ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ವೈದ್ಯಕೀಯ ಇತಿಹಾಸದಲ್ಲೇ ಅತಿ ಆಘಾತಕಾರಿ ಪ್ರಕರಣ ಎಂದ ಮಧ್ಯ ಪ್ರದೇಶ ಹೈಕೋರ್ಟ್

ಕಲಬೆರಕೆ ಕೆಮ್ಮಿನ ಸಿರಪ್ ಸೇವನೆ ಪರಿಣಾಮ ಮೂತ್ರಪಿಂಡ ಸೋಂಕಿಗೆ ತುತ್ತಾಗಿ ಈಚೆಗೆ ಮಧ್ಯಪ್ರದೇಶದಲ್ಲಿ 24 ಮಕ್ಕಳು ಸಾವನ್ನಪ್ಪಿದ್ದರು.
Doctor and Coldrif cough syrup with Madhya Pradesh HC
Doctor and Coldrif cough syrup with Madhya Pradesh HC
Published on

ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್ ಸೇವಿಸಿ ಹಲವಾರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮ್ಮ ಅಂಗಡಿ ಮುಚ್ಚಿ ಪರವಾನಗಿ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಔಷಧ ವಿತರಕರೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಲು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ರಾಜ್‌ಪಾಲ್ ಕಟಾರಿಯಾ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಘಟನೆ ವೈದ್ಯಕೀಯ ಇತಿಹಾಸದಲ್ಲಿಯೇ ಅತ್ಯಂಗ ಆಘಾತಕಾರಿ ಪ್ರಕರಣ ಎಂದು ಕಳವಳ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಮತ್ತು ನ್ಯಾಯಮೂರ್ತಿ ವಿನಯ್ ಸರಾಫ್ ಅವರಿದ್ದ ವಿಭಾಗೀಯ ಪೀಠ  ವಿತರಕರ ಮನವಿ ವಜಾಗೊಳಿಸಿದ್ದ ಏಕ ಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿಯಿತು.

Also Read
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ವೈದ್ಯನಿಗೆ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ನ್ಯಾಯಾಲಯ

ಕಲಬೆರಕೆ ಕೆಮ್ಮಿನ ಸಿರಪ್ ಸೇವನೆ ಪರಿಣಾಮ ಮೂತ್ರಪಿಂಡ ಸೋಂಕಿಗೆ ತುತ್ತಾಗಿ ಈಚೆಗೆ ಮಧ್ಯಪ್ರದೇಶದಲ್ಲಿ 24 ಮಕ್ಕಳು ಸಾವನ್ನಪ್ಪಿದ್ದರು. ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು.

ಛಿಂದ್ವಾರದ ಆಸ್ಪತ್ರೆಯಲ್ಲಿ ಔಷಧಿಯನ್ನು ಶಿಫಾರಸು ಮಾಡಿದ ಸರ್ಕಾರಿ ವೈದ್ಯ ಡಾ. ಪ್ರವೀಣ್ ಸೋನಿ, ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್‌ ಮಾಲೀಕ ಗೋವಿಂದನ್ ರಂಗನಾಥನ್ ಮತ್ತು ಇತರ ಹಲವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಘಟನೆ ಭಾರತದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಚ್ಚಿನ ಮಟ್ಟದ ವಿಷಕಾರಿ ಡೈಥಿಲೀನ್ ಗ್ಲೈಕಾಲ್‌ನಿಂದ ಔಷಧ ಕಲುಷಿತಗೊಂಡಿರುವುದು ಕಂಡುಬಂದ ನಂತರ ಅನೇಕ ರಾಜ್ಯಗಳು ಕೋಲ್ಡ್‌ರಿಫ್‌ ಔಷಧ ನಿಷೇಧಿಸಿದ್ದವು.

ಘಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಬಾಲ್‌ಪುರದ ಕಟಾರಿಯಾ ಫಾರ್ಮಾಸ್ಯುಟಿಕಲ್ಸ್ ಮೇಲೆ ದಾಳಿ ಮಾಡಿದ್ದರು. ನಂತರ ಔಷಧ ವಿತರಕ ರಾಜ್‌ಪಾಲ್ ಕಟಾರಿಯಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅವರ ಅಂಗಡಿಗೆ ಬೀಗಮುದ್ರೆ ಹಾಕಲಾಗಿದೆ. ಅಕ್ಟೋಬರ್ 9 ರಂದು ಔಷಧ ಮತ್ತು ಸೌಂದರ್ಯವರ್ಧಕ ನಿಯಮಗಳು, 1945 ರ ಅಡಿಯಲ್ಲಿ ಅವರ ಪರವಾನಗಿ ರದ್ದುಗೊಳಿಸುವ ಸಲುವಾಗಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ದೂರಿದರು.

ಆದರೆ, 1945 ರ ಔಷಧ ಮತ್ತು ಸೌಂದರ್ಯವರ್ಧಕ ನಿಯಮಾವಳಿ ನಿಯಮ 66 ರಡಿ ಅಧಿಕಾರಿಗಳ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದ ಏಕ ಸದಸ್ಯ ಪೀಠ ಇತ್ತೀಚೆಗೆ ಕಟಾರಿಯಾ ಅವರ ರಿಟ್ ಅರ್ಜಿ ವಜಾಗೊಳಿಸಿತ್ತು.

Also Read
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು: ನ್ಯಾಯಾಲಯ ಉಸ್ತುವಾರಿ ತನಿಖೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಏಕ ಪೀಠದ ಅಭಿಪ್ರಾಯವನ್ನು ಒಪ್ಪಿದ ವಿಭಾಗೀಯ ಪೀಠ ಕಟಾರಿಯಾ ಅವರಿಗೆ ರಾಜ್ಯ ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸುವುದು ಪರಿಣಾಮಕಾರಿ ಪರ್ಯಾಯ ಪರಿಹಾರವಾಗಿದೆ ಎಂದಿತು.

 “ಭಾರತ ಸಂವಿಧಾನದ ಕಲಂ 226 ಅಡಗಿನ ಪರಿಹಾರವು ಸಂಪೂರ್ಣ ಹಕ್ಕಿನ ಪರಿಹಾರವಲ್ಲ; ಅದು ನ್ಯಾಯಾಲಯದ ವಿವೇಚನಾಧಿಕಾರವಾಗಿದೆ. ಈಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದಾಗ, ಗೌರವಾನ್ವಿತ ಏಕಸದಸ್ಯ ಪೀಠ  ಸಂವಿಧಾನದ 226ನೇ ವಿಧಿಯಡಿ ಅಧಿಕಾರ ಚಲಾಯಿಸದಿರುವುದು ಸೂಕ್ತವಾಗಿ ಇದೆ. ಪ್ರಕರಣದಲ್ಲಿ ನ್ಯಾಯಾಲಯ 226ನೇ ವಿಧಿಯಡಿ ತನ್ನ ವಿವೇಚನೆಯನ್ನು ಬಳಸಬೇಕಾದ ಸಂದರ್ಭವಲ್ಲ ಎಂಬ ಅಭಿಪ್ರಾಯಕ್ಕೆ ನಾವು ಸಹಮತ ವ್ಯಕ್ತಪಡಿಸುತ್ತೇವೆ. ಅಪೀಲುದಾರರು ರಾಜ್ಯ ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸಿದಲ್ಲಿ, ಆ ಮೇಲ್ಮನವಿಯನ್ನು ತೀರ್ಮಾನಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರಕರಣದ ಎಲ್ಲಾ ಸಂದರ್ಭ ಸನ್ನಿವೇಶಗಳನ್ನು ಪರಿಶೀಲಿಸುವ ಹಕ್ಕು ಹೊಂದಿರುತ್ತದೆ,” ಎಂದ ಅದು ಮೇಲ್ಮನವಿ ವಜಾಗೊಳಿಸಿತು.

[ಆದೇಶದ ಪ್ರತಿ]

Attachment
PDF
Rajpal_Kataria_v_The_State_of_Madhya_Pradesh_and_Others (1)
Preview
Kannada Bar & Bench
kannada.barandbench.com