ಶಬರಿಮಲೆ ನಿಗದಿತ ಅವಧಿಗೂ ಮೊದಲೇ ಅರಣ್ಯ ಮಾರ್ಗ ತೆರೆಯಲು ಕೇರಳ ಹೈಕೋರ್ಟ್‌ ನಕಾರ

ಅರಣ್ಯ ಸಂರಕ್ಷಣೆ, ಪೆರಿಯಾರ್ ಹುಲಿ ಅಭಯಾರಣ್ಯದ ಪಾವಿತ್ರ್ಯ ಕಾಪಾಡುವುದು ಶಬರಿಮಲೆಯ ತತ್ವಮಸಿ (ವ್ಯಕ್ತಿಯೇ ಪರಬ್ರಹ್ಮ) ಎಂಬ ಸಿದ್ಧಾಂತಕ್ಕೆ ವಿರುದ್ಧವಲ್ಲ ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.
sabarimala temple
sabarimala temple
Published on

ಶಬರಿಮಲೆ ದೇವಸ್ಥಾನಕ್ಕೆ ಸಾಂಪ್ರದಾಯಿಕ ಅರಣ್ಯ ಚಾರಣ ಮಾರ್ಗವನ್ನು ಅಥವಾ 'ಕಾನನ ಪಥ'ವನ್ನು ಅಧಿಕಾರಿಗಳು ನಿಗದಿಪಡಿಸಿದ ಅವಧಿಗೆ ಮುನ್ನವೇ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆದೇಶಿಸಲಾಗದು ಎಂದಿರುವ ಕೇರಳ ಹೈಕೋರ್ಟ್‌ ಇದು ಕೇವಲ ಯಾತ್ರಿಕರ ವೈಯಕ್ತಿಕ ಅನುಕೂಲಕ್ಕೆ ಅನುಗುಣವಾಗಿರುತ್ತದೆ ಎಂದಿದೆ [ವಿ ಶ್ಯಾಮಲನ್‌ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭಕ್ತರ ಸುರಕ್ಷತೆ ಹಾಗೂ ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಹುಲಿ ಅಭಯಾರಣ್ಯ ರಕ್ಷಣೆಯಂತಹ ಅನೇಕ ಅಂಶಗಳನ್ನು ಪರಿಗಣಿಸಿ ಮಾರ್ಗವನ್ನು ಭಕ್ತರ ಸಂಚಾರಕ್ಕೆ ತೆರೆಯುವ ಅವಧಿ ನಿಗದಿಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರಿದ್ದ ಪೀಠ ತಿಳಿಸಿದೆ.

Also Read
ಶಬರಿಮಲೆ ಚಿನ್ನ ಕಳ್ಳತನ: ಎಫ್ಐಆರ್, ಎಫ್ಐಎಸ್ ಪ್ರತಿ ನೀಡದಿರುವುದನ್ನು ಕೇರಳ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಇ ಡಿ

ಮಾರ್ಗ ತೆರೆಯುವ ಅವಧಿಯನ್ನು ಗಮನಿಸಿಯೇ ಯಾತ್ರಿಕರು ಶಬರಿಮಲೆಗೆ ಪ್ರಯಾಣ ಬೆಳೆಸಬೇಕೆಂದು ನ್ಯಾಯಾಲಯ ಸಲಹೆ ನೀಡಿದೆ.  ಆಡಳಿತ, ಸಂಚಾರ ಹಾಗೂ ಸುರಕ್ಷತೆಯನ್ನು ನಿರ್ಲಕ್ಷಿಸಿ ಮಾರ್ಗವನ್ನು ಮೊದಲೇ ತೆರೆಯಬೇಕೆಂದು ಭಕ್ತರು ಒತ್ತಾಯಿಸುವಂತಿಲ್ಲ ಅರಣ್ಯ ಮಾರ್ಗದ ಮೂಲಕವಲ್ಲದೆ ದೇವಾಲಯ ತಲುಪಲು ಬೇರೆ ಮಾರ್ಗಗಳಿವೆ ಎಂತಲೂ ನ್ಯಾಯಾಲಯ ಹೇಳಿದೆ.

ನಿರ್ದಿಷ್ಟ ಅರಣ್ಯ ಮಾರ್ಗದಲ್ಲಿ ದೇವಾಲಯ ತಲುಪುವ ವಿಧಾನವು ಸಂವಿಧಾನದ 25ನೇ ವಿಧಿಯಡಿ ಭಕ್ತರ ಮೂಲಭೂತ ಹಕ್ಕಿನ ಭಾಗ ಎಂದು ಪರಿಗಣಿಸುವಷ್ಟು ಅತ್ಯಾವಶ್ಯಕ ಧಾರ್ಮಿಕ ಆಚರಣೆಯಲ್ಲ ಎಂದು ಅದು ಹೇಳಿದೆ.

ತೀರ್ಥಯಾತ್ರೆಯನ್ನು ಪೂರ್ಣಗೊಳಿಸಲು ಎರುಮೇಲಿ ಕಾಡಿನ ಮೂಲಕವೇ ಹಾದು ಬರಬೇಕು ಎಂದು ಯಾವುದೇ ಧರ್ಮ ಗ್ರಂಥ ಆದೇಶಿಸುವುದಿಲ್ಲ. ಹಿಂದೆ ರಸ್ತೆಗಳಿಲ್ಲದ ಸಂದರ್ಭದಲ್ಲಿ ಎರುಮೇಲಿ ಮೂಲಕವೇ ಸಾಗಬೇಕಾದುದು ಅನಿವಾರ್ಯವಾಗಿತ್ತು. ಯಾವುದೇ ಸಂದರ್ಭದಲ್ಲೂ, ದೇವಾಲಯಕ್ಕೆ ಈ ಮಾರ್ಗವನ್ನು ಅತ್ಯಾವಶ್ಯಕ ಧಾರ್ಮಿಕ ಆಚರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನವೆಂಬರ್ 13ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಯಾವುದೇ ಸಂದರ್ಭದಲ್ಲೂ ದೇಗುಲ ತಲುಪುವ ರೀತಿ ಧಾರ್ಮಿಕ ಆಚರಣೆಯ ಅಗತ್ಯ ಭಾಗವಲ್ಲ
ಕೇರಳ ಹೈಕೋರ್ಟ್

ಆದ್ದರಿಂದ, ನವೆಂಬರ್ 15 ರೊಳಗೆ ಮಾರ್ಗ ತೆರೆಯುವಂತೆ ಕೋರಿ ದೆಹಲಿ ಮೂಲದ ವಕೀಲ ಮತ್ತು ಭಕ್ತ ವಿ ಶ್ಯಾಮ್‌ ಮೋಹನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ತಮಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ನವೆಂಬರ್ 17ರಂದು ಇ- ಪಾಸ್‌ ದೊರೆತಿತ್ತು. ಆದರೆ ಅರಣ್ಯ ಮಾರ್ಗ ಯಾವಾಗ ಸಂಚಾರಕ್ಕೆ ಮುಕ್ತವಾಗುತ್ತದೆ ಎಂಬುದು ಸ್ಪಷ್ಟವಾಗಿರಲಿಲ್ಲ. 17ರಂದು ದರ್ಶನಕ್ಕೆ ಬರುವ ಭಕ್ತರು ಅದೇ ದಿನ ಪರಂಪರೆಯ ಪಾದಯಾತ್ರೆ ಮಾಡಿ ದರ್ಶನ ಪಡೆಯುವುದು ಅಸಾಧ್ಯವೆಂದು ಹೇಳಿದ್ದರು.

ದೇವಸ್ಥಾನ ತಲುಪುವ ಅರಣ್ಯ ಮಾರ್ಗ ಪೆರಿಯಾರ್ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುತ್ತದೆ. ಹುಲಿ, ಆನೆ, ಚಿರತೆ ಹಾಗೂ ಇನ್ನಿತರ ವನ್ಯಜೀವಿಗಳು ಇಲ್ಲಿ ವಾಸಿಸುತ್ತವೆ ಎಂಬ ವಾದ ಪರಿಗಣಿಸಿದ ನ್ಯಾಯಾಲಯ ಹಿಂದೆ ಮನಸ್ಸಿಗೆ ಬಂದಂತೆ ಭಕ್ತರು ಅರಣ್ಯದಲ್ಲಿ ಸಂಚರಿಸಿದ್ದರಿಂದ ಪರಿಸರ ನಾಶ, ಮಾನವ ವನ್ಯಜೀವಿ ಸಂಘರ್ಷ, ಕಾಲ್ತುಳಿತ ಉಂಟಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದರು. ಆದ್ದರಿಂದ, ಅರಣ್ಯ ಸಂರಕ್ಷಣೆ ಹಾಗೂ ಯಾತ್ರಿಕರ ಸುರಕ್ಷತೆಗಾಗಿ ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

Also Read
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ದೇವಾಲಯದ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದ ಕೇರಳ ಹೈಕೋರ್ಟ್

ಅಂತೆಯೇ ಮಕರವಿಳಕ್ಕುವಿಗೂ ಮೊದಲು ದೇವಾಲಯ ಮತ್ತು ಮಾರ್ಗಗಳ ಧಾರಣಾ ಸಾಮರ್ಥ್ಯವನ್ನು ವಿವರವಾಗಿ ಪ್ರಕಟಿಸಬೇಕು ಎಂಬುದೂ ಸೇರಿದಂತೆ ವಿವಿಧ ನಿರ್ದೇಶನಗಳನ್ನು ಅದು ನೀಡಿತು.

ಅರಣ್ಯ ಸಂರಕ್ಷಣೆ, ಪೆರಿಯಾರ್ ಹುಲಿ ಅಭಯಾರಣ್ಯದ ಪಾವಿತ್ರ್ಯ ಕಾಪಾಡುವುದು ಶಬರಿಮಲೆಯ ತತ್ವಮಸಿ (ವ್ಯಕ್ತಿಯೇ ಪರಬ್ರಹ್ಮ) ಎಂಬ ಸಿದ್ಧಾಂತಕ್ಕೆ ವಿರುದ್ಧವಾಗಿರದೆ ಒಟ್ಟೊಟ್ಟಿಗೆ ಇರುವಂತಹದ್ದು ಎಂದು ನ್ಯಾಯಾಲಯ ಬುದ್ಧಿವಾದ ಹೇಳಿತು.

Kannada Bar & Bench
kannada.barandbench.com