
ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಹಿರಿಯ ಗೀತರಚನೆಕಾರ, ಕವಿ ಜಾವೇದ್ ಅಖ್ತರ್ ಅವರು ಪರಸ್ಪರ ಹೂಡಿದ್ದ ಕ್ರಿಮಿನಲ್ ಬೆದರಿಕೆ ಮತ್ತು ಮಾನನಷ್ಟ ಪ್ರಕರಣಗಳನ್ನು ಹಿಂತೆಗೆದುಕೊಂಡಿದ್ದು, ಐದು ವರ್ಷಗಳ ಕಾಲ ನಡೆದ ಕಾನೂನು ಸಂಘರ್ಷಕ್ಕೆ ಅಂತ್ಯ ಹಾಡಿದ್ದಾರೆ.
ಮಧ್ಯಸ್ಥಿಕೆ ಮೂಲಕ ಇತ್ಯರ್ಥಕ್ಕೆ ಬಂದ ಇಬ್ಬರೂ ನಂತರ ಪ್ರಕರಣ ಹಿಂಪಡೆದರು. ಮುಂಬೈನ ಬಾಂದ್ರಾದ ಸಿಜೆಎಂ ನ್ಯಾಯಾಲಯದೆದುರು ಇಬ್ಬರೂ ಖುದ್ದು ಹಾಜರಾದರು. ಅಲ್ಲಿನ ಎಸಿಜೆಎಂ ನ್ಯಾಯಾಧೀಶರಾದ ಎ ಕೆ ಆವರಿ ಅವರು ಇತ್ಯರ್ಥಕ್ಕೆ ಬಂದಿರುವ ವಿಚಾರ ದಾಖಲಿಸಿಕೊಂಡು ಪ್ರಕರಣ ವಿಲೇವಾರಿ ಮಾಡಿದರು.
ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಅವರೊಂದಿಗಿನ ಸಂದರ್ಶನದಲ್ಲಿ ರನೌತ್ ಸುಳ್ಳು ಹೇಳಿಕೆ ನೀಡಿ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಖ್ತರ್ ಡಿಸೆಂಬರ್ 2020 ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು .
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತಲಿನ ವಿವಾದದಲ್ಲಿ ರನೌತ್ ಅನಗತ್ಯವಾಗಿ ತಮ್ಮ ಹೆಸರನ್ನು ಎಳೆದಿದ್ದಾರೆ ಎಂದು 79 ವರ್ಷದ ಗೀತರಚನೆಕಾರ ಮತ್ತು ಕವಿ ದೂರಿದ್ದರು.
ಈ ಮಧ್ಯೆ, ಕಂಗನಾ ಅವರು ಅಖ್ತರ್ ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ಸುಲಿಗೆ ಮತ್ತು ತನ್ನ ಖಾಸಗಿತನ ಅತಿಕ್ರಮಿಸುವ ಮೂಲಕ ಘನತೆಗೆ ಧಕ್ಕೆ ತಂದ ಆರೋಪಗಳೊಂದಿಗೆ ಪ್ರತಿ ದೂರು ದಾಖಲಿಸಿದ್ದರು .
ಮಧ್ಯಸ್ಥಿಕೆಯ ನಂತರ, ಇಬ್ಬರೂ ತಮ್ಮ ದೂರುಗಳನ್ನು ಕೈಬಿಡಲು ಒಪ್ಪಿಕೊಂಡರು, ಪರಿಣಾಮ 5 ವರ್ಷಗಳ ಕಾಲ ನಡೆದ ಕಾನೂನು ಸಂಘರ್ಷ ಕೊನೆಗೊಂಡಿತು.