ವೈವಾಹಿಕ ಕ್ರೌರ್ಯ ಆರೋಪ ಎಚ್ಚರಿಕೆಯಿಂದ ಪರಿಶೀಲಿಸಿ, ಅನ್ಯಾಯ ತಡೆಯರಿ: ಸುಪ್ರೀಂ ಕೋರ್ಟ್‌

ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರೆಸಬೇಕಾದರೆ ಘಟನೆಯ ನಿಖರ ವಿವರ ಇರಬೇಕೆ ವಿನಾ ಕೇವಲ ಸಾಮಾನ್ಯ ಕಿರುಕುಳ ಆರೋಪ ಸಾಲದು ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court
Published on

ಐಪಿಸಿ ಸೆಕ್ಷನ್‌ 498ಎ ಅಡಿಯಲ್ಲಿ ಮೈದುನನ ವಿರುದ್ಧ ಅತ್ತಿಗೆ ದಾಖಲಿಸಿದ್ದ ವೈವಾಹಿಕ ಕ್ರೌರ್ಯ ಪ್ರಕರಣವೊಂದನ್ನು ರದ್ದುಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಅನ್ಯಾಯ ತಡೆಯುವುದಕ್ಕಾಗಿ ವೈವಾಹಿಕ ಕ್ರೌರ್ಯದ ಆರೋಪ ಪರಿಶೀಲಿಸುವಾಗ ನ್ಯಾಯಾಲಯಗಳು ಜಾಗರೂಕವಾಗಿರಬೇಕು ಎಂದು ಹೇಳಿದೆ [ಶೋಭಿತ್‌ ಕುಮಾರ್‌ ಮಿತ್ತಲ್‌ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

“ದಾಂಪತ್ಯ ಕಲಹಗಳಿಗೆ ಸಂಬಂಧಿಸಿದ ದೂರನ್ನು ಪರಿಗಣಿಸುವಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ಮತ್ತು ಜಾಗ್ರತೆಯಿಂದ ವರ್ತಿಸಬೇಕು. ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನ್ಯಾಯದ  ದುರುಪಯೋಗ ಅಥವಾ ಅನ್ಯಾಯದ ಅಪಾಯ ತಪ್ಪಿಸಲು ಇಂತಹ ಪ್ರಕರಣಗಳಲ್ಲಿ ಮಾಡಲಾಗುವ ಆರೋಪಗಳನ್ನು ಅತ್ಯಂತ ಜಾಗ್ರತೆ ಮತ್ತು ಸೂಕ್ಷ್ಮತೆಯಿಂದ ಪರಿಶೀಲಿಸಬೇಕಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.

Also Read
ಪತ್ನಿಯ ಅಸಮಂಜಸ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಪತಿ ವಿರುದ್ಧ ಐಪಿಸಿ ಸೆಕ್ಷನ್ 498 ಎ ದುರ್ಬಳಕೆ: ಸುಪ್ರೀಂ ಬೇಸರ

ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರೆಸಬೇಕಾದರೆ ಘಟನೆಯ ನಿಖರ ವಿವರ ಇರಬೇಕೆ ವಿನಾ ಕೇವಲ ಸಾಮಾನ್ಯ ಕಿರುಕುಳ ಆರೋಪ ಸಾಲದು ಎಂದು ನ್ಯಾಯಾಲಯ ಹೇಳಿದೆ.

“ಕ್ರೌರ್ಯ ಮತ್ತು ಕಿರುಕುಳದ ಆರೋಪಗಳನ್ನು ಒಳಗೊಂಡ ಪ್ರಕರಣಗಳಲ್ಲಿ, ಸಾಮಾನ್ಯವಾಗಿ ಅನೇಕ ಹಂತಗಳಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಸರಣಿ ಇರುತ್ತದೆ. ಇವುಗಳನ್ನು ದೂರುದಾರರು ಆರೋಪಿ ವಿರುದ್ಧ ನಿಖರವಾಗಿ ವಿವರಿಸಬೇಕು. ಆಗ ಮಾತ್ರ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸಲು ಸಾಧ್ಯ. ಕೇವಲ ಸಾಮಾನ್ಯ ಕಿರುಕುಳದ ಆರೋಪ ಮಾಡಿದ್ದ ಕಾರಣಕ್ಕೇ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ. ಇಂತಹ ದೂರುಗಳನ್ನು ಪರಿಗಣಿಸುವಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ಮತ್ತು ಜಾಗ್ರತೆಯಿಂದ ವರ್ತಿಸಬೇಕು. ದಾಂಪತ್ಯ ಕಲಹಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಸ್ತವಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಆರೋಪಗಳನ್ನು ಅತ್ಯಂತ ಜಾಗ್ರತೆ ಮತ್ತು ಸೂಕ್ಷ್ಮತೆಯಿಂದ ಪರಿಶೀಲಿಸಬೇಕು. ಇಲ್ಲದಿದ್ದರೆ ನ್ಯಾಯದ  ದುರುಪಯೋಗ ಅಥವಾ ಅನ್ಯಾಯ ಉಂಟಾಗಬಹುದು” ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 24ರಂದು ನೀಡಿದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ತನ್ನ ಅತ್ತಿಗೆ (ದೂರುದಾರರು) ದಾಖಲಿಸಿದ್ದ ಐಪಿಸಿ ಸೆಕ್ಷನ್ 498ಎ ಪ್ರಕರಣವನ್ನು ರದ್ದುಗೊಳಿಸಲು ಅಲಾಹಾಬಾದ್ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

ತಮ್ಮ ಪರಿತ್ಯಕ್ತ ಪತಿ (ಮೇಲ್ಮನವಿದಾರನ ಸಹೋದರ), ಅತ್ತೆ ಮತ್ತು ಮೈದುನ (ಮೇಲ್ಮನವಿದಾರ) ವರದಕ್ಷಿಣೆ ಸಂಬಂಧಿತ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿಆರೋಪಿಸಿದ್ದರು. ತನಗೆ ನೀಡಿದ ಕಿರುಕುಳದಿಂದಾಗಿಯೇ ಮೆದುಳಿನ ರಕ್ತನಾಳಕ್ಕೆ ಹಾನಿಯಾಗಿ ಪಾರ್ಶ್ವವಾಯುವಿನಿಂದ ಬಳಲುವಂತಾಯಿತು ಎಂದಿದ್ದರು. ಅಲಾಹಾಬಾದ್ ಹೈಕೋರ್ಟ್ ಆರೋಪಿಗಳನ್ನು ಬಿಡುಗಡೆ ಮಾಡದೆ ಪ್ರಕರಣ ಮುಂದುವರಿಸಲು ಆದೇಶಿಸಿತ್ತು. ಈ ತೀರ್ಪನ್ನು ಮರುಪರಿಶೀಲಿಸುವಂತೆ ಆಕೆಯ ಮೈದುನ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಕಾನೂನಿ ಲೇಪನ ಇರುವ ವೈವಾಹಿಕ ಮಹಿಳೆಯರಿಗೂ ಐಪಿಸಿ ಸೆಕ್ಷನ್ 498 ಎ ಅಡಿ ರಕ್ಷಣೆ: ಕೇರಳ ಹೈಕೋರ್ಟ್

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮೈದುನ ಹಾಗೂ ಆತನ ಕುಟುಂಬಕ್ಕೆ ಪರಿಹಾರ ನೀಡಿದೆ. ಯಾವುದೇ ನಿರ್ದಿಷ್ಟ ವಿವರ ಇಲ್ಲದೆ ಕಿರುಕುಳದ ಬಗ್ಗೆ ಅಸ್ಪಷ್ಟ ಆರೋಪಗಳನ್ನು ಮಾತ್ರ ಪತ್ನಿ ಹೊರಿಸಿದ್ದಾರೆ ಎಂದು ಅದು ಹೇಳಿದೆ.

ಕಿರುಕುಳ ನೀಡಿರುವುದಕ್ಕೂ ಮೆದುಳಿನ ರಕ್ತನಾಳ ಹಾನಿಯಾಗಿರುವುದಕ್ಕೂ ಸಂಬಂಧವೇನು ಎಂಬುದನ್ನು ವಿವರಿಸಲು ದೂರುದಾರರು ವಿಫಲವಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಂತೆಯೇ ನ್ಯಾಯಾಲಯ ಅಲಾಹಾಬಾದ್‌ ಹೈಕೋರ್ಟ್‌ ಆದೇಶ ಹಾಗೂ ಮೇಲ್ಮನವಿದಾರರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸಿತು.

[ತೀರ್ಪಿನ ಪ್ರತಿ]

Attachment
PDF
shobhit_kumar_mittal_v_state_of_uttar_pradesh_622541
Preview
Kannada Bar & Bench
kannada.barandbench.com