ಆನ್‌ಲೈನ್‌ ಜೂಜಿಗೆ ಕಾಲಮಿತಿ: ತಮಿಳುನಾಡು ಸರ್ಕಾರದ ನಿಯಮ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಗೇಮಿಂಗ್ ವೇದಿಕೆಗಳು ಮಧ್ಯರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಲಾಗಿನ್ ಆಗಲು ಅವಕಾಶ ನೀಡಬಾರದು ಎಂದು ಆನ್‌ಲೈನ್‌ ರಮ್ಮಿ, ಪೋಕರ್ ಇತ್ಯಾದಿಗಳ ಕುರಿತ ತಮಿಳುನಾಡಿನ ಕಾನೂನು ನಿಯಮಾವಳಿ ಹೇಳುತ್ತದೆ.
Madras HC and online gaming
Madras HC and online gaming
Published on

ಬಹುಮಾನದ ರೂಪದಲ್ಲಿ ನೈಜ ಹಣ ನೀಡುವ ಆನ್‌ಲೈನ್‌ ರಮ್ಮಿ ಪೋಕರ್‌ ಇತ್ಯಾದಿಗಳನ್ನು ಆಡಲು ಕಾಲಮಿತಿ ವಿಧಿಸಿದ್ದ ತಮಿಳುನಾಡಿನ ನಿಯಮಗಳನ್ನು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ಎತ್ತಿಹಿಡಿದಿದೆ [ಪ್ಲೇ ಗೇಮ್ಸ್ 24x7 ಪ್ರೈವೇಟ್‌ ಲಿಮಿಟೆಡ್‌ ಮತ್ತಿತರರು ಹಾಗೂ ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಗೇಮಿಂಗ್ ವೇದಿಕೆಗಳು ಮಧ್ಯರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಲಾಗಿನ್ ಆಗಲು ಅವಕಾಶ ನೀಡಬಾರದು ಎಂದು ಆನ್‌ಲೈನ್‌ ರಮ್ಮಿ, ಪೋಕರ್ ಇತ್ಯಾದಿಗಳ ಕುರಿತಾದ ತಮಿಳುನಾಡಿನ ನಿಯಮಾವಳಿ ಹೇಳುತ್ತದೆ.

ಅಲ್ಲದೆ ಈ ಬಗೆಯ ಜೂಜಾಟ ಆಡಲು ನೋಂದಾಯಿಸಿಕೊಳ್ಳುವ ಮೊದಲು ಆಧಾರ್‌ ದೃಢೀಕರಣ ನೀಡುವುದನ್ನು ಕಡ್ಡಾಯಗೊಳಿಸಿರುವ ನಿಯಮವನ್ನೂ ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಕೆ ರಾಜಶೇಖರ್ ಅವರಿದ್ದ ಪೀಠ ಎತ್ತಿಹಿಡಿದಿದೆ.

Also Read
ಆನ್‌ಲೈನ್ ಜೂಜಾಟ ನಿಷೇಧಿಸುವ ಪೊಲೀಸ್ ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ತಮಿಳುನಾಡು ಆನ್ಲೈನ್ ಗೇಮಿಂಗ್ ಪ್ರಾಧಿಕಾರ (ರಿಯಲ್ ಮನಿ ಗೇಮ್ಸ್) ನಿಯಮಾವಳಿ- 2025 ಅನ್ನು ಪ್ರಶ್ನಿಸಿ ಪ್ಲೇ ಗೇಮ್ಸ್ 24x7 ಪ್ರೈವೇಟ್ ಲಿಮಿಟೆಡ್, ಜಂಗ್ಲೀ ಗೇಮ್ಸ್ ಮತ್ತು ಇಸ್ಪೋರ್ಟ್ ಪ್ಲೇಯರ್ಸ್ ವೆಲ್‌ಫೇರ್‌ ಅಸೋಸಿಯೇಷನ್ ​​ಸೇರಿದಂತೆ ಹಲವಾರು ಗೇಮಿಂಗ್ ವೇದಿಕೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ರಾಜ್ಯದ ನಿಯಮಗಳು ಅತಿಯಾದ ಸರ್ವಾಧಿಕಾರದಿಂದ ಕೂಡಿವೆ ಎಂಬ ವಾದಗಳನ್ನು ನ್ಯಾಯಾಲಯ ಇಂದು ತಿರಸ್ಕರಿಸಿತು. ಅಲ್ಲದೆ, ನೆಟ್‌ಫ್ಲಿಕ್ಸ್‌, ಕ್ಯಾಂಡಿಕ್ರಷ್‌ನಂತಹ ಇತರೆ ಆನ್‌ಲೈನ್‌ ಪ್ರಕಾರಗಳು ಸಹ ವ್ಯಸನಕಾರಿ ವಸ್ತುವಿಷಯವುಳ್ಳವಾಗಿದ್ದು ಅವುಗಳಿಗೆ ಇಲ್ಲದಿರುವ ನಿರ್ಬಂಧ ರಿಯಲ್‌ ಮನಿ ಗೇಮ್ಸ್‌ಗಳಿಗೆ (ಆರ್‌ಎಂಜಿ) ಏಕಿದೆ ಎನ್ನುವ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.

ಅಂತಹ ಆನ್‌ಲೈನ್‌ ವಸ್ತುವಿಷಯಗಳಿಗೂ ಅನ್‌ಲೈನ್‌ ಗೇಮಿಂಗ್‌ಗೂ ವ್ಯತ್ಯಾಸವಿದೆ ಎಂದು ನ್ಯಾಯಾಲಯ ಹೇಳಿತು. ಪ್ರಮುಖವಾಗಿ ಆನ್‌ಲೈನ್‌ ಗೇಮಿಂಗ್‌ಗಳಲ್ಲಿ ಹಣವನ್ನು ಪಣವಾಗಿ ಇರಿಸಲಾಗುತ್ತದೆ ಎನ್ನುವ ಅಂಶವನ್ನು ನ್ಯಾಯಾಲಯ ಎತ್ತಿ ತೋರಿಸಿತು.

ಆನ್‌ಲೈನ್ ರಿಯಲ್ ಮನಿ ಗೇಮ್‌ಗಳಲ್ಲಿ ಮಾತ್ರ ಆಟಗಾರರು ಪ್ರತಿಫಲಗಳ ನಿರೀಕ್ಷೆಯಿಂದ ಆಕರ್ಷಿತರಾಗುತ್ತಾರೆ, ಇದು ವ್ಯಸನಕಾರಿ ವರ್ತನೆಗೆ ಕಾರಣವಾಗಬಹುದು ಎಂದು ಅದು ನುಡಿಯಿತು.

ರಿಯಲ್‌ ಮನಿ ಗೇಮ್‌ಗಳಲ್ಲಿ ಆರಂಭಿಕ ಕೆಲ ಗೆಲುವಿನಿಂದ ಮೋಹಿತರಾಗುವ ಆಟಗಾರರು ನಂತರ ಈ ವ್ಯಸನಕ್ಕೆ ಅಂಟಿಕೊಂಡು ಆಟದಲ್ಲಿ 'ಕಳೆದುಹೋಗುತ್ತಾರೆ' ಎಂದು ನ್ಯಾಯಾಲಯ ವ್ಯಾಖ್ಯಾನಿಸಿತು.

Also Read
ತಮಿಳುನಾಡು ಆನ್‌ಲೈನ್‌ ಜೂಜಾಟ ಕಾಯಿದೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್: ರಮ್ಮಿ, ಪೋಕರ್ ರೀತಿಯ ಆಟಗಳಿಗಿಲ್ಲ ಅಂಕುಶ

ಆನ್‌ಲೈನ್‌ ಆಟಗಾರರು ಆಟದಲ್ಲಿ ತೊಡಗುವುದಕ್ಕೂ ಮುನ್ನ ಅವರ ವಯಸ್ಸನ್ನು ಆಧಾರ್‌ ಕಾರ್ಡ್‌ ಮೂಲಕ ದೃಢೀಕರಿಸಬೇಕೆಂದು ರಾಜ್ಯವು ರೂಪಿಸಿರುವ ನಿಯಮದ ಬಗ್ಗೆಯೂ ನ್ಯಾಯಾಲಯ ತನ್ನ ಸಹಮತಿ ವ್ಯಕ್ತಪಡಿಸಿತು. ಇತರೆ ಗುರುತುಪತ್ರಗಳಿವೆಯಾದರೂ ಆನ್‌ಲೈನ್‌ ದೃಢೀಕರಣಕ್ಕೆ ಅಗತ್ಯವಾದ ಸೌಕರ್ಯವನ್ನು ಆಧಾರ್‌ ಹೊಂದಿದೆ ಎಂದು ನ್ಯಾಯಾಲಯ ಹೇಳಿತು.

ಆಧಾರ್ ಪರಿಶೀಲಿಸಿದರೆ ಜೂಜಿನಲ್ಲಿ ವಂಚನೆ ಎಸಗುವುದು ಕಡಿಮೆ ಆಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ಅಗತ್ಯತೆಯ ಗೌಪ್ಯತೆಯ ಹಕ್ಕಿನ ತೂಕವನ್ನೂ ಮೀರಿಸುತ್ತದೆ ಎಂದು ನ್ಯಾಯಾಲಯವು ವಿವರಿಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಸಜನ್ ಪೂವಯ್ಯ, ಸಿ ಮಣಿಶಂಕರ್, ಆರ್ಯಮ ಸುಂದರಂ, ಸತೀಶ್ ಪರಾಸರನ್ ಮತ್ತು ಅಭಿಷೇಕ್ ಮಲ್ಹೋತ್ರಾ ಮತ್ತವರ ತಂಡ ವಾದ ಮಂಡಿಸಿತು. ತಮಿಳುನಾಡು ಸರ್ಕಾರವನ್ನು  ಅಡ್ವೊಕೇಟ್ ಜನರಲ್ ಪಿ.ಎಸ್. ರಾಮನ್ ಮತ್ತು ವಿಶೇಷ ಸರ್ಕಾರಿ ಪ್ಲೀಡರ್ ಟಿ. ಚಂದ್ರಶೇಖರನ್ ಪ್ರತಿನಿಧಿಸಿದ್ದರು.

ತಮಿಳುನಾಡು ಪೊಲೀಸ್ ಮಹಾನಿರ್ದೇಶಕರ ಪರವಾಗಿ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಇ ರಾಜ್ ತಿಲಕ್ ವಾದ ಮಂಡಿಸಿದರು. ತಮಿಳುನಾಡು ಆನ್‌ಲೈನ್ ಗೇಮಿಂಗ್ ಪ್ರಾಧಿಕಾರವನ್ನು ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಮಿತ್ ಆನಂದ್ ತಿವಾರಿ, ವಕೀಲ ಅರವಿಂದ್ ಶ್ರೇವತ್ಸ ಅವರ ಸಹಾಯದೊಂದಿಗೆ ಪ್ರತಿನಿಧಿಸಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್ ಎಲ್ ಸುಂದರೇಶನ್ ಮತ್ತು ಉಪ ಸಾಲಿಸಿಟರ್ ಜನರಲ್ ಆರ್ ರಾಜೇಶ್ ವಿವೇಕಾನಂದನ್ ಅವರು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದರು.

Kannada Bar & Bench
kannada.barandbench.com