ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
ಸುಮಾರು 17 ವರ್ಷದ ಸುದೀರ್ಘ ವಿಚಾರಣೆಯ ನಂತರ ವಿಶೇಷ ನ್ಯಾಯಾಧೀಶ ಎ ಕೆ ಲಹೋಟಿ ಈ ಆದೇಶ ಪ್ರಕಟಿಸಿದರು. ಸೂಕ್ತ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದ ನ್ಯಾಯಾಲಯ ಸಂದೇಹದ ಲಾಭ ಆರೋಪಿಗಳಿಗೆ ದೊರೆಯುತ್ತದೆ ಎಂದಿತು.
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ಆದರೆ ನೈತಿಕತೆ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗದು. ಬಾಂಬ್ ಇರಿಸಲಾಗಿದ್ದ ಬೈಕ್ ಸಾಧ್ವಿ ಪ್ರಜ್ಞಾ ಅವರದ್ದೇ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ದ್ವಿಚಕ್ರವಾಹನದ ಚಾಸಿ ಸರಣಿ ಸಂಖ್ಯೆ ಇಡಿಯಾಗಿ ವಿಧಿ ವಿಜ್ಞಾನ ತಜ್ಞರಿಗೆ ಲಭಿಸಿಲ್ಲ ಹೀಗಾಗಿ ಬೈಕ್ ಅವರದ್ದೇ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ವಿವರಿಸಿತು.
ಇದಲ್ಲದೆ, ಪ್ರಜ್ಞಾ ಸನ್ಯಾಸಿಯಾಗಿದ್ದರು ಮತ್ತು ಸ್ಫೋಟಕ್ಕೆ ಎರಡು ವರ್ಷಗಳ ಮೊದಲು ಎಲ್ಲಾ ಭೌತಿಕ ವಸ್ತುಗಳನ್ನು ತ್ಯಜಿಸಿದ್ದರು ಎಂದು ನ್ಯಾಯಾಲಯ ತಿಳಿಸಿತು.
ಇನ್ನು ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರು ಕಾಶ್ಮೀರದಿಂದ ಆರ್‌ಡಿಎಕ್ಸ್ ಪಡೆದು ಬಾಂಬ್ ತಯಾರಿಸುತ್ತಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅದು ಹೇಳಿದೆ.
ಏಳು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಪ್ರಾಸಿಕ್ಯೂಷನ್ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ಅಲ್ಲದೆ ಸ್ಫೋಟದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದ ಪುರಸ್ಕರಿಸಿದ ನ್ಯಾಯಾಲಯ 101 ಜನರು ಗಾಯಗೊಂಡಿದ್ದಾರೆ ಎಂಬ ವಾದವನ್ನು ಒಪ್ಪಲಿಲ್ಲ.
ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ಪ್ರಮಾಣಪತ್ರಗಳಲ್ಲಿ ಕೆಲವನ್ನು ತಿರುಚಲಾಗಿರುವುದರಿಂದ ಅದು 95 ಜನರಿಗೆ ಮಾತ್ರ ಗಾಯವಾಗಿದೆ ಎಂದು ಅದು ಹೇಳಿತು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ರಂಜಾನ್ ಹಿನ್ನೆಲೆಯಲ್ಲಿ ಹೆಚ್ಚಿನ ಮುಸ್ಲಿಮರು ಸೇರಿದ್ದ ಚೌಕದಲ್ಲಿ ಸೆಪ್ಟೆಂಬರ್ 29, 2008 ರಂದು ಮೋಟಾರ್‌ಸೈಕಲ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸಿ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎಂದು ವರದಿಯಾಗಿತ್ತು.
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಹಿರ್ಕರ್, ಸುಧಾಕರ್ ಚತುರ್ವೇದಿ ಮತ್ತು ಸುಧಾಕರ್ ದ್ವಿವೇದಿ ಸೇರಿದಂತೆ 12 ಜನರನ್ನು ಬಂಧಿಸಿತ್ತು.
ಅಭಿನವ್ ಭಾರತ್ ಗುಂಪು ಸ್ಫೋಟಕ್ಕೆ ಸಂಚು ರೂಪಿಸಿತ್ತು ಎಂದು ಎಟಿಎಸ್ ಆರೋಪಿಸಿತ್ತು. 2010ರಲ್ಲಿ, ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವರ್ಗಾಯಿಸಲಾಗಿತ್ತು. ಅದು 2016ರಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು.
ಠಾಕೂರ್ ಸೇರಿದಂತೆ ಕೆಲವು ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ್ದ ಎನ್‌ಐಎ, ಮೋಕಾ ಕಾಯಿದೆ ಅನ್ವಯಿಸದಂತೆ ಶಿಫಾರಸು ಮಾಡಿತ್ತು.
ಆದರೆ ವಿಶೇಷ ನ್ಯಾಯಾಲಯಏಳು ಆರೋಪಿಗಳಾದ ಠಾಕೂರ್, ಪುರೋಹಿತ್, ಉಪಾಧ್ಯಾಯ, ಕುಲಕರ್ಣಿ, ರಹಿರ್ಕರ್, ಚತುರ್ವೇದಿ ಮತ್ತು ದ್ವಿವೇದಿ ಅವರನ್ನು ಐಪಿಸಿ, ಯುಎಪಿಎ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸುವಂತೆ ಡಿಸೆಂಬರ್ 2017 ರಲ್ಲಿ ತೀರ್ಪು ನೀಡಿತ್ತು.
ರಾಕೇಶ್ ಧವ್ಡೆ ಮತ್ತು ಜಗದೀಶ್ ಮಾತ್ರೆ ಎಂಬ ಇಬ್ಬರು ಆರೋಪಿಗಳು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರತ್ಯೇಕ ವಿಚಾರಣೆ ಎದುರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇತರ ಮೂವರನ್ನು ಖುಲಾಸೆಗೊಳಿಸಲಾಗಿದೆ.
ವಿಚಾರಣೆ ಡಿಸೆಂಬರ್ 2018 ರಲ್ಲಿ ಪ್ರಾರಂಭವಾಯಿತು. ಪ್ರಾಸಿಕ್ಯೂಷನ್ 323 ಸಾಕ್ಷಿಗಳನ್ನು ವಿಚಾರಣೆ ನಡೆಸಿತು, ಅವರಲ್ಲಿ 34 ಮಂದಿ ಮಾಫಿ ಸಾಕ್ಷಿಗಳಾಗಿದ್ದರು. 30 ಕ್ಕ ಹೆಚ್ಚು ಸಾಕ್ಷಿಗಳು ಸಾಕ್ಷ್ಯ ಹೇಳುವ ಮೊದಲೇ ಸಾವನ್ನಪ್ಪಿದರು.
ಆರೋಪಿಗಳಲ್ಲಿ ಒಬ್ಬನಾದ ಸುಧಾಕರ್ ದ್ವಿವೇದಿ, ಯಾವುದೇ ಸ್ಫೋಟ ಸಂಭವಿಸಿಲ್ಲ ಎಂದು ವಾದಿಸಿದ್ದ. ಇದರಿಂದಾಗಿ ಪ್ರಾಸಿಕ್ಯೂಷನ್ 100 ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿತ್ತು. ಪ್ರಕರಣದ ಅಂತಿಮ ವಾದಗಳು ಏಪ್ರಿಲ್ 2024ರಲ್ಲಿ ಮುಕ್ತಾಯಗೊಂಡಿದ್ದವು. ನ್ಯಾಯಾಲಯ ಏಪ್ರಿಲ್ 19 ರಂದು ತೀರ್ಪು ಕಾಯ್ದಿರಿಸಿತು.