

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶ ನೀಡುವುದಕ್ಕಾಗಿ ₹15 ಲಕ್ಷ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಎಜಾಜುದ್ದೀನ್ ಸಲಾವುದ್ದೀನ್ ಕಾಜಿ ಮತ್ತು ಕೋರ್ಟ್ ಕ್ಲರ್ಕ್ ಚಂದ್ರಕಾಂತ್ ಹನುಮಂತ ವಾಸುದೇವ್ ಅವರನ್ನು ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಎಸಿಬಿ ಪತ್ರಿಕಾ ಪ್ರಕಟಣೆಯ ಪ್ರಕಾರ, ತಮ್ಮ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರುದಾರರ ಪತ್ನಿ 2015 ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 2016 ರಲ್ಲಿ, ಹೈಕೋರ್ಟ್ ಮೂರನೇ ವ್ಯಕ್ತಿಯ ಹಕ್ಕುಗಳ ಸೃಷ್ಟಿಯನ್ನು ತಡೆಯುವ ಮಧ್ಯಂತರ ಆದೇಶ ಹೊರಡಿಸಿತ್ತು.
ಆಸ್ತಿಯ ಮೌಲ್ಯ ₹10 ಕೋಟಿಗಿಂತ ಕಡಿಮೆ ಇದ್ದ ಕಾರಣ, ಮಾರ್ಚ್ 2024 ರಲ್ಲಿ ಹೈಕೋರ್ಟ್ ಪ್ರಕರಣವನ್ನು ಮಜಗಾಂವ್ ಸಿವಿಲ್ ನ್ಯಾಯಾಲಯಕ್ಕೆ ವಾಣಿಜ್ಯ ಮೊಕದ್ದಮೆಯಾಗಿ ವರ್ಗಾಯಿಸಿತು. ಕಳೆದ ಸೆಪ್ಟೆಂಬರ್ 9 ರಂದು, ದೂರುದಾರರ ಉದ್ಯೋಗಿ ನ್ಯಾಯಾಲಯಕ್ಕೆ ಹಾಜರಿದ್ದಾಗ, ವಾಸುದೇವ್ ದೂರುದಾರರನ್ನು ಸಂಪರ್ಕಿಸಿ ಭೇಟಿಯಾಗುವಂತೆ ಸೂಚಿಸಿದ್ದರು.
ಅಂತೆಯೇ ದೂರುದಾರರು ಸೆಪ್ಟೆಂಬರ್ 12 ರಂದು ಚೆಂಬೂರಿನ ಸ್ಟಾರ್‌ಬಕ್ಸ್ ಕೆಫೆಯಲ್ಲಿ ವಾಸುದೇವ್ ಅವರನ್ನು ಭೇಟಿಯಾಗಿದ್ದರು. ಅಲ್ಲಿ ವಾಸುದೇವ್ ಅವರು ಅನುಕೂಲಕರ ಆದೇಶ ಪಡೆಬೇಕಾದರೆ ಒಟ್ಟು ₹25 ಲಕ್ಷ, ಅಂದರೆ ತನಗೆ ₹10 ಲಕ್ಷ ಮತ್ತು ನ್ಯಾಯಾಧೀಶರಿಗೆ ₹15 ಲಕ್ಷ ಲಂಚ ನೀಡಬೇಕೆಂದು ತಾಕೀತು ಮಾಡಿದ್ದ. ನಂತರ ಮೊತ್ತವನ್ನು ₹15 ಲಕ್ಷಕ್ಕೆ ಇಳಿಸಲಾಗಿತ್ತು.
ನವೆಂಬರ್ 11ರಂದು ಗುಮಾಸ್ತ ವಾಸುದೇವ್ ₹15 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಹಣ ಸ್ವೀಕರಿಸಿದ ತಕ್ಷಣ ವಾಸುದೇವ್ ನ್ಯಾಯಾಧೀಶ ಕಾಜಿ ಅವರಿಗೆ ಮಾಹಿತಿ ನೀಡಿದ್ದ. ಇದಕ್ಕೆ ನ್ಯಾಯಾಧೀಶರು ಸಹಮತ ಸೂಚಿಸಿದ್ದರು ಎಂಬ ಅಂಶ ದೂರಿನಲ್ಲಿ ಉಲ್ಲೇಖವಾಗಿದೆ.
ವಾಸುದೇವ್ ಮತ್ತು ನ್ಯಾಯಾಧೀಶ ಕಾಜಿ ಇಬ್ಬರ ಮೇಲೂ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7 ಮತ್ತು 7A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳ ಅನ್ವಯ ಸಾರ್ವಜನಿಕ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆ ಅಥವಾ ಸ್ವೀಕರಿಸಿದ್ದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ನ್ಯಾಯಾಧೀಶ ಕಾಜಿ ಅವರು ಇಂದು ನ್ಯಾಯಾಲಯ ಕಲಾಪಗಳಲ್ಲಿ ಭಾಗಿಯಾಗಿಲ್ಲ ಎಂದು ಮೂಲವೊಂದು ಬಾರ್ & ಬೆಂಚ್‌ಗೆ ದೃಢಪಡಿಸಿದೆ.