ಪ್ರತಿಯೊಬ್ಬ ನಾಗರಿಕರಿಗೂ ವಿದೇಶಕ್ಕೆ ಪ್ರಯಾಣಿಸುವ ಹಕ್ಕಿದ್ದು ಅದರಲ್ಲಿಯೂ ವೈದ್ಯಕೀಯ ಕಾರಣಗಳಿಗಾಗಿ ಅವರು ಅಂತಹ ಪ್ರಯಾಣ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಹೀಗಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸುವ ಅಗತ್ಯವಿದೆಯೇ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ಜಾರಿ ನಿರ್ದೇಶನಾಲಯವನ್ನು (ಇ ಡಿ) ಪ್ರಶ್ನಿಸಿತು.
ವಿಚಾರಣೆಗೆ ದೆಹಲಿಗೆ ಬರುವಂತೆ ಸೂಚಿಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಸೇರಿದಂತೆ ವಿವಿಧ ರಾಜಕೀಯ ನಾಯಕರಿಗೆ ಇ ಡಿ ನೀಡಿರುವ ಸಮನ್ಸ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳು ಪ್ರಯಾಣವನ್ನು ನಿರ್ಬಂಧಿಸಲು ಅನಗತ್ಯ ಲುಕ್-ಔಟ್ ನೋಟೀಸ್ ನೀಡಿದರೆ ಅದು ಬಹುವಿಧದ ವಿಚಾರಣೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ವಿರುದ್ಧ ಏಕೆ ಇಂತಹ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೀಠ ಪ್ರಶ್ನಿಸಿದೆ. "ಯಾವ ಆಧಾರದ ಮೇಲೆ ನೀವು ಲುಕ್ ಔಟ್ ನೋಟಿಸ್ ನೀಡುತ್ತೀರಿ? ಒಬ್ಬ ವ್ಯಕ್ತಿ ತಲೆಮರೆಸಿಕೊಳ್ಳದ ಹೊರತು ವಿದೇಶಕ್ಕೆ ಪ್ರಯಾಣಿಸುವುದು ಕೂಡ ಅವರ ಹಕ್ಕಾಗಿರುತ್ತದೆ" ಎಂದು ಅದು ಹೇಳಿತು.
ಇ ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು, ಈ ವಿಷಯದಲ್ಲಿ ಹೆಚ್ಚಿನ ಸೂಚನೆಗಳನ್ನು ತನಿಖಾ ಸಂಸ್ಥೆಯಿಂದ ಪಡೆಯುವ ಅಗತ್ಯವಿದೆ ಎಂದು ಹೇಳಿದರು. ಆಗ ಪೀಠ ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
"ಅರ್ಜಿದಾರರಿಗೆ ಲುಕ್ ಔಟ್ ನೋಟಿಸ್ ನೀಡಲಾಗಿದೆಯೇ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಪ್ರಯಾಣಿಸಲು ಅವರಿಗೆ ಏಕೆ ಅವಕಾಶ ನೀಡಬಾರದು ಎಂಬುದನ್ನು ಮಾತ್ರ ನಾವು ತಿಳಿಯಲು ಬಯಸುತ್ತೇವೆ" ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ಬ್ಯಾನರ್ಜಿ ದಂಪತಿ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದಿಸಿದರು. ಜುಲೈ 28 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.