

ಉಡುಪಿ ಪರ್ಯಾಯ ಉತ್ಸವದಲ್ಲಿ ಮುಸ್ಲಿಮರು ಭಾಗಿಯಾಗುವ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ದ್ವೇಷ ಹರಡುವ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ತಮ್ಮ ವಿರುದ್ಧ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ನಿಟ್ಟೆ ನಿವಾಸಿಯಾಗಿರುವ ವಕೀಲ ಸುದೀಪ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣ ಸಂಬಂಧ ಕಾರ್ಕಳ ಗ್ರಾಮೀಣ ಠಾಣೆ ಪೊಲೀಸರು ಜನವರಿ 3ರಂದು ಬಿಎನ್ಎಸ್ ಸೆಕ್ಷನ್ 196 (1), 352 ಮತ್ತು 353 (2) ಅಡಿ ದಾಖಲಿಸಿರುವ ಎಫ್ಐಆರ್ ಮತ್ತು ಅದರ ಸಂಬಂಧ ಕಾರ್ಕಳದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಇರುವ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸುದೀಪ್ ಶೆಟ್ಟಿ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಈ ಬಾರಿಯ ಉಡುಪಿ ಪರ್ಯಾಯ ಉತ್ಸವದ ಹೊರೆಕಾಣಿಕೆಯಲ್ಲಿ ಭಾಗಿಯಾಗುವುದಾಗಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹೇಳಿತ್ತು. ಇದಕ್ಕೆ ಸಾಮಾಜಿಕ ಜಾಲತಾಣ (ಫೇಸ್ ಬುಕ್) ‘ಸುದೀಪ್ ಶೆಟ್ಟಿ ನಿಟ್ಟೆ, ಎಂಬ ಖಾತೆಯಲ್ಲಿ ‘ಹಿಂದು-ಮುಸ್ಲಿಮರು ಸೌಹಾರ್ದತೆಯಿಂದ ಬಾಳಬೇಕಾದರೆ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯವರು ಹಿಂದೂಗಳಿಗೆ ಪಾನೀಯ (ಶರಬತ್) ಅಥವಾ ನೀರಿನ ಬಾಟಲ್‌ಗಳನ್ನು ಹಂಚುವ ಬದಲು ಲವ್ ಜಿಹಾದ್, ಗೋಹತ್ಯೆ, ಭಯೋತ್ಪಾದನೆ, ಹಿಂದೂ ಧಾರ್ಮಿಕ ಕೇಂದ್ರಗಳು ಮತ್ತು ಹಿಂದೂಗಳ ಮೆರವಣಿಗೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು‘ ಎಂದು ಬರೆದಿದ್ದರು. ಇದು ಜಾತಿ-ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕಲು ಕಾರಣವಾಗಿದೆ ಎಂದು ಕಾರ್ಕಳ ಗ್ರಾಮೀಣ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.