ಪತಿ, ಮಾವನ ವಿರುದ್ಧ ಆಧಾರರಹಿತ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದು ಕ್ರೌರ್ಯ: ಮದ್ರಾಸ್ ಹೈಕೋರ್ಟ್

ಪತ್ನಿ ತನಗೆ ಮಾನಸಿಕ ಕ್ರೌರ್ಯ ನೀಡಿದ್ದು ಹೀಗಾಗಿ ವಿಚ್ಛೇದನ ಅಗತ್ಯವಿದೆ ಎಂದು ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿತು.
ಪತಿ, ಮಾವನ ವಿರುದ್ಧ ಆಧಾರರಹಿತ ಲೈಂಗಿಕ ದೌರ್ಜನ್ಯ ಆರೋಪ ಮಾಡುವುದು ಕ್ರೌರ್ಯ: ಮದ್ರಾಸ್ ಹೈಕೋರ್ಟ್
Published on

ತನ್ನ ಸಂಗಾತಿ ಮತ್ತು ಮಾವನ ವಿರುದ್ಧ ಆಧಾರರಹಿತ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿದ್ದು ವಿಚ್ಛೇದನಕ್ಕೆ  ಮಾನ್ಯ ಆಧಾರವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಪತ್ನಿ ತನಗೆ ಮಾನಸಿಕ ಕ್ರೌರ್ಯಉಂಟು ಮಾಡಿದ್ದು ವಿಚ್ಛೇದನ ಅಗತ್ಯವಿದೆ ಎಂದು ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಜೆ ನಿಶಾ ಬಾನು ಮತ್ತು ಆರ್ ಶಕ್ತಿವೇಲ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

Also Read
ಪರಪುರುಷರೊಡನೆ ಪತ್ನಿಯ ಅಶ್ಲೀಲ ಚಾಟ್‌ ಮಾನಸಿಕ ಕ್ರೌರ್ಯ ಎಂದ ಮಧ್ಯಪ್ರದೇಶ ಹೈಕೋರ್ಟ್‌, ವಿಚ್ಛೇದನಕ್ಕೆ ಅನುಮತಿ

ತನ್ನ ಪತಿ ಮತ್ತು ಆತನ ತಂದೆ ವಿಕೃತ ಮನಸ್ಸಿನವರಾಗಿದ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪರಿತ್ಯಕ್ತ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪತಿ ಮತ್ತೆ ಒಟ್ಟಿಗೆ ಸಂಸಾರ ಮಾಡೋಣ ಎಂದು ಭರವಸೆಯಿತ್ತ ಬಳಿಕವಷ್ಟೇ ಆಕೆ ದೂರನ್ನು ಹಿಂಪಡೆದಿದ್ದರು.

ಆದರೆ ಮೇಲ್ಮನವಿದಾರ ಭರವಸೆ ನೀಡಿದಂತೆ ಅವರಿಬ್ಬರೂ ಒಂದಾಗಲಿಲ್ಲ. ಇದರ ಹೊರತಾಗಿಯೂ ಪತ್ನಿ ಮತ್ತೆ ದೂರು ಮರುಸಲ್ಲಿಸದೆ ಇರುವುದು ಲೈಂಗಿಕ ಕಿರುಕುಳದ ಆರೋಪ ಸಾಬೀತುಪಡಿಸದೆ ಬಿಟ್ಟಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಧಾರರಹಿತ, ಮಾನಹಾನಿಕರ ಲೈಂಗಿಕ ಕಿರುಕುಳದ ಆರೋಪಗಳು ಪತಿಗೆ ಹಾಗೂ ಅವರ ಕುಟುಂಬಕ್ಕೆ ಕಳಂಕ ಮತ್ತು ಮಾನಸಿಕ ಯಾತನೆ ಉಂಟುಮಾಡಬಹುದು . ಅಂತಹ ಸನ್ನಿವೇಶದಲ್ಲಿ, ಪತಿ ತನ್ನ ಪರಿತ್ಯಕ್ತ ಹೆಂಡತಿಯೊಂದಿಗೆ ಮತ್ತೆ ಒಂದಾಗಲು ಇಷ್ಟಪಡುವುದಿಲ್ಲ ಎಂಬುದು ಅರ್ಥವಾಗುವಂತಹದ್ದು ಎಂದು ನ್ಯಾಯಾಲಯ ಹೇಳಿದೆ.

ತನ್ನ ಪತ್ನಿ ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ಕೇವಲ 51 ದಿನಗಳು ಮಾತ್ರ ನನ್ನ ಮನೆಯಲ್ಲಿದ್ದರು. ಉಳಿದ ಸಮಯವನ್ನು ಆಕೆಯ ಪೋಷಕರ ಮನೆಯಲ್ಲಿ ಕಳೆದರು ಎಂದು ಮೇಲ್ಮನವಿದಾರ ಆರೋಪಿಸಿದ್ದರು. ಅಲ್ಲದೆ, ಆಕೆ ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರು, ಅತಿಯಾಗಿ ಜಗಳವಾಡಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದ್ದರು.

ಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ ನಂತರ, ತನ್ನ ಮಾವ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಪತ್ನಿ ಪೊಲೀಸ್ ದೂರು ದಾಖಲಿಸಿದ್ದರು ಜೊತೆಗೆ ತನ್ನ ಪತಿ ವಿಕೃತ ವ್ಯಕ್ತಿಯಾಗಿದ್ದು, ಆತ ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಿಕೊಂಡಿದ್ದರು. ವಾದ ಆಲಿಸಿದ್ದ ಕೌಟುಂಬಿಕ ನ್ಯಾಯಾಲಯ ಆಕೆಗೆ ದಾಂಪತ್ಯದ ಹಕ್ಕುಗಳನ್ನು ಮತ್ತೆ ಒದಗಿಸಿತ್ತು.

ಆದರೆ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಹೈಕೋರ್ಟ್, ಮೇಲ್ಮನವಿದಾರರರಿಗೆ ವಿಚ್ಛೇದನ ಕೋರಲು ಸೂಕ್ತ ಕಾರಣಗಳಿವೆ ಎಂದಿದೆ.

Also Read
ಪತ್ನಿಯ ವ್ಯಾಸಂಗಕ್ಕೆ ತಡೆಯೊಡ್ಡುವುದು ಕ್ರೌರ್ಯ, ವಿಚ್ಛೇದನಕ್ಕೆ ಆಧಾರ: ಮಧ್ಯಪ್ರದೇಶ ಹೈಕೋರ್ಟ್

ತನ್ನ ಮತ್ತು ತನ್ನ ತಂದೆಯ ವಿರುದ್ಧ ಅವಹೇಳನಕಾರಿ ಲೈಂಗಿಕ ಸ್ವಭಾವದ ಆರೋಪ ಮಾಡಿದ ನಂತರವೂ, ಪತ್ನಿಯೊಂದಿಗೆ ವೈವಾಹಿಕ ಜೀವನ ಮುಂದುವರಿಸುವ ಬಗ್ಗೆ ಪತಿಗೆ ಇರುವ ಆತಂಕಗಳನ್ನು ತಳ್ಳಿಹಾಕಲಾಗುವುದಿಲ್ಲ. ದಂಪತಿ ದೂರವಾಗಿ ಬದುಕಲು ಪ್ರಾರಂಭಿಸಿ ಎಂಟು ವರ್ಷಗಳು ಕಳೆದಿವೆ.  ಇಲ್ಲಿಯವರೆಗೆ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ ಎಂದು ಪೀಠ ಹೇಳಿತು.

ಹೀಗಾಗಿ ಅದು ಪತಿಯ ಮೇಲ್ಮನವಿಯನ್ನು ಪುರಸ್ಕರಿಸಿ ಆತ ವಿಚ್ಛೇದನ ಪಡೆಯಲು ಅವಕಾಶ ಮಾಡಿಕೊಟ್ಟಿತು. ಆದರೆ ಪರಿತ್ಯಕ್ತ ಪತ್ನಿ ಮತ್ತು ಆತನ ಮಗುವಿಗೆ ನೀಡಬೇಕಾದ ಜೀವನಾಂಶ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಅದು ನಿರಾಕರಿಸಿತು.

[ತೀರ್ಪಿನ ಪ್ರತಿ]

Kannada Bar & Bench
kannada.barandbench.com