
ಆಕ್ಷೇಪಾರ್ಹ ವ್ಯಂಗ್ಯಚಿತ್ರ ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಆನಂದ ವಿಕಟನ್ ಜಾಲತಾಣಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ಸೂಚನೆ ನೀಡಿದೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ನಿಯತಕಾಲಿಕೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಜಾಲತಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ನಿರ್ಬಂಧ ಕ್ರಮ ವಿರೋಧಿಸಲು ಸೂಕ್ತ ಅವಕಾಶ ನೀಡದೆಯೇ ನಿರ್ಬಂಧ ವಿಧಿಸಲಾಗಿತ್ತು ಎಂದು ಆನಂದ್ ವಿಕಟನ್ ದೂರಿದರೆ ಕೇಂದ್ರ ಸರ್ಕಾರ ವ್ಯಂಗ್ಯಚಿತ್ರವನ್ನು ನಿರ್ಬಂಧಿಸುವ ಕ್ರಮಕ್ಕೆ ಆಧಾರವನ್ನು ಉಲ್ಲೇಖಿಸಿತು.
ವ್ಯಂಗ್ಯಚಿತ್ರವನ್ನು ತೆಗೆದು ಹಾಕಿದರೆ ಮುಂದಿನ ಆದೇಶ ಪ್ರಕಟವಾಗುವವರೆಗೂ ಜಾಲತಾಣಕ್ಕೆ ವಿಧಿಸಿರುವ ನಿರ್ಬಂಧವನ್ನು ಸದ್ಯಕ್ಕೆ ತೆಗೆಯಬಹುದು ಎಂದು ಆದೇಶಿಸುವ ಮೂಲಕ ನ್ಯಾಯಾಲಯ ವಿಕಟನ್‌ಗೆ ಪರಿಹಾರ ನೀಡಿತು. ವ್ಯಂಗ್ಯಚಿತ್ರವಷ್ಟೇ ಆಕ್ಷೇಪಿತ ವಸ್ತುವಿಷಯವಾಗಿರುವುದರಿಂದ ಉಳಿದ ವಸ್ತುವಿಷಯವನ್ನು ಚಂದಾದಾರರಿಗೆ ಒದಗಿಸಬಹುದಾಗಿದೆ ಎಂದು ಅದು ತರ್ಕಿಸಿತು.
ಈ ನಿಟ್ಟಿನಲ್ಲಿ , ಆಕ್ಷೇಪಾರ್ಹ ಪುಟಗಳನ್ನು ತೆಗೆದುಹಾಕಲಾಗಿದೆ ಎಂದು ದೃಢೀಕರಿಸಿ ಕೇಂದ್ರ ಸರ್ಕಾರಕ್ಕೆ ಇಮೇಲ್ ಕಳುಹಿಸುವಂತೆ ಆನಂದ ವಿಕಟನ್ಗೆ ನ್ಯಾಯಾಲಯ ಆದೇಶಿಸಿತು. ಬಳಿಕ ನ್ಯಾಯಾಲಯ ಆದೇಶದ ಪ್ರಮಾಣೀಕೃತ ಪ್ರತಿಗಾಗಿ ಕಾಯದೆ ಜಾಲತಾಣಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಬೇಕು ಎಂದು ನ್ಯಾಯಮೂರ್ತಿ ಚಕ್ರವರ್ತಿ ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 21 ರಂದು ನಡೆಯಲಿದೆ.
ಆನಂದ ವಿಕಟನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್ ನಾರಾಯಣ್ ಮತ್ತವರ ತಂಡ ತನ್ನ ವ್ಯಂಗ್ಯಚಿತ್ರವು ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟ ಭಾರತೀಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ರಾಜಕೀಯ ವಿಡಂಬನೆಯ ಒಂದು ರೂಪವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವಿವರಿಸಲು ಈಗಾಗಲೇ ಪ್ರಯತ್ನಿಸಿದೆ. ವಿಡಂಬನಾತ್ಮಕ ವ್ಯಂಗ್ಯಚಿತ್ರ ಆಕ್ಷೇಪಾರ್ಹವೇ ಆಗಿದ್ದರೂ, ಇಡೀ ಆನಂದ ವಿಕಟನ್ ಜಾಲತಾಣವನ್ನು ನಿರ್ಬಂಧಿಸುವುದು ಅನ್ಯಾಯ, ಅಸಮಾನ ಮತ್ತು ಅತಿರೇಕದ್ದು. ಅಂತಹ ಕ್ರಮ ಪತ್ರಿಕೋದ್ಯಮದ ದಮನಕ್ಕೆ ಕಾರಣವಾಗುತ್ತದೆ ಎಂದಿತು.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ಮತ್ತು ವಿದೇಶಿ ಸರ್ಕಾರದೊಂದಿಗಿನ ಅದರ ಸ್ನೇಹ ಸಂಬಂಧಗಳ ಮೇಲೆ ಪರಿಣಾಮ ಬೀರುವುದರಿಂದ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69 ಎ ಅಡಿಯಲ್ಲಿ ನಿರ್ಬಂಧಿಸಲು ಅರ್ಹವಾಗಿದೆ. ಹಾಗೆ ಮಾಡುವುದು ಮೂಲಭೂತ ಹಕ್ಕುಗಳ ಮೇಲೆ ವಿಧಿಸುವ ಸಮಂಜಸ ನಿರ್ಬಂಧವಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿದರು. ಸರ್ಕಾರದ ಪ್ರತಿಕ್ರಿಯೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಅವರು ಕೋರಿದರು.
ಮನವಿ ಪುರಸ್ಕರಿಸಿದ ನ್ಯಾಯಾಲಯ ಆಕ್ಷೇಪಿತ ವ್ಯಂಗ್ಯಚಿತ್ರ ಕಲಾತ್ಮಕ ಮತ್ತು ಪತ್ರಿಕೋದ್ಯಮ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತದೆಯೇ ಅಥವಾ ಅದು ಐಟಿ ಕಾಯಿದೆಯ ಸೆಕ್ಷನ್ 69A ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದಿತು.