'ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಸಾಧ್ಯವೇ?' ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ

ಕೇಂದ್ರ ಅನುಮೋದಿಸಿರುವ ಸಾಲ ಮರುಪಾವತಿ ಅವಧಿ ಪರಿಷ್ಕರಣೆ (ಲೋನ್ ರೀಸ್ಟ್ರಕ್ಚರಿಂಗ್ ಮೊರಟೋರಿಯಂ) ಸೀಮಿತ ಪರಿಹಾರವಾಗಿದೆ ಎಂದು ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.
Wayanad district and Kerala High Court
Wayanad district and Kerala High Court
Published on

ಕಳೆದ ವರ್ಷ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸಂತ್ರಸ್ತರ ಸಾಲ ಮನ್ನಾ ಮಾಡಲು ಉದ್ದೇಶಿಸಲಾಗಿದೆಯೇ ಎಂದು ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ [ಕೇರಳದಲ್ಲಿ ನೈಸರ್ಗಿಕ ವಿಕೋಪಗಳ ತಡೆ ಮತ್ತು ನಿರ್ವಹಣೆ ಕುರಿತಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಮೊಕದ್ದಮೆ].

ಆರ್‌ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾಲ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂಬ ಸಹಾಯಕ ಸಾಲಿಸಿಟರ್ ಜನರಲ್ ಎ ಆರ್‌ ಎಲ್ ಸುಂದರೇಶನ್ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಈಶ್ವರನ್ ಎಸ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿತು.

Also Read
ಅನುಕಂಪ ಕಳೆದುಕೊಂಡಿದ್ದೇವೆ: ವಯನಾಡ್‌ ಭೂದುರಂತದ ಪರಿಹಾರದ ಹಣದಲ್ಲಿ ಇಎಂಐ ಕಡಿತಕ್ಕೆ ಕೇರಳ ಹೈಕೋರ್ಟ್‌ ಕಿಡಿ

ಆದರೆ ಬಾಕಿ ಇರುವ ಸಾಲ ಮರುಪಾವತಿ ಅವಧಿಯ ಪರಿಷ್ಕರಣೆಯನ್ನು (ಲೋನ್‌ ರೀಸ್ಟ್ರಕ್ಚರಿಂಗ್‌ ಮೊರಾಟೋರಿಯಂ) ಕೇವಲ ಒಂದು ವರ್ಷದವರೆಗೆ ವಿಸ್ತರಿಸಬಹುದು ಎಂದು ಸುಂದರೇಶನ್‌ ಅವರು ಹೇಳಿದಾಗ ಆ ಪರಿಹಾರ ಸಾಲದು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ಎಸ್‌ಎಲ್‌ಬಿಸಿ ಕೇವಲ ಸಾಲ ಮರುಪಾವತಿ ಅವಧಿ ಪರಿಷ್ಕರಣೆಯ ಶಿಫಾರಸು ಮಾಡುತ್ತದೆಯೇ ವಿನಾ ಸಾಲ ಮನ್ನಾ ಮಾಡುವುದಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ಸಾಲ ಮನ್ನಾ ಮಾಡುವ ಅಗತ್ಯವಿದೆಯೇ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಆಲೋಚಿಸಬೇಕು... ಅರ್ಥಾತ್‌, ಯಾರೊಬ್ಬರಾದರೂ ವಾಸ್ತವವನ್ನು ಅರಿಯಬೇಕು" ಎಂದು ನ್ಯಾಯಮೂರ್ತಿ ನಂಬಿಯಾರ್ ಮೌಖಿಕವಾಗಿ ಹೇಳಿದರು.

ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ನಂತರದ ಪರಿಸ್ಥಿತಿಯನ್ನು ಗಮನಿಸಿದರೆ ಸಾಲ ಮನ್ನಾ ಅಗತ್ಯವಿದೆಯೇ ಎಂಬುದನ್ನು ಪರಿಗಣಿಸಲು ಕೇಂದ್ರ ಸರ್ಕಾರ  'ಆಲೋಚಿಸಬೇಕು' ಎಂದು ಪೀಠ ಹೇಳಿದೆ.

"ಸಾಲ ಮರುಪಾವತಿ ಪರಿಷ್ಕರಣಾ ಅವಧಿಯ (ಮೊರಟೋರಿಯಂ) ವೇಳೆ ಬಡ್ಡಿಯೂ ಸೇರುತ್ತದೆ, ಅಲ್ಲವೇ? ಹಾಗಾದರೆ ಸಂತ್ರಸ್ತರಿಗೆ ನೀಡಲಾದ ಪ್ರಯೋಜನವೇನು " ಎಂದು ನ್ಯಾಯಮೂರ್ತಿ ನಂಬಿಯಾರ್ ಪ್ರಶ್ನಿಸಿದರು.

ಕೋವಿಡ್‌ ಅವಧಿಯಲ್ಲೂ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ ಎಂದು  ಎಎಸ್‌ಜಿ ಹೇಳಿದಾಗ ನ್ಯಾಯಾಲಯ ಕೇಂದ್ರ ಸರ್ಕಾರವು ಅತಾರ್ಕಿಕತೆಯ ಈ ಹಿಂದಿನ ಉದಾಹರಣೆಯನ್ನು ಉಲ್ಲೇಖಿಸಿ ತದನಂತರದ ಆದೇಶವನ್ನು ಸಮರ್ಥಿಸಿಕೊಳ್ಳಲು ಆಗದು ಎಂದು ಕಿವಿ ಹಿಂಡಿತು.

Also Read
ವಯನಾಡ್‌ ಭೂಕುಸಿತ: ಸಂತ್ರಸ್ತರ ಪುನರ್ವಸತಿ, ಮುಂಜಾಗರೂಕತಾ ಕ್ರಮದ ಕುರಿತು ಪ್ರತಿ ಶುಕ್ರವಾರ ಕೇರಳ ಹೈಕೋರ್ಟ್‌ ವಿಚಾರಣೆ

ಸಾಲ ಮರುಪಾವತಿ ಅವಧಿ ಪರಿಷ್ಕರಣೆಯ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಎಲ್ಲಾ ಪಾಲುದಾರರ ಸಮ್ಮತಿ ಪಡೆದೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಎಸ್‌ಜಿ ಹೇಳಿದಾಗ “ಇದು ಸಾಲ ನೀಡಿದವರ ಸರ್ವಾನುಮತದ ನಿರ್ಧಾರ, ಆದರೆ ಸಾಲಗಾರರ ಕಷ್ಟ ಕೇಳುವವರು ಯಾರು?” ಎಂದು ನ್ಯಾಯಾಲಯ ತಿವಿಯಿತು.

ಸಾಲ ಮನ್ನಾ ಸೇರಿದಂತೆ ಯಾವುದೇ ಹೆಚ್ಚಿನ ಪರಿಹಾರ ಪರಿಗಣಿಸಲಾಗುತ್ತಿದೆಯೇ ಮತ್ತು ಯಾವ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಸ್ಪಷ್ಟವಾಗಿ ವಿವರಿಸುವ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಇಂದು ಕೇಂದ್ರಕ್ಕೆ ನಿರ್ದೇಶನ ನೀಡಿತು.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 9ರಂದು ನಡೆಯಲಿದೆ.

Kannada Bar & Bench
kannada.barandbench.com