ನ್ಯಾಯಾಧೀಶರನ್ನು ಹೆಚ್ಚಿಗೆ ನೇಮಿಸದೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಮಾಡುವುದು ನಿರರ್ಥಕ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಎಚ್ಚರಿಕೆ ನೀಡಿದರು.
ಯುನಿಸೆಫ್ ಸಹಯೋಗದೊಂದಿಗೆ ಬಾಲನ್ಯಾಯ ಕುರಿತಾದ ಸುಪ್ರೀಂ ಕೋರ್ಟ್ ಸಮಿತಿ ಆಯೋಜಿಸಿರುವ ಪೋಕ್ಸೊ ಕಾಯಿದೆ ಬಗೆಗಿನ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು. ಪೋಕ್ಸೊ ಕಾಯಿದೆ ಜಾರಿಗೆ ಬಂದ ಹತ್ತು ವರ್ಷಗಳಲ್ಲಿ ನಡೆಯುತ್ತಿರುವ ಇಂತಹ ಏಳನೇ ಕಾರ್ಯಕ್ರಮ ಇದಾಗಿದೆ.
ದೇಶದಾದ್ಯಂತ ಸುಮಾರು 2.26 ಲಕ್ಷ ಪ್ರಕರಣಗಳ ವಿಚಾರಣೆ ಬಾಕಿ ಇದ್ದು ಇದನ್ನು ನಿಭಾಯಿಸಲು ಸುಮಾರು 400 ಹೊಸ ತ್ವರಿತ ಪೋಕ್ಸೊ ನ್ಯಾಯಾಲಯಗಳನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಉಲ್ಲೇಖಿಸಿ ಈ ಮಾತುಗಳನ್ನಾಡಿದರು.
ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದ್ದರೂ, ಹೆಚ್ಚಿನ ನ್ಯಾಯಾಧೀಶರ ನೇಮಕಾತಿಯ ಜೊತೆಗೆ ನ್ಯಾಯಾಧೀಶರು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡದೆ ಹಾಗೂ ಸಂವೇದನಾಶೀಲರನ್ನಾಗಿಸದ ಹೊರತು ನ್ಯಾಯಾಲಯಗಳ ಸ್ಥಾಪನೆ ನಿರರ್ಥಕವಾಗುತ್ತದೆ ಎಂದು ಅವರು ಎಚ್ಚರಿಸಿದರು.
"ಕೇಂದ್ರ ಸರ್ಕಾರ ತ್ವರಿತ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಈ ಪರಿಸ್ಥಿತಿಗೆ ಪರಿಹಾರ ಸೂಚಿಸಿದೆ. ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಲು ಮತ್ತು ವಿಲೇವಾರಿ ಮಾಡಲು ಸುಮಾರು 400 ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ನಾನು ತಿಳಿದಿದ್ದೇನೆ. ಇದು ಖಂಡಿತ ಸ್ವಾಗತಾರ್ಹ ಕ್ರಮವಾಗಿದೆ. ಕಾಯಿದೆಯಡಿ ಅಪರಾಧಗಳನ್ನು ವಿಚಾರಣೆ ಮಾಡಲು ಹೆಚ್ಚಿನ ನ್ಯಾಯಾಧೀಶರ ನೇಮಕಾತಿಯ ಜೊತೆಗೆ ನ್ಯಾಯಾಧೀಶರು, ಸಾರ್ವಜನಿಕ ಅಭಿಯೋಜಕರು, ಪೊಲೀಸ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸಂವೇದನಾಶೀಲರನ್ನಾಗಿಸದ ಹೊರತು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದು ನಿರರ್ಥಕ ಎಂದು ಎಚ್ಚರಿಕೆ ನೀಡಬೇಕಿದೆ, ”ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ದೇಶದಲ್ಲಿ ಸರ್ಕಾರ ಸ್ಥಾಪಿಸಿರುವ 1,000 ತ್ವರಿತ ನ್ಯಾಯಾಲಯಗಳಲ್ಲಿ 300 ನ್ಯಾಯಾಲಯಗಳು ಪೋಕ್ಸೊ ಪ್ರಕರಣಗಳಿಗೆ ಸಂಬಂಧಿಸಿವೆ ಎಂದು ಹೇಳಿದ್ದರು.
ಮರುಆಘಾತ ತಡೆಯವ ನಿಟ್ಟಿನಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವಿಕೆ, ಮಕ್ಕಳ ಸ್ನೇಹಿ ನ್ಯಾಯದಾನ ಇತ್ಯಾದಿ ವಿಚಾರಗಳ ಕುರಿತಂತೆಯೂ ನ್ಯಾ. ನಾಗರತ್ನ ಮಾತನಾಡಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಸ್ಮೃತಿ ಇರಾನಿ ಮತ್ತು ಯುನಿಸೆಫ್-ಭಾರತದ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫರಿ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರ ಮತ್ತು ಕಾನೂನು ಜಾರಿ ಅಧಿಕಾರಿಗಳು, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಮಂಡಳಿ ಹಾಗೂ ಪರಿಣತರು ಭಾಗವಹಿಸಿದ್ದಾರೆ.