ಯೂಟ್ಯೂಬರ್‌ಗಳ ವಿರುದ್ಧ ಬಾಲ ಸಂತ ಬಾಬಾ ಅವಹೇಳನದ ಆರೋಪ: ನ್ಯಾಯಾಲಯದ ಮೊರೆ ಹೋದ ಬಾಲಕನ ತಾಯಿ

ಯೂಟ್ಯೂಬರ್‌ಗಳು ತನ್ನ ಮಗನನ್ನು ಗುರಿಯಾಗಿಸಿಕೊಂಡ ವಸ್ತುವಿಷಯಗಳ ಮೂಲಕ ಹಣ ಗಳಿಸುತ್ತಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ದೂರಿದ್ದು ಅವರು ಹಿಂದೂ ವಿರೋಧಿಗಳು ಎಂದಿದೆ.
Bal Sant Baba
Bal Sant BabaInstagram
Published on

ಬಾಲ ಸಂತ ಬಾಬಾ ಎಂದು ಜನಪ್ರಿಯತೆ ಗಳಿಸಿರುವ ತನ್ನನ್ನು ಅಧ್ಯಾತ್ಮಿಕ ಪ್ರವಚನಕಾರ ಎಂದು ಕರೆದುಕೊಳ್ಳುವ 10 ವರ್ಷದ ಬಾಲಕನನ್ನು ಟ್ರೋಲ್‌ ಮಾಡುತ್ತಿರುವ ಏಳು ಯೂಟ್ಯೂಬರ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಬಾಲಕನ ತಾಯಿ ಮಥುರಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಯೂಟ್ಯೂಬರ್‌ಗಳು ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಲು ದುರುದ್ದೇಶಪೂರಿತ ವೀಡಿಯೊಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಖಾಸಗಿತನಕ್ಕೂ ಧಕ್ಕೆ ತಂದಿದ್ದಾರೆ. ಇಂತಹ ನಡೆ ತಮ್ಮ ಕುಟುಂಬವನ್ನು ಅಧಃಪತನಕ್ಕೆ ತಳ್ಳುತ್ತಿದ್ದು ತಾವೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಸಿಂಹಿಣಿಗೆ ಸೀತೆಯ ಹೆಸರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಕಲ್ಕತ್ತಾ ಹೈಕೋರ್ಟ್‌ ಮೆಟ್ಟಿಲೇರಿದ ವಿಎಚ್‌ಪಿ

ಯೂಟ್ಯೂಬರ್‌ಗಳ ಕೃತ್ಯದಿಂದಾಗಿ ತನ್ನ ಅಪ್ರಾಪ್ತ ಮಗುವಿಗೆ ಅಪಾರ ಭಾವನಾತ್ಮಕ ನೋವು ಉಂಟುಮಾಡಿದೆ. ಅಪ್ರಾಪ್ತ ಮಗುವಿಗೆ ಕೇವಲ 10 ವರ್ಷ ವಯಸ್ಸಾಗಿದ್ದು ಆತ ತನ್ನ ಧರ್ಮವನ್ನು ಮುಕ್ತವಾಗಿ ಪಾಲಿಸಲಾಗುತ್ತಿಲ್ಲ. ಅಥವಾ ಭೌತಿಕವಾಗಿ ಇಲ್ಲವೇ ಆನ್‌ಲೈನ್‌ ಅಪಮಾನದ ಭೀತಿ ಇಲ್ಲದೆ ದೈನಂದಿನ ಜೀವನ ನಡೆಸಲಾಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಕೆಲ ವಾರಗಳಿಂದ ಮಗುವಿನ ಅನೇಕ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಜನ ಆತನ ಸತ್ಯಸಂಧತೆ ಮತ್ತು ಅಧ್ಯಾತ್ಮಿಕ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ಪೋಷಕರ ಪ್ರಭಾವಕ್ಕೊಳಗಾಗಿ ಬಾಲಕ ಹಾಗೆ ನಡೆದುಕೊಳ್ಳುತ್ತಿರಬಹುದು ಎಂದು ಇನ್ನೂ ಕೆಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಈಚೆಗೆ ಇದೇ ಬಾಲಕ ಧಾರ್ಮಿಕ ಮುಖಂಡರ ಎದುರು ಉತ್ಸಾಹದಿಂದ ನೃತ್ಯ ಮಾಡಿದ್ದ ವೀಡಿಯೊ ವೈರಲ್‌ ಆಗಿತ್ತು. ಬಾಲಕನ ನಡೆ ಹಿಂದೂ ಅಧ್ಯಾತ್ಮಿಕ ನಾಯಕ ಸ್ವಾಮಿ ರಾಮಭದ್ರಾಚಾರ್ಯರಿಗೆ ಅಸಮಾಧಾನ ಉಂಟುಮಾಡಿ ಅವರು ಸಾರ್ವಜನಿಕವಾಗಿ ಆತನನ್ನು ನಿಂದಿಸಿದ್ದರು.

Also Read
ಹಜ್ ಧಾರ್ಮಿಕ ಆಚರಣೆ ಸಂವಿಧಾನದಿಂದ ರಕ್ಷಿತ: ಕೇಂದ್ರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಅಂಕುಶ

ಯೂಟ್ಯೂಬರ್‌ಗಳು ಬಾಲಕನನ್ನು ಗುರಿಯಾಗಿಸಿಕೊಂಡು ಇಂತಹ ವಸ್ತುವಿಷಯಗಳ ಮೂಲಕ ಹಣ ಗಳಿಸುತ್ತಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ದೂರಿದ್ದು ಅವರು ಹಿಂದೂ ವಿರೋಧಿಗಳು ಎಂದಿದೆ.

ಯೂಟ್ಯೂಬರ್‌ಗಳ ಕೃತ್ಯ  ಮಾನಹಾನಿಕರ ಮಾತ್ರವಲ್ಲ, ಧಾರ್ಮಿಕ ಸಾಮರಸ್ಯವನ್ನು ಕದಡುವ ಮತ್ತು ದ್ವೇಷ ಪ್ರಚೋದಿಸುವ ಯತ್ನ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪಿತೂರಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು, ವಂಚನೆ, ಕ್ರಿಮಿನಲ್ ಮಾನನಷ್ಟ, ಕ್ರಿಮಿನಲ್ ಬೆದರಿಕೆ ಹಾಗೂ ಸುಲಿಗೆಯಂತಹ ಅಪರಾಧಗಳಿಗೆ ಸಂಬಂಧಿಸಿದಂತೆ ಯೂಟ್ಯೂಬರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶಿಸಬೇಕು ಎಂದು ಅರ್ಜಿ ಕೋರಿದೆ. ತಾನು ಈ ಹಿಂದೆ ಪೊಲೀಸರನ್ನು ಸಂಪರ್ಕಿಸಿದ್ದರೂ ಆರೋಪಿ ಯೂಟ್ಯೂಬರ್‌ಗಳ ವಿರುದ್ಧ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೂಡ ಅರ್ಜಿದಾರೆ ಹೇಳಿದ್ದಾರೆ.

Kannada Bar & Bench
kannada.barandbench.com