ಅರ್ಜಿದಾರನಿಗೆ ₹ 40,000ಕ್ಕಿಂತಲೂ ಅಧಿಕ ವಾರ್ಷಿಕ ಆದಾಯ: ಅಪಘಾತ ಪರಿಹಾರ ನಿರಾಕರಿಸಿದ ದಕ್ಷಿಣ ಕನ್ನಡ ಎಂಎಸಿಟಿ

₹ 40,000ಕ್ಕಿಂತಲೂ ಅಧಿಕ ವಾರ್ಷಿಕ ಆದಾಯ ಗಳಿಸುತ್ತಿರುವ ನಾಯಕ್, ಮೋಟಾರು ವಾಹನ ಪರಿಹಾರ ಕಾಯಿದೆಯ ಸೆಕ್ಷನ್ 163 ಎ ಅಡಿ ಪರಿಹಾರ ಪಡೆಯಲು ಅರ್ಹರಲ್ಲ ಎಂದು ವಕೀಲೆ ಪ್ರತಿಭಾ ರಾವ್‌ ವಾದಿಸಿದ್ದರು.
Dakshina Kannada Court Complex,
Dakshina Kannada Court Complex, Mangaluruworldorgs.com

ಅಂಚೆ ಕಚೇರಿಯಿಂದ ನಿವೃತ್ತರಾಗಿ ಪಿಂಚಣಿ ಮೂಲಕ ₹ 40,000ಕ್ಕಿಂತಲೂ ಅಧಿಕ ವಾರ್ಷಿಕ ಆದಾಯ ಗಳಿಸುತ್ತಿದ್ದ ಅರ್ಜಿದಾರರೊಬ್ಬರು ಮೋಟಾರು ವಾಹನ ಪರಿಹಾರ ಕಾಯಿದೆಯ ಸೆಕ್ಷನ್‌ 163 ಎ ಅಡಿ ಪರಿಹಾರ ಪಡೆಯುವುದನ್ನು ದಕ್ಷಿಣ ಕನ್ನಡದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನಿರಾಕರಿಸಿದೆ.

ಇತ್ತೀಚೆಗೆ ಪ್ರಕರಣದ ತೀರ್ಪು ನೀಡಿದ ಮೂರನೇ ಹೆಚ್ಚುವರಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ (ಎಂಎಸಿಟಿ) ಸದಸ್ಯ ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಭಯ್‌ ಧನ್‌ಪಾಲ್‌ ಚೌಗಲ ಅವರು ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಿದರು.

Also Read
ಸರಳ ಪ್ರಕರಣಗಳಲ್ಲಿ ದೂರು ಸಲ್ಲಿಸುವುದು ವಿಳಂಬವಾದರೆ ಅದನ್ನೇ ನಿರ್ಣಾಯಕವಾಗಿ ಪರಿಗಣಿಸಲಾಗದು: ದಕ್ಷಿಣ ಕನ್ನಡ ನ್ಯಾಯಾಲಯ

ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಘಾಟ್‌ನ ಮಾರನಹಳ್ಳಿ ವ್ಯಾಪ್ತಿಯಲ್ಲಿ 2017ರಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅರ್ಜಿದಾರ ಟಿ ಗೋವಿಂದ ನಾಯಕ್‌ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಪಘಾತಕ್ಕೆ ಕಾರಣರಾದ ಅರವಿಂದ್‌ ಎಂ ಎಸ್‌ ಮತ್ತು ಪರಿಹಾರ ಪಡೆಯಬೇಕಿದ್ದ ವಿಮಾ ಸಂಸ್ಥೆ ರಿಲಯನ್ಸ್‌ ಜನರಲ್‌ ಇನ್ಶುರೆನ್ಸ್‌ ಕಂಪೆನಿಯ ವಿಭಾಗೀಯ ವ್ಯವಸ್ಥಾಪಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ತಮ್ಮ ಆದಾಯ ಮಾಸಿಕ ಕೇವಲ ₹ 3300 ಎಂದು ನಾಯಕ್‌ ತಿಳಿಸಿದ್ದರು.

ವಿಮಾ ಕಂಪೆನಿಯ ಪರ ವಾದ ಮಂಡಿಸಿದ್ದ ವಕೀಲೆ ಪ್ರತಿಭಾ ರಾವ್‌ ಅವರು ನಡೆಸಿದ ಪಾಟಿ ಸವಾಲಿನ ವೇಳೆ ನಾಯಕ್‌ ಅವರು ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ಸುಮಾರು ೫ ವರ್ಷಗಳ ಹಿಂದೆ ನಿವೃತ್ತರಾದ ತಮಗೆ ಮಾಸಿಕ ರೂ 28,000 ಪಿಂಚಣಿ ಬರುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಹೀಗಾಗಿ ಮಾಸಿಕ ರೂ 28,000 ಪಿಂಚಣಿ ಪಡೆಯುವ ಮೂಲಕ ₹ 40,000ಕ್ಕಿಂತಲೂ ಅಧಿಕ ವಾರ್ಷಿಕ ಆದಾಯ ಗಳಿಸುತ್ತಿರುವ ನಾಯಕ್‌ ಮೋಟಾರು ವಾಹನ ಪರಿಹಾರ ಕಾಯಿದೆಯ ಸೆಕ್ಷನ್‌ 163 ಎ ಅಡಿ ಪರಿಹಾರ ಪಡೆಯಲು ಅರ್ಹರಲ್ಲ ಎಂದು ವಕೀಲೆ ಪ್ರತಿಭಾ ವಾದಿಸಿದ್ದರು. ಕರ್ನಾಟಕ ಹೈಕೋರ್ಟ್‌ ನೀಡಿದ್ದ ವಿವಿಧ ತೀರ್ಪುಗಳನ್ನು ಅವಲಂಬಿಸಿದ್ದರು.

Also Read
ಜನ ಲಾಕ್‌ಡೌನ್‌ನಿಂದ ತತ್ತರಿಸಿದ್ದಾಗ ಎ ಸಿ ರೂಮಿನಲ್ಲಿ ಕುಳಿತ ಬ್ಯಾಂಕ್ ಅಧಿಕಾರಿಗಳಿಂದ ಬಡ್ಡಿ: ಉಡುಪಿ ನ್ಯಾಯಾಲಯ ಕಿಡಿ

ಮತ್ತೊಂದೆಡೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ ಎಸ್‌ ಮಣಿಯಾಣಿ ಪಿಂಚಣಿಯನ್ನು ಕಾಯಿದೆಯ ಸೆಕ್ಷನ್ 163ಎ IIನೇ ಶೆಡ್ಯೂಲ್‌ ಅಡಿ ಆದಾಯ ಎಂದು ಪರಿಗಣಿಸಬಾರದು. ಪಿಂಚಣಿ ಆದಾಯವಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ಹಿಮಾಚಲ ಪ್ರದೇಶ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಗಮನಿಸಬೇಕು ಎಂದು ಮನವಿ ಮಾಡಿದ್ದರು.

ಆದರೆ ಎರಡೂ ಪಕ್ಷಕಾರರ ಪರ ವಕೀಲರು ಅವಲಂಬಿಸಿರುವ ತೀರ್ಪುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನ್ಯಾಯಾಲಯ ವಿಮಾ ಕಂಪೆನಿ ಪರ ವಾದ ಮಂಡಿಸಿದ ವಕೀಲೆ ಪ್ರತಿಭಾ ಅವರ ವಾದವನ್ನು ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳಿಗೆ ಅನ್ವಯಿಸಬಹುದೇ ವಿನಾ ಅರ್ಜಿದಾರರ ಪರ ವಕೀಲರು ವಾದ ಮಂಡನೆಗೆ ಅವಲಂಬಿಸಿದ್ದ ತೀರ್ಪುಗಳನ್ನಲ್ಲ ಎಂದು ಅಭಿಪ್ರಾಯಪಟ್ಟಿತು.

ಇದರೊಂದಿಗೆ ಅರ್ಜಿದಾರರ ವಾರ್ಷಿಕ ಆದಾಯ ₹ 40,000ಕ್ಕಿಂತಲೂ ಅಧಿಕ ಇರುವುದರಿಂದ ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ 2007 ಮತ್ತು 2014ರಲ್ಲಿ ನೀಡಿದ ಎರಡು ತೀರ್ಪುಗಳ ಪ್ರಕಾರ ಅವರು ಯಾವುದೇ ಪರಿಹಾರ ಪಡೆಯಲು ಅರ್ಹರಲ್ಲ ಎಂದು ಆದೇಶಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Govinda Nayak vs Aravinda_MNG.pdf
Preview

Related Stories

No stories found.
Kannada Bar & Bench
kannada.barandbench.com