ತೂಕ ಇಳಿಸಲು ಮಧುಮೇಹ ಔಷಧಗಳ ದುರುಪಯೋಗ: ಸಿಡಿಎಸ್‌ಸಿಒಗೆ ದೆಹಲಿ ಹೈಕೋರ್ಟ್ ನೋಟಿಸ್

ಔಷಧಗಳು ದುರುಪಯೋಗವಾಗುತ್ತಿರುವುದಕ್ಕೆ ಅದರಲ್ಲಿಯೂ ವೈದ್ಯರ ಸಲಹೆ ಇಲ್ಲದೆ ಔಷಧದಂಗಡಿಗಳಲ್ಲಿ ನೇರವಾಗಿ ಖರೀದಿಸುತ್ತಿರುವುದಕ್ಕೆ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿತು.
Delhi hc, ozempic
Delhi hc, ozempic
Published on

ಅಂಗಸೌಷ್ಟವ ಕಾಯ್ದುಕೊಳ್ಳುವುದಕ್ಕಾಗಿ ತೂಕ ಇಳಿಸಲು ಓಜೆಂಪಿಕ್ ರೀತಿಯ ಪ್ರಬಲ ಮಧುಮೇಹ ನಿಯಂತ್ರಣ ಔಷಧಿಗಳನ್ನು ಮನಸೋಇಚ್ಛೆಯಾಗಿ ಬಳಸುತ್ತಿರುವ ಕುರಿತು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (ಸಿಡಿಎಸ್‌ಸಿಒ) ದೆಹಲಿ ಹೈಕೋರ್ಟ್‌ ನಿರ್ದೇಶಿಸಿ ನೋಟಿಸ್‌ ನೀಡಿದೆ.

ರಕ್ತದ ಸಕ್ಕರೆ ಗುಣಮಟ್ಟ ನಿಯಂತ್ರಿಸುವ ಮೂಲಕ ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹೆಸರುವಾಸಿಯಾದ ಓಝೆಂಪಿಕ್ (ಸೆಮಗ್ಲುಟೈಡ್), ಮೌಂಜಾರೊ (ಟಿರ್ಜೆಪಟೈಡ್) ಮತ್ತು ವಿಕ್ಟೋಜಾ (ಲಿರಾಗ್ಲುಟೈಡ್) ರೀತಿಯ ಔಷಧಗಳು ತೂಕ ಇಳಿಸುವ ಕಾರಣಕ್ಕೂ ಜನಪ್ರಿಯತೆ ಗಳಿಸಿವೆ.

Also Read
ಪೇಟೆಂಟ್ ದಾವೆ: ಭಾರತದಲ್ಲಿ ಒಜೆಂಪಿಕ್ ರೀತಿಯ ಔಷಧ ಮಾರುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಡಾ. ರೆಡ್ಡೀಸ್ ಮುಚ್ಚಳಿಕೆ

ಔಷಧಗಳು ದುರುಪಯೋಗವಾಗುತ್ತಿದ್ದು ಅದರಲ್ಲಿಯೂ ವೈದ್ಯರ ಸಲಹೆ ಇಲ್ಲದೆ ಔಷಧದಂಗಡಿಗಳಲ್ಲಿ ನೇರವಾಗಿ ಖರೀದಿಸುತ್ತಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತೀವ್ರ ಕಳವಳ ವ್ಯಕ್ತಪಡಿಸಿತು. ಗಂಭೀರ ಪರಿಣಾಮ ಬೀರುವ ಈ ರೀತಿಯ ಔಷಧಿಗಳನ್ನು ನಿಯಂತ್ರಿಸಬೇಕು ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ತೂಕ ಇಳಿಸುವ ರಾಮಬಾಣ ಎಂದು ಕೆಲ ಜಿಮ್‌ಗಳು ಈ ಔಷಧಗಳನ್ನು ಶಿಫಾರಸುಮಾಡುತ್ತಿವೆ ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ದಿಯಾ ಕಪೂರ್ ತಿಳಿಸಿದರು. ಆಗ ನ್ಯಾಯಮೂರ್ತಿ ಗಡೇಲಾ ಅವರು ಅಂತಹ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡಬೇಕು ಎಂದು ಹೇಳಿದರು.

ಭಾರತಕ್ಕೆ ವಿಶೇಷವಾದ ಕ್ಲಿನಿಕಲ್‌ ಪ್ರಯೋಗ, ಸುರಕ್ಷತಾ ಪರಿಶೀಲನೆ ಅಥವಾ ನಿಯಂತ್ರಕ ಸುರಕ್ಷತಾ ಕ್ರಮಗಳಿಲ್ಲದೆ ಅಂಗ ಸೌಷ್ಟವದ ಕಾರಣಕ್ಕೆ ತೂಕ ಇಳಿಸುವುದಕ್ಕಾಗಿ ಈ ಔಷಧಗಳನ್ನು ಪರ್ಯಾಯವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಜಿತೇಂದ್ರ ಚೌಕ್ಸೆ ಅವರು ಪಿಐಎಲ್‌ ಸಲ್ಲಿಸಿದ್ದಾರೆ. ಅಲ್ಲದೆ ಈ ಔಷಧ ಸೇವಿಸಿ ಇಂಗ್ಲೆಂಡ್‌ನಲ್ಲಿ 82 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಈ ಸಂಬಂಧ ಪ್ಯಾಂಕ್ರಿಯಾಟೈಟಿಸ್, ಥೈರಾಯ್ಡ್ ಕ್ಯಾನ್ಸರ್, ಹೃದಯರಕ್ತನಾಳದ ತೊಂದರೆಗಳು ಮತ್ತು ಸಂಭಾವ್ಯ ನರಮಂಡಲ ಹಾನಿ ಕುರಿತಂತೆ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಭಾವಿಗಳು, ಚಿಕಿತ್ಸಾಲಯಗಳು ಮತ್ತು ಡಿಜಿಟಲ್ ವೆಲ್‌ನೆಸ್ ವೇದಿಕೆಗಳ ಮೂಲಕ, ವಿಶೇಷವಾಗಿ ಯುವಕರನ್ನು ಗುರಿಯಾಗಿಸಿಕೊಂಡು ಈ ಔಷಧಿಗಳ ಅನಿಯಂತ್ರಿತ ಪ್ರಚಾರ ನಡೆಯುತ್ತಿದೆ ಎಂದು ಕೂಡ ಅರ್ಜಿ ಕಳವಳ ವ್ಯಕ್ತಪಡಿಸಿದೆ.

Also Read
ಕೇಜ್ರಿವಾಲ್ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂಬುದನ್ನು ಅವರ ಚುನಾವಣಾ ಪ್ರಚಾರ ತೋರಿಸಿದೆ: ದೆಹಲಿ ನ್ಯಾಯಾಲಯ

ಆ ವಿಷಯಾಧಾರಿತ ಮನವಿಗಳ ಕುರಿತು ನ್ಯಾಯಾಲಯ ನಿರ್ದೇಶನ ನೀಡದಿದ್ದರೂ, ಅರ್ಜಿದಾರರ ಮನವಿ ಪರಿಗಣಿಸಿ ಮೂರು ತಿಂಗಳೊಳಗೆ ತಾರ್ಕಿಕ ಉತ್ತರ ಸಲ್ಲಿಸುವಂತೆ ಸಿಎಇಎಸ್‌ಸಿಒಗೆ ನಿರ್ದೇಶಿಸಿತು. ಜೊತೆಗೆ ಅರ್ಜಿದಾರರು ಅವಲಂಬಿಸಿರುವ ಅಧ್ಯಯನಗಳು ಮತ್ತು ದತ್ತಾಂಶಗಳ ದಾಖಲೆ ಪ್ರತಿಗಳನ್ನು ಸಲ್ಲಿಸುವಂತೆ ಕೇಳಿತು.

ಮತ್ತೊಂದೆಡೆ ದೆಹಲಿ ಹೈಕೋರ್ಟ್ ಡಾ. ರೆಡ್ಡೀಸ್ ಮತ್ತು ನೊವೊ ನಾರ್ಡಿಸ್ಕ್ (ಓಜೆಂಪಿಕ್ ತಯಾರಕರು) ನಡುವಿನ ಓಜೆಂಪಿಕ್ ಪೇಟೆಂಟ್ ದಾವೆಯನ್ನು ಕೂಡ ವಿಚಾರಣೆ ನಡೆಸುತ್ತಿದೆ .

Kannada Bar & Bench
kannada.barandbench.com