರಾಜಕೀಯ ವಿಚಾರವನ್ನು ನಿರ್ಧರಿಸಲು ಅತ್ಯುತ್ತಮ ನ್ಯಾಯಾಧೀಶರು ನಮ್ಮ ಈ ಮಹಾನ್ ರಾಷ್ಟ್ರದ ಜನರಾಗಿರುತ್ತಾರೆ. ಅಂತಿಮವಾಗಿ ಈ ದೇಶದ 'ಜನರ ಇಚ್ಛೆ' ಇಲ್ಲಿ ಬಹುಮುಖ್ಯವಾಗಿರುತ್ತದೆ" ಎಂದಿತು.

ಹಣ ವರ್ಗಾವಣೆ ಅಪರಾಧವು ರಾಷ್ಟ್ರದ ವಿರುದ್ಧದ ಅಪರಾಧವಾಗಿದ್ದು, ಕೆಲವು ಅನಾನುಕೂಲತೆಗಳನ್ನಷ್ಟೇ ಆಧರಿಸಿ ದಾಳಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಟಿಎಎಸ್ಎಂಎಸಿ ಅಧಿಕಾರಿಗಳು ಮದ್ಯದ ಬಾಟಲಿಗಳ ಬೆಲೆ ಏರಿಕೆ, ಟೆಂಡರ್ ತಿರುಚುವಿಕೆ ಮತ್ತು ಲಂಚ ಸ್ವೀಕಾರದಲ್ಲಿ ತೊಡಗಿದ ಪರಿಣಾಮ ₹1,000 ಕೋಟಿಗೂ ಹೆಚ್ಚಿನ ಆರ್ಥಿಕ ಅಕ್ರಮ ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾರ್ಚ್ 6 ರಿಂದ ಮಾರ್ಚ್ 8 ರವರೆಗೆ ಟಿಎಎಸ್ಎಂಎಸಿ ಪ್ರಧಾನ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಹಿರಿಯ ವಕೀಲರಾದ ವಿಕ್ರಮ್ ಚೌಧರಿ ಮತ್ತು ವಿಕಾಸ್ ಸಿಂಗ್ ಟಿಎಎಸ್ಎಂಎಸಿ ಪರ ವಾದ ಮಂಡಿಸಿದರೆ, ರಾಜ್ಯವನ್ನು ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಪ್ರತಿನಿಧಿಸಿದರು. ಇ ಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಅವರು ವಾದ ಮಂಡಿಸಿದರು.

Also Read
ಮದ್ರಾಸ್ ಹೈಕೋರ್ಟ್‌ನಿಂದ ತಮಿಳುನಾಡು ಮಾರುಕಟ್ಟೆ ನಿಗಮ ಪ್ರಕರಣ ವರ್ಗಾವಣೆ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಇದೇ ಪ್ರಕರಣದ ವಿಚಾರಣೆ ನಡೆಸಿ ಇ ಡಿ ನಡೆಯನ್ನು ಟೀಕಿಸಿದ್ದ ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಎನ್ ಸೆಂಥಿಲ್‌ಕುಮಾರ್ ಅವರನ್ನೊಳಗೊಂಡ ಪೀಠ ಕೆಲ ದಿನಗಳ ಹಿಂದೆ ವಿಚಾರಣೆಯಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವರ್ಗಾವಣೆ ಅರ್ಜಿಯನ್ನು ಕೆಲ ದಿನಗಳ ಬಳಿಕ ತಮಿಳುನಾಡು ಸರ್ಕಾರ ಹಿಂಪಡೆದಿತ್ತು.

Kannada Bar & Bench
kannada.barandbench.com