ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್ ಹೈಕೋರ್ಟ್ ಎರಡುವಾರಗಳ ಕಾಲ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
ಆದರೆ ಈ ತಡೆಯಾಜ್ಞೆ ಕೊಡನಾಡು ಕೊಲೆ (ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಎಸ್ಟೇಟ್‌ನಲ್ಲಿ ನಡೆದಿದ್ದ ನಿಗೂಢ ಕೊಲೆ) ಪ್ರಕರಣದೊಂದಿಗೆ ಪಳನಿಸ್ವಾಮಿ (ಇಪಿಎಸ್) ಅವರ ನಂಟಿದೆ ಎಂದು ಉದಯನಿಧಿ ಅವರು ಪರಿಶೀಲಿಸದೆ ಮಾಡುವ ಮಾನಹಾನಿಕರ ಹೇಳಿಕೆಗಳಿಗೆ ಮಾತ್ರ ಸಂಬಂಧಿಸಿದೆ ಎಂದು ಗುರುವಾರ ನ್ಯಾಯಮೂರ್ತಿ ಆರ್ ಎನ್ ಮಂಜುಳಾ ಸ್ಪಷ್ಟಪಡಿಸಿದರು.
ತಾನು ಭ್ರಷ್ಟಾಚಾರದಲ್ಲಿ ತೊಡಗಿದ್ದೇನೆ ಎಂದು ಆರೋಪಿಸುವುದರ ಜೊತೆಗೆ ತಮ್ಮ ಹೆಸರನ್ನು 2017ರಲ್ಲಿ ನಡೆದಿದ್ದ ಕೊಡನಾಡು ಹತ್ಯೆ ಪ್ರಕರಣದೊಂದಿಗೆ ತಳಕು ಹಾಕುತ್ತಿರುವುದಕ್ಕೆ ತಡೆ ನೀಡಬೇಕೆಂದು ಕೋರಿ ಹಿರಿಯ ವಕೀಲ ವಿಜಯ್ ನಾರಾಯಣ್ ಅವರ ಮೂಲಕ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿರೋಧಪಕ್ಷದ ನಾಯಕ ಇಪಿಎಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ವಿಚಾರ ತಿಳಿಸಿತು.
ಸನಾತನ ಧರ್ಮದ ಕುರಿತು ಸ್ಟಾಲಿನ್ ಮಾಡಿದ ಭಾಷಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 7ರಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ (X- ಹಿಂದಿನ ಟ್ವಿಟೆರ್) ಸಚಿವ ಉದಯನಿಧಿ ತಮ್ಮ ವಿರುದ್ಧ ಆರೋಪ ಮಾಡಿದ್ದರು. ಈ ಸಂಬಂಧ ಅವರು ₹ 1.1 ಕೋಟಿ ಮೌಲ್ಯದ ನಷ್ಟ ಪರಿಹಾರ ನೀಡಬೇಕೆಂದು ಇಪಿಎಸ್ ಮೊಕದ್ದಮೆ ಹೂಡಿದ್ದರು.
ಏನಿದು ಕೊಡನಾಡು ಕೊಲೆ ಪ್ರಕರಣ?
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಮತ್ತವರ ಆಪ್ತರಾಗಿದ್ದ ವಿ ಕೆ ಶಶಿಕಲಾ ಅವರ ಜಂಟಿ ಒಡೆತನದ ಕೊಡನಾಡು ಎಸ್ಟೇಟ್‌ಗೆ 2017ರ ಏಪ್ರಿಲ್‌ನಲ್ಲಿ ಶಸ್ತ್ರಸಜ್ಜಿತ ತಂಡವೊಂದು ನುಗ್ಗಿತ್ತು. ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೊಂದುಹಾಕಿದ್ದ ತಂಡ ದುಬಾರಿ ವಾಚ್‌ಗಳನ್ನು ದರೋಡೆ ಮಾಡಿತ್ತು.
ಘಟನೆ ನಡೆದ ಐದು ದಿನಗಳ ನಂತರ ಪ್ರಕರಣದಲ್ಲಿ ಕೈವಾಡವಿದೆ ಎಂದು ಶಂಕಿಸಲಾಗಿದ್ದ ಜಯಯಲಿತಾ ಅವರ ಮಾಜಿ ಚಾಲಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದೇ ದಿನ ಪ್ರಕರಣದ ಇನ್ನೊಬ್ಬ ಆರೋಪಿ ಸಯಾನ್ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಅವರ ಪತ್ನಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಯಾನ್ ಪ್ರಾಣಾಪಾಯದಿಂದ ಪಾರಾಗಿದ್ದರು. ಕೊಡನಾಡು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಘಟನೆ ನಡೆದು ಕೆಲ ತಿಂಗಳುಗಳ ಬಳಿಕ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನು ಅಧಿಕಾರಕ್ಕೆ ಬಂದರೆ ಕೊಡನಾಡು ದರೋಡೆ ಮತ್ತು ಕೊಲೆ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವುದಾಗಿ ಡಿಎಂಕೆ ತಿಳಿಸಿತ್ತು.