ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ: ಆಸ್ತಿ ಸಂರಕ್ಷಣೆಯ ಉದ್ದೇಶ ಎಂದು ಎಜಿ ವಾದ; ಬಸವ ಪ್ರಭುಗಳ ವಿರುದ್ಧ ಗಂಭೀರ ಆರೋಪ

ಬಸವಪ್ರಭು ಸ್ವಾಮೀಜಿ ಉಸ್ತುವಾರಿ ಹೊತ್ತ ನಂತರ ಮಠಕ್ಕೆ ಸೇರಿದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದು ಅದಕ್ಕೆ ಲೆಕ್ಕ ಕೊಡದೇ ಇರುವುದು ಗಮನಕ್ಕೆ ಬಂದಿದೆ ಎಂದು ಎಜಿ ನಾವದಗಿ ಅವರಿಂದ ಆರೋಪ. ಸಾಕ್ಷ್ಯ ಕೇಳಿದ ಪೀಠ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿಯವರು ಪೊಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ಮಠಕ್ಕೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸ್ಥಿರ ಮತ್ತು ಚರಾಸ್ತಿಯನ್ನು ರಕ್ಷಿಸುವ ಸಲುವಾಗಿ ಹಾಗೂ ಮಠದ ನೂರಾರು ವಿದ್ಯಾಸಂಸ್ಥೆಗಳ ದೈನಂದಿನ ಆಡಳಿತಕ್ಕೆ ಧಕ್ಕೆ ಒದಗಬಾರದು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದಾಗಿ ಅಡ್ವೊಕೇಟ್‌ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ರಾಜ್ಯ ಸರ್ಕಾರ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್ ಅವರು ಮಠದ ಆಸ್ತಿಯು ಮತ್ತಾರದೋ ಪಾಲಾಗಬಾರದು ಎನ್ನುವ ಉದ್ದೇಶ ಆಡಳಿತಾಧಿಕಾರಿಯವರ ನೇಮಕದ ಹಿಂದಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಮುಂದುವರೆದು, "ಬಸವಪ್ರಭು ಸ್ವಾಮೀಜಿ ಉಸ್ತುವಾರಿ ಹೊತ್ತ ನಂತರ ಮಠಕ್ಕೆ ಸೇರಿದ ಲಕ್ಷಾಂತರ ರೂಪಾಯಿಗಳನ್ನು ಪಡೆದಿದ್ದು ಅದಕ್ಕೆ ಲೆಕ್ಕ ಕೊಡದೇ ಇರುವುದು ಗಮನಕ್ಕೆ ಬಂದಿದೆ. ಇದನ್ನು ಆಡಳಿತಾಧಿಕಾರಿ ವಸ್ತ್ರದ ಅವರು ತಮಗೆ ದೊರೆತಿರುವ ಮಾಹಿತಿಯ ಅನುಸಾರ ನನಗೆ ವಿವರ ಒದಗಿಸಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು. ಈ ಮಾತಿಗೆ ದನಿಗೂಡಿಸಿದ ವಸ್ತ್ರದ ಪರ ಹಿರಿಯ ವಕೀಲ ಗಂಗಾಧರ ಗುರುಮಠ ಅವರು, "ಹೌದು ಸ್ವಾಮಿ, ಈ ಬಗ್ಗೆ ವಿವರಣೆ ನೀಡುವಂತೆ ಬಸವಪ್ರಭು ಅವರಿಗೆ ಕೇಳಿದಾಗ ಕಠಿಣವಾದ ಉತ್ತರ ನೀಡಿದ್ದು, ವಿಷಯ ಹೈಕೋರ್ಟ್‌ನಲ್ಲಿದೆ, ನೀವು ಯಾರು ಕೇಳಲಿಕ್ಕೆ ಎಂದು ಉತ್ತರಿಸಿದ್ದಾರೆ’" ಎಂಬುದಾಗಿ ತಿಳಿಸಿದರು.

ಇದಕ್ಕೆ ಪೀಠವು, ‘ಯಾರು ಆ ಬಸವಪ್ರಭು? ಲಕ್ಷಾಂತರ ಹಣವನ್ನು ಅವರು ದುರ್ಬಳಕೆ ಮಾಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಏನು ಸಾಕ್ಷ್ಯವಿದೆ’ ಎಂದು ಪ್ರಶ್ನಿಸಿತು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಮತ್ತು ಗುರುಮಠ ಅವರು, ‘ದಾಖಲೆಗಳು ಸದ್ಯ ಇಲ್ಲ, ಶೇಖರಿಸುತ್ತಿದ್ದೇವೆ’ ಎಂದರು. ಆಗ ಪೀಠವು "ನಿವೃತ್ತ ಐಎಎಸ್‌ ಅಧಿಕಾರಿಯವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದೀರಲ್ಲವೇ? ಅವರಿಗೆ ಈ ವಿವರ ಸಂಗ್ರಹಿಸಲು ಸಾಧ್ಯವಾಗಿಲ್ಲವೇ? ನೀವು ಇಂತಹ ಆರೋಪ ಮಾಡುವಾಗ ಮಾರುಕಟ್ಟೆಯಲ್ಲಿ ನಿಂತು ಆರೋಪಿಸಿದಂತೆ ಆಗಬಾರದು. ಸೂಕ್ತ ದಾಖಲೆ ಒದಗಿಸಿ ವಾದ ಮಂಡಿಸಿ" ಎಂದು ಎಚ್ಚರಿಸಿತು.

ಏರ್‌ ಆಂಬುಲೆನ್ಸ್‌ ಹೆಸರಿನಲ್ಲಿ ಹೆಲಿಕಾಪ್ಟರ್‌ಗೆ ₹ 3 ಕೋಟಿ ಪಾವತಿ!

ವಿಚಾರಣೆ ವೇಳೆ ಮಠಾಧಿಪತಿಯವರು ಹೆಲಿಕಾಪ್ಟರ್‌ ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಹಣವನ್ನು ಪಾವತಿಸಿರುವುದನ್ನು ಸಹ ಎಜಿಯವರು ನ್ಯಾಯಾಲಯದ ಗಮನಕ್ಕೆ ತಂದರು. ‘ತುಂಬಿ ಏವಿಯೇಷನ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದ ಪೀಠಾಧಿಪತಿಯವರು, 2020ರ ಅಕ್ಟೋಬರ್ 20ರಿಂದ ಬಳಸಿರುವ ಹೆಲಿಕಾಪ್ಟರ್‌ಗೆ ರೂ. 3 ಕೋಟಿ ಪಾವತಿ ಮಾಡಿದ್ದಾರೆ. ಇದನ್ನು ಏರ್‌ ಆಂಬಲೆನ್ಸ್‌ ಆಗಿ ಬಳಸಾಗುವುದು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಈ ದಿನದವರೆಗೆ ಯಾವುದೇ ರೋಗಿಯನ್ನು ಇದರಲ್ಲಿ ಒಯ್ಯಲಾಗಿಲ್ಲ ಎಂದು ಅಡ್ವೊಕೇಟ್‌ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com