ತಾಂತ್ರಿಕ ಅವಲಂಬನೆಗೆ ಅದರದ್ದೇ ಆದ ನ್ಯೂನತೆಗಳಿವೆ ಎಂದು ಭಾರತೀಯ ನ್ಯಾಯಾಂಗದಲ್ಲಿ ತಾಂತ್ರಿಕ ಪ್ರಗತಿಗೆ ನಾಂದಿ ಹಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಸ್ಥಾಪನೆಯಾಗಿ 20 ವರ್ಷ ಸಂದ ಹಿನ್ನೆಲೆಯಲ್ಲಿ ಪೀಠದಲ್ಲಿ ಶನಿವಾರ ಆಯೋಜಿಸಲಾಗಿದ್ದ ದ್ವಿದಶಮಾನೋತ್ಸವ ಸಮಾರಂಭದಲ್ಲಿ ಸಿಜೆಐ ಮಾತನಾಡಿದರು.
ಜುಲೈ 19ರಂದು ಜಗತ್ತಿನೆಲ್ಲೆಡೆ ಮೈಕ್ರೋಸಾಫ್ಟ್ ಸ್ಥಗಿತಗೊಂಡು ಸೇವೆ ಮತ್ತು ದೂರ ಸಂಪರ್ಕ ಕ್ಷೇತ್ರ ನಿಷ್ಕ್ರಿಯಗೊಂಡ ಪರಿಣಾಮ ಸುಪ್ರೀಂ ಕೋರ್ಟ್‌ನ ಎರಡು ಕೊಠಡಿಗಳಲ್ಲಿ ನಡೆಯುತ್ತಿದ್ದ ವಿಚಾರಣೆಯ ನೇರ ಪ್ರಸಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದನ್ನು ಅವರು ಪ್ರಸ್ತಾಪಿಸಿದರು.
ಅಲ್ಲದೆ ಈ ಬೆಳವಣಿಗೆಯಿಂದಾಗಿ ತಮ್ಮ ಮಧುರೈ ಪ್ರಯಾಣ ಬಹುತೇಕ ರದ್ದುಗೊಳ್ಳುವಂತಾಗಿತ್ತು ಎಂದು ಕೂಡ ಅವರು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ನೇರ ಪ್ರಸಾರಕ್ಕೆ ತೊಡಕುಂಟಾದ ಹಿನ್ನೆಲೆಯಲ್ಲಿ ವಕೀಲರು ಭೌತಿಕವಾಗಿ ನ್ಯಾಯಾಲಯಕ್ಕೆ ತೆರಳಲ್ಲಿ ಅಲ್ಲಿ ವಾದ ಮಂಡಿಸುವಂತಾಗಿತ್ತು. ಹೀಗಾಗಿ ಪ್ರಕರಣಗಳನ್ನು ಮುಂದೂಡುವಂತೆ ವಕೀಲರು ಕೋರುವಂತಾಗಿತ್ತು.
ಸಿಜೆಐ ಚಂದ್ರಚೂಡ್ ಅವರು ಮಧುರೈಗೆ ಪ್ರಯಾಣಿಸಲು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ತಮ್ಮ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ್ದರು.
ಶುಕ್ರವಾರ, ಬಹುತೇಕ ವಿಂಡೋಸ್ ಬಳಕೆದಾರರು ಹಠಾತ್ ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ಅನುಭವಿಸಿದರು. ತಾತ್ಕಾಲಿಕವಾಗಿ ಕಂಪ್ಯೂಟರನ್ನು ಸ್ಥಗಿತಗೊಳಿಸುವ ಈ ತಾಂತ್ರಿಕ ಸಮಸ್ಯೆ ಜಾಗತಿಕವಾಗಿ ಭಾರೀ ಅಡೆತಡೆಗಳನ್ನು ಉಂಟುಮಾಡಿತು.
ಆದರೆ ವರದಿಗಳ ಪ್ರಕಾರ ಹೀಗಾದದ್ದು ಮೈಕ್ರೋಸಾಫ್ಟ್‌ನಿಂದ ಅಲ್ಲ ಬದಲಿಗೆ ಅಮೆರಿಕ ಮೂಲದ ಸೈಬರ್‌ಸೆಕ್ಯುರಿಟಿ ಕಂಪನಿಯಾದ ಕ್ರೌಡ್‌ಸ್ಟ್ರೈಕ್ ನವೀಕರಣದಿಂದ ಎಂದು ತಿಳಿದುಬಂದಿದೆ.