ವಕೀಲರ ಬಳಕೆಗೆ ನ್ಯಾಯಮೂರ್ತಿಗಳ ಗ್ರಂಥಾಲಯ: ಮನವಿ ಕಸದಬುಟ್ಟಿ ಸೇರಿದೆ ಎಂದು ಬೇಸರಿಸಿದ ಇಂದಿರಾ ಜೈಸಿಂಗ್

ವಕೀಲರ ಬಳಕೆಗೆ ಗ್ರಂಥಾಲಯ ಮುಕ್ತಗೊಳಿಸುವಂತೆ ವಿವಿಧ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರೂ ತನ್ನ ಮನವಿಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ವಿಷಾದಿಸಿದ ಇಂದಿರಾ ಜೈಸಿಂಗ್.
Indira Jaising, Supreme court
Indira Jaising, Supreme court
Published on

ಸುಪ್ರೀಂ ಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳ ಗ್ರಂಥಾಲಯವನ್ನು ವಕೀಲರು ಕೂಡ ಬಳಸಲು ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ವಕೀಲರ ಬಳಕೆಗೆ ಗ್ರಂಥಾಲಯ ಮುಕ್ತಗೊಳಿಸುವಂತೆ ವಿವಿಧ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರೂ ತನ್ನ ಮನವಿಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎ ಜಿ ಮಸಿಹ್ ಅವರಿದ್ದ ಪೀಠದೆದುರು ಅವರು ಬೇಸರ ವ್ಯಕ್ತಪಡಿಸಿದರು.  

Also Read
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯ ಏಷ್ಯಾದ ಬೃಹತ್ ಕಾನೂನು ಲೈಬ್ರೆರಿ: ವಿಶಿಷ್ಟ ಹಾಟ್‌ಲೈನ್‌ ಸಂಶೋಧನಾ ಕಣಜ

ಹಳೆಯ ಸಂಸತ್‌ ಭವನದ ಸಾಧಾರಣ ಪ್ರಿನ್ಸೆಸ್ ಚೇಂಬರ್‌ನಿಂದ 1937ರಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯ ಬಳಿಕ ಬೃಹದಾಕಾರದಲ್ಲಿ ಬೆಳೆದು ಈಗ ಏಷ್ಯಾದ ಅತಿದೊಡ್ಡ ಕಾನೂನು ಗ್ರಂಥಾಲಯವಾಗಿ ತಲೆ ಎತ್ತಿದೆ. ಪ್ರಸ್ತುತ ಸುಪ್ರೀಂ ಕೋರ್ಟ್‌ ಹೊಸ ಕಟ್ಟಡ ಸಂಕೀರ್ಣದ ಎ ಬ್ಲಾಕ್‌ನಲ್ಲಿ 12,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಅತ್ಯಾಧುನಿಕ ಸಂಕೀರ್ಣದಲ್ಲಿ ಇದು ನೆಲೆಗೊಂಡಿದೆ.

ಪುಸ್ತಕಗಳು, ನಿಯತಕಾಲಿಕಗಳು, ಮೊನೊಗ್ರಾಫ್ಗಳು, ಕಾನೂನು ನಿಯತಕಾಲಿಕಗಳು, ಕಾಯಿದೆಗಳ ಪ್ರತಿಗಳು, ಸಮಿತಿ ವರದಿಗಳು, ರಾಜ್ಯ ಕಾಯಿದೆಗಳ ಪ್ರತಿಗಳು, ಸಂಸತ್‌ ಚರ್ಚೆಯ ವಿವರಗಳು, ರಾಜ್ಯ ಕೈಪಿಡಿಗಳು ಹಾಗೂ ಸ್ಥಳೀಯ ಕಾಯಿದೆಗಳಿಗೆ ಸಂಬಂಧಿಸಿದ ಒಟ್ಟು 3,78,000 ಅಮೂಲ್ಯ ದಾಖಲೆಗಳು ಗ್ರಂಥಾಲಯದಲ್ಲಿವೆ. ಇಲ್ಲಿ 131 ನಿಯತಕಾಲಿಕಗಳಿಗೆ ಚಂದಾದಾರಿಕೆ ಇದ್ದು ಅದರಲ್ಲಿ 107 ಭಾರತೀಯ ಪತ್ರಿಕೆಗಳು  24 ವಿದೇಶಿ ನಿಯತಕಾಲಿಕೆಗಳು ಸೇರಿವೆ. ಇದಲ್ಲದೆ 19 ಪತ್ರಿಕೆಗಳು ಮತ್ತು 8 ನಿಯತಕಾಲಿಕೆಗಳು ಓದಲು ದೊರೆಯುತ್ತವೆ.

ಶಿಕ್ಷೆ ಕಡಿತಗೊಳಿಸಲು ಕೋರುವ ಅರ್ಜಿಗಳಲ್ಲಿ ವಾಸ್ತವಾಂಶ ಮರೆಮಾಚುವ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದ್ದಾಗ ಅನಿರೀಕ್ಷಿತವಾಗಿ ನ್ಯಾಯಮೂರ್ತಿಗಳ ಗ್ರಂಥಾಲಯವನ್ನು ಬಳಸಲು ವಕೀಲರಿಗೆ ಅವಕಾಶ ಮಾಡಿಕೊಡದಿರುವ ವಿಚಾರ ಪ್ರಸ್ತಾಪವಾಯಿತು.

Also Read
ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪದೋನ್ನತಿ: ಕಡೆಗಣಿತರನ್ನು ಹೊಸದಾಗಿ ಸಂದರ್ಶಿಸಲು ಇಂದಿರಾ ಜೈಸಿಂಗ್ ಮನವಿ

ಹಿರಿಯ ವಕೀಲರ ನೇಮಕಾತಿ ಕುರಿತು ಈಗಿರುವ ಪ್ರಕ್ರಿಯೆನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬ ಚರ್ಚೆಯ ವೇಳೆ ಇಂದಿರಾ ಅವರು ನ್ಯಾಯಮೂರ್ತಿಗಳ ಗ್ರಂಥಾಲಯ ವಿಶ್ವದ ಅತ್ಯುತ್ತಮ ಗ್ರಂಥಾಲಯಗಳಲ್ಲಿ ಒಂದಾಗಿದ್ದು ಅದು ನಮ್ಮಂತಹ ವಕೀಲರಿಗೆ ದೊರೆಯುತ್ತಿಲ್ಲ ಎಂದರು.

ವಿಚಾರಣೆ ವೇಳೆ ಸದಾ ತಮ್ಮ ಪ್ರತಿವಾದಿಗಳನ್ನು ಪ್ರತಿನಿಧಿಸುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರತ್ತಲೂ ತಿರುಗಿದ ಅವರು ಮೆಹ್ತಾ ಅವರು ನಮ್ಮ ಪರವಾಗಿ ಆ ಪತ್ರವನ್ನು ಬರೆದು ನ್ಯಾಯಮೂರ್ತಿಗಳ ಗ್ರಂಥಾಲಯ ಬಳಕೆಗೆ ಮನವಿ ಮಾಡಬಹುದು” ಎಂದು ಅನಿರೀಕ್ಷಿತ ಬೇಡಿಕೆ ಮುಂದಿಟ್ಟರು. ಈ ವೇಳೆ ಕೋರ್ಟ್‌ನಲ್ಲಿ ಕೆಲ ಗಳಿಗೆ ಮೌನವಿತ್ತು. ಈ ಮೌನವನ್ನು ಮುರಿಯುವಂತೆ ನ್ಯಾ. ಓಕಾ ಅವರು ಮುಗುಳ್ನಗುತ್ತಾ, ʼಮೆಹ್ತಾ  ಒಪ್ಪಿದ್ದಾರೆ ಎಂದರು. ಅದಕ್ಕೆ ಮೆಹ್ತಾ ಅವರು 'ಹೌದು, ಹೌದು' ಎಂದು ತಲೆಯಾಡಿಸಿದರು. ಪಟ್ಟು ಬಿಡದ ಇಂದಿರಾ ಮತ್ತೊಮ್ಮೆ ಮೆಹ್ತಾ ಅವರಿಗೆ ಮನವಿ ಮಾಡುವುದರೊಂದಿಗೆ ವಿಚಾರಣೆ ಮುಕ್ತಾಯಗೊಂಡಿತು.

ನ್ಯಾಯವಾದಿಗಳ ಪದೋನ್ನತಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ವಿಚಾರಣೆ ವೇಳೆ ವೇಳೆ ಈ ಸ್ವಾರಸ್ಯಕರ ಚರ್ಚೆ ನಡೆಯಿತು.

Kannada Bar & Bench
kannada.barandbench.com