ಸಂತೋಷ್‌ ಆತ್ಮಹತ್ಯೆ ಪ್ರಕರಣ: ಮಹಜರ್‌, ಪಂಚನಾಮೆ ವಿಡಿಯೊ, ಎಫ್‌ಎಸ್‌ಎಲ್‌ ವರದಿ ಸಲ್ಲಿಸಲು ನ್ಯಾಯಾಲಯದ ಆದೇಶ

ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ಸಾಕ್ಷ್ಯ, ದಾಖಲೆಗಳನ್ನು ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಆದೇಶ ಮಾಡಿದ್ದಾರೆ.
K S Eshwarappa
K S Eshwarappa

ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಸ್ಥಳದಲ್ಲಿ ನಡೆಸಿರುವ ಮಹಜರ್‌ ಮತ್ತು ಪಂಚನಾಮೆಯ ವಿಡಿಯೊ ಹಾಗೂ ವಿಕಾಸ್‌ ಮತ್ತು ಶ್ರೀಕಾಂತ್‌ ಗಿಡ್ಡಬಸಣ್ಣವರ್‌ ಮೊಬೈಲ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಅರ್ಜಿದಾರರಿಗೆ ಸಲ್ಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (ಮ್ಯಾಜಿಸ್ಟ್ರೇಟ್‌) ಈಚೆಗೆ ಆದೇಶಿಸಿದೆ.

ಸಂತೋಷ್‌ ಪಾಟೀಲ್‌ ಸಹೋದರ ಅರ್ಜಿದಾರ ಪ್ರಶಾಂತ್‌ ಜಿ. ಪಾಟೀಲ್ ಅವರು ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ಸಾಕ್ಷ್ಯ, ದಾಖಲೆಗಳನ್ನು ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ಆದೇಶ ಮಾಡಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ. ಅರ್ಜಿಯಲ್ಲಿ ಕೋರಲಾಗಿರುವ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿಗೆ ಆದೇಶಿಸಲಾಗಿದೆ” ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕೆ ಬಿ ಕೆ ಸ್ವಾಮಿ ಅವರು “ಉಡುಪಿ ಪೊಲೀಸರು ತನಿಖೆ ನಡೆಸಿ, ಬಿ ವರದಿ ಸಲ್ಲಿಸಿದ್ದಾರೆ. ಸಂತೋಷ್‌ ಆತ್ಮಹತ್ಯೆ ಸ್ಥಳದಲ್ಲಿ ತನಿಖಾಧಿಕಾರಿಯು ಮಹಜರ್ ಮತ್ತು ಪಂಚನಾಮೆ ಪ್ರಕ್ರಿಯೆಯನ್ನು ವಿಡಿಯೊ ಮಾಡಿಸಿದ್ದಾರೆ. ವಿಕಾಸ್‌ ಮತ್ತು ಶ್ರೀಕಾಂತ್‌ ಗಿಡ್ಡಬಸಣ್ಣವರ್‌ ಅವರ ಮೊಬೈಲ್‌ ಅನ್ನು ಜಪ್ತಿ ಮಾಡಿ, ಅವುಗಳನ್ನು ಬೆಂಗಳೂರಿನ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದನ್ನು ತನಿಖೆ ನಡೆಸಿ, ವರದಿಯ ಭೌತಿಕ ಮತ್ತು ಸಾಫ್ಟ್‌ ಪ್ರತಿಗಳನ್ನು ತನಿಖಾಧಿಕಾರಿಗೆ ನೀಡಿದ್ದಾರೆ. ಆದರೆ, ಬಿ ವರದಿಯೊಂದಿಗೆ ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೇ, “ಈಗ ಪ್ರಕರಣವು ಪ್ರತಿಭಟನಾ ಅರ್ಜಿ/ ಆಕ್ಷೇಪಣೆ ಸಲ್ಲಿಸುವ ಹಂತದಲ್ಲಿದ್ದು, ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿದ ದಾಖಲೆಗಳು ಆಕ್ಷೇಪಣೆ ಸಲ್ಲಿಸಲು ಅಗತ್ಯವಾಗಿವೆ. ಆ ದಾಖಲೆಗಳನ್ನು ದೂರುದಾರರಿಗೆ ನಿರಾಕರಿಸಲಾಗದು. ಈ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರೆ ನ್ಯಾಯಾಲಯದ ಮುಂದೆ ಪ್ರಕರಣವನ್ನು ಪ್ರಬಲವಾಗಿ ಮಂಡಿಸಲು ಅನುಕೂಲವಾಗುತ್ತದೆ” ಎಂದು ಕೋರಿದ್ದರು. ಈ ಕೋರಿಕೆಯನ್ನು ನ್ಯಾಯಾಲಯವು ಮಾನ್ಯ ಮಾಡಿದೆ.

Also Read
ಸಂತೋಷ್‌ ಪ್ರಕರಣ: ಎಸ್‌ಎಫ್‌ಎಸ್‌ಎಲ್‌ ದತ್ತಾಂಶ, ಮಹಜರು ಪ್ರಕ್ರಿಯೆ ವಿಡಿಯೊ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ

ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಅವರ ವಿರುದ್ಧ ಗುತ್ತಿಗೆ ಕೆಲಸದ ಹಣ ಬಿಡುಗಡೆಗೆ ಶೇ. 40ರಷ್ಟು ಕಮಿಷನ್‌ ಆರೋಪ ಮಾಡಿದ್ದ ಸಂತೋಷ್‌ ಪಾಟೀಲ್‌ ಅವರು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಏಪ್ರಿಲ್‌ 11ರಂದು ಶವವಾಗಿ ಪತ್ತೆಯಾಗಿದ್ದರು. ಸಂತೋಷ್‌ ಸಹೋದರ ಪ್ರಶಾಂತ್‌ ಪಾಟೀಲ ದೂರು ಆಧರಿಸಿ ಉಡುಪಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಈಶ್ವರಪ್ಪ ಮೊದಲ ಆರೋಪಿಯಾಗಿದ್ದರು.

Related Stories

No stories found.
Kannada Bar & Bench
kannada.barandbench.com