
ಪಿಲಿಭಿಟ್‌ನ ಪುರಸಭೆಗೆ ಸೇರಿದ ಜಾಗದಲ್ಲಿದ್ದ ಸಮಾಜವಾದಿ ಪಕ್ಷದ ಕಚೇರಿಯ ತೆರವು ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು ಕಚೇರಿ ಹಂಚಿಕೆಯಾಗಿರುವುದಕ್ಕೆ ಕಾರಣ ರಾಜಕೀಯ ದುರುಪಯೋಗ ಮತ್ತು ತೋಳ್ಬಲ ಎಂದು ಹೇಳಿದೆ [ಸಮಾಜವಾದಿ ಪಕ್ಷ ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ಮೊಕದ್ದಮೆಯನ್ನು ಮುಂದುವರೆಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು.
"ನಾವು ಸಿವಿಲ್ ನ್ಯಾಯಾಲಯದ ಪಾತ್ರ ವಹಿಸಿ ನಿಮಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಇವು ಹಂಚಿಕೆಗಳಲ್ಲ, ರಾಜಕೀಯ ಹಣಬಲ ಮತ್ತು ತೋಳ್ಬಲ ಬಳಸಿಕೊಂಡು ಮೋಸದಿಂದ ಠಿಕಾಣಿ ಹೂಡಿರುವುದಾಗಿದೆ " ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪಕ್ಷದ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ ದವೆ, ಆಸ್ತಿಯನ್ನು 2005ರಲ್ಲಿ ಪಕ್ಷಕ್ಕೆ ವಿಧ್ಯುಕ್ತವಾಗಿ ಹಂಚಿಕೆ ಮಾಡಲಾಗಿತ್ತು ಮತ್ತು ಕಾನೂನು ಪ್ರಕ್ರಿಯೆಗಳ ಮೂಲಕವಷ್ಟೇ ತೆರವು ಮಾಡಬಹುದು ಎಂದರು. ಜಾಗ ಹಂಚಿಕೆಯಾದ ಬಗೆಯನ್ನು ಕೂಡಲೇ ನ್ಯಾಯಾಲಯ ಪ್ರಶ್ನಿಸಿತು.
ನಗರ ಪಾಲಿಕೆ 2005ರಲ್ಲಿ ಹಂಚಿಕೆ ಮಾಡಿತ್ತು. ಪಕ್ಷ ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದೆ ಎಂದು ದವೆ ಅವರು ಹೇಳಿದಾಗ ನ್ಯಾಯಾಲಯ ಸಿಡಿಮಿಡಿಗೊಂಡಿತು.
"ರಾಜಕೀಯ ಅಧಿಕಾರದ ದುರ್ಬಳಕೆ ಮತ್ತು ದುರುಪಯೋಗಯವನ್ನು ಹೀಗೆ ಮಾಡಿಕೊಳ್ಳಬಹುದೇ… ನಿಮ್ಮ ಪಕ್ಷ ಅಧಿಕಾರದಲ್ಲಿತ್ತು. ₹115 ಬಾಡಿಗೆಗೆ ರಾಜಕೀಯ ಪಕ್ಷವೊಂದಕ್ಕೆ ಪುರಸಭೆ ಕಟ್ಟಡ ಲಭ್ಯವಾಗಬೇಕು ಎಂದು ನೀವು ಭಾವಿಸುವಿರಾ?” ಎಂದು ನ್ಯಾ, ಕಾಂತ್ ಪ್ರಶ್ನಿಸಿದರು.
ಈ ಹಂತದಲ್ಲಿ ಕಚೇರಿ ತೆರವುಗೊಳಿಸುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ದವೆ ಪಟ್ಟು ಹಿಡಿದರು. ಆಗ ನ್ಯಾಯಾಲಯ ಕಟ್ಟಡ ಹಂಚಿಕೆ ಹಿಂದಿನ ಪ್ರಕ್ರಿಯೆಯನ್ನು ಟೀಕಿಸಿತು.
“ರಾಜಕೀಯ ಸ್ಥಾನಮಾನ ಮತ್ತು ಅಧಿಕಾರ ದುರುಪಯೋಗ ಮಾಡಿಕೊಳ್ಳುವಾಗ ಪಕ್ಷಕ್ಕೆ ಯಾವ ಕಾನೂನು ಪಾಲಿಸಬೇಕು ಎಂಬುದು ನೆನಪಿಗೆ ಬರುವುದಿಲ್ಲ. ಕ್ರಮ ತೆಗೆದುಕೊಳ್ಳುತ್ತಾರೆ ಎಂದಾಗ ಎಲ್ಲವೂ ನೆನಪಾಗುತ್ತದೆ” ಎಂದು ಕುಟುಕಿತು.
"ಎಂದಾದರೂ ₹115ಕ್ಕೆ ಪುರಸಭೆಯ ಕಟ್ಟಡ ಬಾಡಿಗೆ ದೊರೆಯುತ್ತದೆಯೇ? ಮತ್ತು ಅದನ್ನು ನಂಬಬೇಕೆಂದು ನೀವು ಬಯಸುತ್ತೀರಾ? ಈ ದೇಶದ ಜನರಿಗೆ ವ್ಯವಸ್ಥೆಯಲ್ಲಿ ಸ್ವಲ್ಪ ನಂಬಿಕೆ ಉಳಿಯುವಂತಾಗಬೇಕು” ಎಂದು ಪೀಠ ಹೇಳಿತು.
ವಿಚಾರಣಾ ನ್ಯಾಯಾಲಯದಲ್ಲಿ ಈಗಾಗಲೇ ಸಿವಿಲ್ ಮೊಕದ್ದಮೆ ಹೂಡಲಾಗಿದ್ದು ವಿಚಾರಣೆ ವೇಳೆ ಕಚೇರಿ ತೆರವುಗೊಳಿಸದಂತೆ ರಕ್ಷಣೆ ಕೋರಿರುವುದಾಗಿ ದವೆ ವಿವರಿಸಿದರು. ಆದರೆ ಆ ಮೊಕದ್ದಮೆ ಬಾಕಿ ಇರುವಾಗ ವಿಚಾರಣಾ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಅತಿಕ್ರಮಿಸಲು ಅಥವಾ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.
"ನೀವು (ಸಮಾಜವಾದಿ ಪಕ್ಷ) ಇದೀಗ ಅನಧಿಕೃತ ನಿವಾಸಿ. ನಿಮ್ಮ ಮೊಕದ್ದಮೆಯಲ್ಲಿ ನೀವು ತಡೆಯಾಜ್ಞೆಗೆ ಅರ್ಜಿ ಸಲ್ಲಿಸಬಹುದು" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಸ್ಥಳೀಯ ವಕೀಲರ ಸಂಘ ಪದೇ ಪದೇ ಮುಷ್ಕರ ನಡೆಸುತ್ತಿರುವುದರಿಂದ ಮೊಕದ್ದಮೆಯನ್ನು ಪರಿಣಾಮಕಾರಿಯಾಗಿ ವಿಚಾರಣೆ ನಡೆಸಿಲ್ಲ ಎಂದು ದವೆ ಪ್ರತಿಕ್ರಿಯಿಸಿದರು. ಕನಿಷ್ಠ ನಾಲ್ಕು ವಾರಗಳ ಕಾಲ ಕಚೇರಿ ತೆರವುಗೊಳಿಸದಂತೆ ರಕ್ಷಣೆ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದರು.
ಆಗ ನ್ಯಾ. ಕಾಂತ್ ಅವರು "ದಯವಿಟ್ಟು ನ್ಯಾಯಾಲಯ ಮುಷ್ಕರ ನಡೆಸುತ್ತಿದೆ, ವಕೀಲರು ಮುಷ್ಕರ ನಡೆಸುತ್ತಿದ್ದಾರೆ ಎಂದು ಹೇಳಬೇಡಿ. ಎಲ್ಲದಕ್ಕೂ ನಮ್ಮನ್ನು ದೂಷಿಸಬೇಡಿ" ಎಂದರು.
ಅಕ್ರಮ ಕಚೇರಿ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಅಸಾಧಾರಣ ಪರಿಹಾರ ಕೋರುವ ಬದಲು, ಸಿವಿಲ್ ನ್ಯಾಯಾಲಯದಲ್ಲಿ ಪರಿಹಾರ ಪಡೆಯುವುದು ಪಕ್ಷಕ್ಕೆ ಸೂಕ್ತವಾದ ಮಾರ್ಗ ಎಂದು ಸ್ಪಷ್ಟಪಡಿಸಿದ ಪೀಠ ವಿಚಾರಣೆ ಮುಕ್ತಾಯಗೊಳಿಸಿತು.