
ಪತ್ನಿಗೆ ತನ್ನ ವ್ಯಾಸಂಗ ನಿಲ್ಲಿಸುವಂತೆ ಒತ್ತಾಯಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿದ್ದು, ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಇದು ಆಧಾರವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ಆ ಮೂಲಕ, ತಾನು ಹನ್ನೆರಡನೇ ತರಗತಿಯ ನಂತರ ಶಿಕ್ಷಣ ಮುಂದುವರೆಸದಂತೆ ತನ್ನ ಗಂಡ ಹಾಗೂ ಆತನ ಕುಟುಂಬಸ್ಥರು ತಡೆದಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಮಹಿಳೆ ವಿಚ್ಛೇದನ ಪಡೆಯಲು ನ್ಯಾಯಮೂರ್ತಿಗಳಾದ ವಿವೇಕ್ ರುಸಿಯಾ ಮತ್ತು ಗಜೇಂದ್ರ ಸಿಂಗ್ ಅವರಿದ್ದ ಪೀಠ ಅವಕಾಶ ನೀಡಿದೆ.
ಶಿಕ್ಷಣ ಜೀವನದ ಭಾಗ ಎಂದು ಸುಪ್ರೀಂ ಕೋರ್ಟ್ ಗುರುತಿಸಿದೆ. ಅಲ್ಲದೆ ಸಂವಿಧಾನದ 21ನೇ ವಿಧಿಯಡಿ ಅದು ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗ. ಅಂದರೆ ಘನತೆಯಿಂದ ಬದುಕಲು ಶಿಕ್ಷಣ ಪಡೆಯುವುದು ಅಗತ್ಯಗತ್ಯ ಎಂದು ಪರಿಗಣಿಸಲಾಗಿದೆ ಎಂಬುದಾಗಿ ನ್ಯಾಯಾಲಯ ನುಡಿದಿದೆ.
ಪತ್ನಿ ತನ್ನ ಅಧ್ಯಯನ ನಿಲ್ಲಿಸುವಂತೆ ಒತ್ತಡ ಹೇರುವುದು ಅಥವಾ ಅವಳು ತನ್ನ ಅಧ್ಯಯನ ಮುಂದುವರಿಸದಂತಹ ಸ್ಥಿತಿಯಲ್ಲಿ ಆಕೆಯನ್ನು ಇರಿಸುವಂತಹ ವಾತಾವರಣ ಸೃಷ್ಟಿಸುವುದು ಆಕೆಯ ವೈವಾಹಿಕ ಜೀವನದ ಆರಂಭದಲ್ಲಿಯೇ ಅಕೆಯ ಕನಸುಗಳನ್ನು ಭಗ್ನಗೊಳಿಸುವುದಕ್ಕೆ ಸಮಾನವಾಗಿದೆ. ಶಿಕ್ಷಣ ಪಡೆಯದ ಅಥವಾ ತನ್ನನ್ನು ತಾನು ಸುಧಾರಿಸಿಕೊಳ್ಳಲು ಉತ್ಸುಕನಾಗದ ವ್ಯಕ್ತಿಯೊಂದಿಗೆ ವಾಸಿಸಲು ಆಕೆಯನ್ನು ಒತ್ತಾಯಿಸುವುದು ಖಂಡಿತವಾಗಿಯೂ ಮಾನಸಿಕ ಕ್ರೌರ್ಯಕ್ಕೆ ಸಮಾನ. ಇದು ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13 (1) (ia) ಅಡಿಯಲ್ಲಿ ವಿಚ್ಛೇದನಕ್ಕೆ ಆಧಾರವಾಗುತ್ತದೆ ಎಂದು ಅದು ವಿವರಿಸಿದೆ.
ಪತ್ನಿ ತನ್ನ ಅಧ್ಯಯನ ನಿಲ್ಲಿಸುವಂತೆ ಒತ್ತಡ ಹೇರುವುದು, ಶಿಕ್ಷಣ ಪಡೆಯದ ಅಥವಾ ತನ್ನನ್ನು ತಾನು ಸುಧಾರಿಸಿಕೊಳ್ಳಲು ಉತ್ಸುಕನಾಗದ ವ್ಯಕ್ತಿಯೊಂದಿಗೆ ವಾಸಿಸಲು ಆಕೆಯನ್ನು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ.
ಮಧ್ಯಪ್ರದೇಶ ಹೈಕೋರ್ಟ್
ತನ್ನ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಮತ್ತು ತನ್ನ ಪರಿತ್ಯಕ್ತ ಪತಿಯ ಪರವಾಗಿ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿರುವುದನ್ನು ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು.
ದಂಪತಿ 2015ರಲ್ಲಿ ಮದುವೆಯಾಗಿದ್ದರು. ಗಂಡ ಮತ್ತು ಆತನ ಮನೆಯವರು ತನಗೆ ಅಧ್ಯಯನಕ್ಕೆ ಅವಕಾಶ ನೀಡುತ್ತಿಲ್ಲ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದರು. ಆದರೆ. ಪತ್ನಿಯ ಶಿಕ್ಷಣಕ್ಕೆ ತಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಅಲ್ಲದೆ ಆಕೆ ಬಿ.ಎಸ್ಸಿ ಕೋರ್ಸ್ ಪೂರ್ಣಗೊಳಿಸಲು ಅಗತ್ಯವಾದ ವೆಚ್ಚಗಳನ್ನು ತಾನೇ ಭರಿಸುತ್ತಿರುವೆ ಎಂದಿದ್ದ ಪತಿ ವರದಕ್ಷಿಣೆ ಬೇಡಿಕೆ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪಗಳನ್ನು ಸಹ ನಿರಾಕರಿಸಿದ್ದರು.
ಕೌಟುಂಬಿಕ ನ್ಯಾಯಾಲಯ 2020ರಲ್ಲಿ ಪತಿಯ ಪರವಾಗಿ ತೀರ್ಪು ನೀಡಿತ್ತು. ಸಮಂಜಸ ಕಾರಣ ಇಲ್ಲದೆ ಆಕೆ ಪತಿಯಿಂದ ಬೇರ್ಪಟ್ಟಿದ್ದಾಳೆ ಎಂದು ಅದು ತೀರ್ಪಿನಲ್ಲಿ ಹೇಳಿತ್ತು. ಇದನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಆದರೆ, ಅವಿದ್ಯಾವಂತನಾಗಿರುವ ಪತಿ ಆಕೆಯ ವ್ಯಾಸಂಗದ ವೆಚ್ಚವನ್ನು ಭರಿಸುತ್ತಿಲ್ಲ ಎಂದು ಖುದ್ದು ಒಪ್ಪಿಕೊಂಡಿದ್ದಾನೆ ಎಂದು ಹೈಕೋರ್ಟ್ ಹೇಳಿದೆ. ಇದು ವೈವಾಹಿಕ ಕಟ್ಟುಪಾಡುಗಳ ಹೆಸರಿನಲ್ಲಿ ಹೆಂಡತಿ ತನ್ನ ಕನಸುಗಳನ್ನು, ವೃತ್ತಿಜೀವನವನ್ನು ತ್ಯಾಗ ಮಾಡುವ ಪ್ರಕರಣವಾಗಿದೆ ಎಂದಿರುವ ಅದು ಪತ್ನಿ ಮಾನಸಿಕ ಕ್ರೌರ್ಯಕ್ಕೆ ಒಳಗಾಗಿದ್ದು ಪ್ರತ್ಯೇಕವಾಗಿ ವಾಸಿಸಲು ಆಕೆಗೆ ಸಮಂಜಸ ಕಾರಣ ಇದೆ ಎಂದು ನಿರ್ಧರಿಸಿತು.
ಜುಲೈ 2016 ರಿಂದ ದಂಪತಿ ಪುನರ್‌ಮಿಲನದ ಸಾಧ್ಯತೆಯಿಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಇದು ಮದುವೆ ಮರುರೂಪುಗೊಳ್ಳದಂತಹ ವಿಘಟನೆಯ ಪ್ರಕರಣವಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಅಂತೆಯೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಅದು ಮದುವೆಯನ್ನು ವಿಸರ್ಜಿಸಿ ವೈವಾಹಿಕ ಹಕ್ಕು ಮರುಸ್ಥಾಪಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]