ರಕ್ತ ಚಂದನ ಮರಗಳ ಕಳ್ಳಸಾಗಣೆ ಆರೋಪದ ಮೇಲೆ ತಮಿಳುನಾಡು ಗೂಂಡಾ ಕಾಯ್ದೆಯಡಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ಪಿಡುಗನ್ನು ಬಗೆಹರಿಸುವ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳು ಯಾವುವು ಎಂದು ನ್ಯಾ. ಕಿರುಬಾಕರನ್ ನೇತೃತ್ವದ ಪೀಠ ಪ್ರಶ್ನಿಸಿದೆ.
ನ್ಯಾಯಾಲಯದ ಅಭಿಪ್ರಾಯ ಹೀಗಿದೆ:
"... ರಕ್ತ ಚಂದನ ಕಳ್ಳಸಾಗಣೆ ತಮಿಳುನಾಡಿನಲ್ಲಿ ಅನೇಕ ಜೀವಗಳನ್ನು ಕಸಿದುಕೊಳ್ಳುತ್ತಿದೆ. ಇದು ಪಿಡುಗಾಗಿದ್ದು ಬಡಜನರು ಬಲಿಪಶುಗಳಾಗುತ್ತಿದ್ದಾರೆ. ಸಮಾಜದ ಅಂಚಿನಲ್ಲಿರುವ ಜನರು ಪ್ರಲೋಭನೆಗೆ ತುತ್ತಾಗಿ, ನೆರೆಯ ರಾಜ್ಯ ಆಂಧ್ರಪ್ರದೇಶ ವಿಶೇಷವಾಗಿ ಚಿತ್ತೂರು ಸುತ್ತಮುತ್ತಲಿನ ಜಿಲ್ಲೆಗಳಿಂದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿದ್ದಾರೆ... ಬಡ ಮತ್ತು ಸಮಾಜದ ಕೆಳಸ್ತರದಲ್ಲಿರುವ ಜನರನ್ನು ಅದರಲ್ಲಿಯೂ ವಿಶೇಷವಾಗಿ ವೆಲ್ಲೂರು, ಧರ್ಮಪುರಿ ಮತ್ತು ವೆಲ್ಲೂರು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರನ್ನು ಗುರಿಯಾಗಿರಿಸಿಕೊಂಡು ದೊಡ್ಡ ಮೊತ್ತದ ಹಣದ ಆಮಿಷವೊಡ್ಡಿ ಅಕ್ರಮ ಚಟುವಟಿಕೆಗಳಿಗೆ ಪ್ರೇರೇಪಿಸಲಾಗುತ್ತಿದೆ. ಈ ಸಿಹಿ ಮಾತುಗಳನ್ನು ನಂಬಿದ ಜನ ಅಪಾಯಗಳ ಅರಿವಿಲ್ಲದೆ ಹೇರಳವಾಗಿ ರಕ್ತಚಂದನ ಮರಗಳಿರುವ ಆಂಧ್ರಪ್ರದೇಶದಲ್ಲಿ ಕಳ್ಳಸಾಗಣೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಆದರೆ ರಕ್ತಚಂದನ ಮಾರಾಟವಾಗುವ ಹಣಕ್ಕೆ ಹೋಲಿಸಿದರೆ ಈ ಬಡಜನರಿಗೆ ದೊರೆಯುವ ಹಣ ಅಲ್ಪಮೊತ್ತದ್ದಾಗಿರುತ್ತದೆ”
ತಮಿಳುನಾಡು ಹೈಕೋರ್ಟ್
ಸೂಕ್ತ ಉದ್ಯೋಗ ದೊರೆಯದ ಕಾರಣಕ್ಕೆ ಜನ ತಮ್ಮ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ಕೆ ಇಳಿಯುತ್ತಿದ್ದಾರೆಯೇ ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಅಲ್ಲದೆ ನ್ಯಾಯಾಲಯ ಮೈಲಾಪೋರ್‌ನ ಪೊಲೀಸ್ ಮಹಾನಿರ್ದೇಶಕರು ಮತ್ತು ಹಾಗೂ ಚೆನ್ನೈನ ಕಂದಾಯ ಗುಪ್ತಚರ ನಿರ್ದೇಶನಾಲಯದ ಹೆಚ್ಚುವರಿ ಮಹಾನಿರ್ದೇಶಕರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಂಡಿದೆ. ಮತ್ತು ಅಧಿಕಾರಿಗಳಿಗೆ ಉತ್ತರಿಸಲು ಈ ಕೆಳಗಿನ ಪ್ರಶ್ನೆಗಳನ್ನು ನೀಡಿದೆ:
ಕಳೆದ ಹತ್ತು ವರ್ಷಗಳಿಂದ ನೆರೆಯ ರಾಜ್ಯ ಆಂಧ್ರಪ್ರದೇಶದಿಂದ ಮತ್ತು ತಮಿಳುನಾಡಿನಿಂದ ರಕ್ತ ಚಂದನ ಮರಗಳ ಕಳ್ಳಸಾಗಣೆಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ?
ರಕ್ತಚಂದನ ಕಳ್ಳಸಾಗಣೆ ವೇಳೆ ಈವರೆಗೆ ಎಷ್ಟು ಜನರನ್ನು ಬಂಧಿಸಲಾಗಿದೆ?
ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ ಮತ್ತು ಆ ಪ್ರಕರಣಗಳ ಸ್ಥಿತಿ ಏನು?
ಇದರಲ್ಲಿ ಯಾರೆಲ್ಲಾ ಪಾಲುದಾರರು ಇದ್ದಾರೆ?
ಬಲಾಢ್ಯ ಲಾಬಿಯಿಂದ ರಕ್ತ ಚಂದನ ಕಾಡುಗಳನ್ನು ಕತ್ತರಿಸಿ ಕಳ್ಳಸಾಗಣೆ ಮಾಡಿದರೆ ಬಡ ಮತ್ತು ಅಂಚಿನಲ್ಲಿರುವ ಜನರಿಗೆ ದೊಡ್ಡಮೊತ್ತದ ಹಣ ನೀಡಲಾಗುತ್ತದೆ ಎಂಬುದು ಸತ್ಯವೇ?
ಪಕ್ಷಬೇಧವಿಲ್ಲದೆ ಎಲ್ಲಾ ರಾಜಕಾರಣಿಗಳು, ಪೊಲೀಸರು, ದಲ್ಲಾಳಿಗಳು ಮತ್ತು ರಫ್ತುದಾರರಂತಹ ಅನೇಕ ವ್ಯಕ್ತಿಗಳು ರಕ್ತ ಚಂದನ ಮರದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ನಿಜವೇ?
ಬಡ ಜನರನ್ನು ಹೊರತುಪಡಿಸಿ, ರಾಜಕೀಯವಾಗಿ ಪ್ರಬಲವಾಗಿರುವ ಪೊಲೀಸ್ ಅಧಿಕಾರಿಗಳು, ರಫ್ತುದಾರರು, ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರಲ್ಲಿ ಎಷ್ಟು ಮಂದಿಯನ್ನು ಬಂಧಿಸಲಾಗಿದೆ?
ಕಳೆದ ಹತ್ತು ವರ್ಷಗಳಿಂದ ವಶಪಡಿಸಿಕೊಂಡ ರಕ್ತ ಚಂದನ ಮರಗಳ ಪ್ರಮಾಣ ಎಷ್ಟು?
ರಕ್ತ ಚಂದನ ಮರದ ಕಳ್ಳಸಾಗಣೆಯ ಅಪಾಯಗಳ ಬಗ್ಗೆ ಈ ಅಕ್ರಮ ಚಟುವಟಿಕೆಗೆ ಸಾಧನವಾಗಿ ಬಳಕೆಯಾದ ಬಡ ಜನರಿಗೆ ತಿಳಿವಳಿಕೆ ಮೂಡಿಸಲು ಸರ್ಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳು ಯಾವುವು?
ಮಾಫಿಯಾದಿಂದ ಜನರು ಆಮಿಷಕ್ಕೆ ಒಳಗಾಗದಂತೆ ಸಮರ್ಪಕ ಮತ್ತು ಪರ್ಯಾಯ ಉದ್ಯೋಗವನ್ನು ನೀಡಲು ಸರ್ಕಾರ ಕೈಗೊಂಡ ಕ್ರಮಗಳು ಯಾವುವು?
ಕಳ್ಳಸಾಗಣೆ ತಡೆಯಲು ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ಯಾವ ವಿಶೇಷ ಯೋಜನೆಗಳನ್ನು ರೂಪಿಸಿವೆ?
ರಕ್ತ ಚಂದನ ಕಾಡಿನಲ್ಲಿ ಕಳ್ಳಸಾಗಣೆ ಮಾಡಿದ ಅಪರಾಧಕ್ಕಾಗಿ ಆಂಧ್ರಪ್ರದೇಶದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಮತ್ತು ಆ ಪ್ರಕರಣಗಳು ಯಾವ ಹಂತದಲ್ಲಿವೆ?
ವ್ಯಕ್ತಿಯನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಕಾಯ್ದಿರಿಸಿರುವ ನ್ಯಾಯಾಲಯ ಪ್ರಕರಣದ ದೊಡ್ಡ ಸಮಸ್ಯೆಗಳನ್ನು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ವಿಚಾರಣೆಯನ್ನು ಸೆ 28ಕ್ಕೆ ಮುಂದೂಡಲಾಗಿದೆ.