ವಾಟ್ಸಾಪ್ ಗೌಪ್ಯತಾ ನೀತಿ ಸಂಬಂಧ ಸಿಸಿಐನಿಂದ ₹213.14 ಕೋಟಿ ದಂಡ: ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಮೆಟಾ

ಪ್ರಕರಣವನ್ನು ಜನವರಿ 16 ರಂದು ಎನ್‌ಸಿಎಲ್‌ಎಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ.
Meta and NCLAT Delhi
Meta and NCLAT Delhi
Published on

ವಾಟ್ಸಾಪ್‌ ಗೌಪ್ಯತಾ ನೀತಿ ಸಂಬಂಧ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಗೆ ವಿಧಿಸಿರುವ ₹213.14 ಕೋಟಿ ದಂಡದ ಆದೇಶ ಪ್ರಶ್ನಿಸಿ ಮೆಟಾ (ಈ ಹಿಂದಿನ ಫೇಸ್‌ಬುಕ್‌) ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಮೆಟ್ಟಿಲೇರಿದೆ.

ಜನವರಿ 16 ರಂದು ಪ್ರಕರಣದ ವಿಚಾರಣೆ ನಡೆಸುವಂತೆ ಕ್ರಮವಾಗಿ ಮೆಟಾ ಮತ್ತು ವಾಟ್ಸಾಪ್‌ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಮುಕುಲ್ ರೋಹಟಗಿ ನ್ಯಾಯಮಂಡಳಿಯನ್ನುಕೋರಿದರು. ಪ್ರಕರಣದ ಮಹತ್ವವನ್ನು ಅರಿತು ಎನ್‌ಸಿಎಲ್‌ಎಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರೇ ಪ್ರಕರಣದ ವಿಚಾರಣೆ ನಡೆಸುವಂತೆ ಇಬ್ಬರೂ ವಕೀಲರು ಕೋರಿದರು.

Also Read
ವಾಟ್ಸಾಪ್‌ ಗೋಪ್ಯತಾ ನೀತಿಯ ಕುರಿತಾದ ಸಿಸಿಐ ತನಿಖೆಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್‌

ಪ್ರಕರಣವನ್ನು ಜನವರಿ 16 ರಂದು ವಿಚಾರಣೆ ನಡೆಸಲು ನ್ಯಾ. ಭೂಷಣ್‌ ಹಾಗೂ ತಾಂತ್ರಿಕ ಸದಸ್ಯರಾದ ಬರುನ್ ಮಿತ್ರಾ ಮತ್ತು ಅರುಣ್ ಬರೋಕಾ ಅವರಿದ್ದ ಪೀಠ ಸಮ್ಮತಿಸಿದೆ.

ವಾಟ್ಸಾಪ್‌ ಗೌಪ್ಯತಾ ನೀತಿ- 2021ನ್ನು ಜಾರಿಗೆ ತರುವ ಮೂಲಕ ತನ್ನ ಪ್ರಬಲ ಸ್ಥಾನ ದುರುಪಯೋಗಪಡಿಸಿಕೊಂಡ ಮಾರ್ಕ್ ಜುಕರ್‌ಬರ್ಗ್ ಮಾಲೀಕತ್ವದ ಮೆಟಾಗೆ ಸಿಸಿಐ ₹213.14 ಕೋಟಿ ದಂಡ ವಿಧಿಸಿತ್ತು.

ಕೆಲ ನಿರ್ಬಂಧ ಆದೇಶಗಳನ್ನು ಮೆಟಾ ಮತ್ತು ವಾಟ್ಸಾಪ್‌ಗೆ ನೀಡಿದ ಸಿಸಿಐ ನಿರ್ದಿಷ್ಟ ನಡವಳಿಕೆ ಪರಿಹಾರಗಳನ್ನು ನಿಗದಿತ ಗಡುವಿನೊಳಗೆ ಜಾರಿಗೊಳಿಸಲು ನಿರ್ದೇಶಿಸಿತ್ತು.

Also Read
ವಾಟ್ಸಾಪ್‌ ಐರೋಪ್ಯ ನಿಯಮಗಳನ್ನು ಅನುಸರಿಸುವುದಾದರೆ ಭಾರತದ ಐಟಿ ನಿಯಮಗಳನ್ನೇಕೆ ಅನುಸರಿಸಬಾರದು? ಅರ್ಜಿದಾರರ ಪ್ರಶ್ನೆ

ಸೇವಾ ನಿಯಮಾವಳಿ ಮತ್ತು ಗೌಪ್ಯತಾ ನೀತಿ ನವೀಕರಣದ ವಿಚಾರವನ್ನು ವಾಟ್ಸಾಪ್‌ ಜನವರಿ 2021ರಲ್ಲಿ ತನ್ನ ಬಳಕೆದಾರರಿಗೆ ತಿಳಿಸಿತ್ತು. ಫೆಬ್ರವರಿ 8, 2021ರಿಂದ ಅದು ಜಾರಿಗೆ ಬಂದಿತ್ತು. ಫೇಸ್‌ಬುಕ್‌ನೊಂದಿಗೆ ಮಾಹಿತಿ ಹಂಚಿಕೊಳ್ಳುವುದರಿಂದ ವಾಟ್ಸಾಪ್‌ ಬಳಕೆದಾರರನ್ನು ಹೊರಗಿಟ್ಟಿದ್ದ 2016 ನೀತಿಗಿಂತ ಭಿನ್ನವಾಗಿ 2021ರ ನೀತಿ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು. ವಾಟ್ಸಾಪ್‌ ಬಳಕೆ ಮುಂದುವರೆಸಬೇಕಾದಲ್ಲಿ ದತ್ತಾಂಶ ಹಂಚಿಕೊಳ್ಳುವ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಬೇಕಿತ್ತು.

ಈ ವಿಚಾರವಾಗಿ ತನಿಖೆ ಆರಂಭಿಸಿದ್ದ ಸಿಸಿಐ ಭಾರತದ ಮಾರುಕಟ್ಟೆಯಲ್ಲಿ ಮೆಟಾಗೆ ಪ್ರಬಲ ಸ್ಥಾನವಿದ್ದು ಅದು ದತ್ತಾಂಸ ಹಂಚಿಕೆ ಕಡ್ಡಾಯಗೊಳಿಸಿರುವುದು ಬಳಕೆದಾರರ ಸ್ವಾಯತ್ತತೆಯನ್ನು ದುರ್ಬಲಗೊಳಿಸಿದ್ದು ಮೆಟಾ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಸೂಚಿಸುತ್ತದೆ ಎಂದಿತ್ತು.  

Kannada Bar & Bench
kannada.barandbench.com