ಔರಂಗಜೇಬ್ ಕೊಂಡಾಡಿದ್ದ ಸಮಾಜವಾದಿ ಪಕ್ಷದ ಶಾಸಕನಿಗೆ ಮುಂಬೈ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು

ಮಾರ್ಚ್ 3ರಂದು ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳು ಅಬು ಆಜ್ಮಿ ಅವರನ್ನು ಪ್ರಶ್ನಿಸಿದಾಗ, ರಾಜಕೀಯ ವಿವಾದಕ್ಕೆ ಕಾರಣವಾದ ಹೇಳಿಕೆಗಳನ್ನು ಅವರು ನೀಡಿದ್ದರು.
Abu Azmi
Abu Azmi Facebook
Published on

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್‌ ಅವರನ್ನು ಹೊಗಳಿದ್ದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆ.

₹20,000 ಮೊತ್ತದ ಸಾಲ್ವೆಂಟ್‌ ಶ್ಯೂರಿಟಿ ಬಾಂಡ್‌ ಅನ್ನು ಅಜ್ಮಿ ಸಲ್ಲಿಸಬೇಕು. ಮಾರ್ಚ್ 12, 13 ಮತ್ತು 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತನಿಖಾಧಿಕಾರಿಯೆದುರು ಹಾಜರಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಬಾರದು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ ಜಿ ರಘುವಂಶಿ ಅವರು ಆದೇಶಿಸಿದರು.

Also Read
ಸಿಂಹಗಳಿಗೆ ಇರಿಸಿದ್ದ ಸೀತೆ, ಅಕ್ಬರ್‌ ಹೆಸರು ಬದಲಿಸಲು ಸೂಚಿಸಿದ ಕಲ್ಕತ್ತಾ ಹೈಕೋರ್ಟ್‌

ಮಾರ್ಚ್ 3ರಂದು ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳು ಆಜ್ಮಿ ಅವರನ್ನು ಪ್ರಶ್ನಿಸಿದಾಗ, ರಾಜಕೀಯ ವಿವಾದಕ್ಕೆಕಾರಣವಾಗಿದ್ದ ಹೇಳಿಕೆಗಳನ್ನು ಅವರು ನೀಡಿದ್ದರು.

ಔರಂಗಜೇಬ್‌ ಒಬ್ಬ ಉತ್ತಮ ಆಡಳಿತಗಾರ. ಅವರ ಅವಧಿಯಲ್ಲಿ ಭಾರತವನ್ನು 'ಚಿನ್ನದ ಹಕ್ಕಿ' ಎಂದು ಕರೆಯಲಾಗುತ್ತಿತ್ತು. ಆಗ ದೇಶದ ಜಿಡಿಪಿ 24% ರಷ್ಟಿತ್ತು ಆದ್ದರಿಂದಲೇ ಬ್ರಿಟಿಷರು ಭಾರತಕ್ಕೆ ಬಂದರು ಎಂದು ಅವರು ಹೇಳಿಕೆ ನೀಡಿದ್ದರು.

ಔರಂಗಜೇಬ್‌ ತನಗಾಗಿ ಒಂದೇ ಒಂದು ರೂಪಾಯಿಯನ್ನೂ ಸ್ವೀಕರಿಸುತ್ತಿರಲಿಲ್ಲ. ಅವರನ ಆಡಳಿತದ ಅವಧಿಯಲ್ಲಿ ಭಾರತದ ಗಡಿಗಳು ಬರ್ಮ, ಆಫ್ಘಾನಿಸ್ತಾನದವರೆಗೂ ಹಬ್ಬಿದ್ದವು ಎಂದು ಹೇಳಿದ್ದರು.

ಔರಂಗಜೇಬನ ಸೈನ್ಯದಲ್ಲಿ ಹಿಂದೂ ದಂಡನಾಯಕರು ಇದ್ದರು ಅವರು ನಡೆಸಿದ ಯುದ್ಧಗಳು ಹಿಂದೂಗಳು ಮತ್ತು ಮುಸ್ಲಿಮರ ನಡುವಿನದ್ದಾಗಿರಲಿಲ್ಲ. ಆದರೆ ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದರು.

ಆದರೆ, ಆಜ್ಮಿ ಅವರ ಹೇಳಿಕೆಗಳು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿವೆ ಎಂಬ ಟೀಕೆ ವ್ಯಕ್ತವಾಗಿತ್ತು. ಹೇಳಿಕೆ ಹಿನ್ನೆಲೆಯಲ್ಲಿ ಅಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿತ್ತು.

Also Read
ತಾಜ್ ಮಹಲ್‌ನಲ್ಲಿ ಶಹಜಹಾನ್ ವಾರ್ಷಿಕ ಉರುಸ್‌ ನಿಷೇಧಿಸಲು ಕೋರಿ ಆಗ್ರಾ ನ್ಯಾಯಾಲಯದ ಮೆಟ್ಟಿಲೇರಿದ ಹಿಂದೂ ಸಂಘಟನೆ

ಜೊತೆಗೆ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳಿಗೆ ಉದ್ದೇಶಪೂರ್ವಕ ಅವಮಾನ), 302 (ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವುದು), ಮತ್ತು 356(1) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಅಜ್ಮಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಮಾಧ್ಯಮಗಳು ತನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಿದ್ದು ತಾನು ನಿರಪರಾಧಿ ಎಂದು ಅಜ್ಮಿ ಹೇಳಿದ್ದಾರೆ. ವಿಧಾನಸಭೆಯಿಂದ ತನ್ನ ಅಮಾನತು ರದ್ದುಗೊಳಿಸುವಂತೆಯೂ ಅವರು ಕೋರಿದ್ದಾರೆ.

Kannada Bar & Bench
kannada.barandbench.com