ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಅಖಿಲ ಭಾರತ ಕೋಟಾ (ಎಐಕ್ಯೂ) ಸೀಟುಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ. 27 ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ.10 ಮೀಸಲಾತಿ ಒದಗಿಸುವ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದ ನೀಟ್ ಸ್ನಾತಕೋತ್ತರ ಪ್ರವೇಶಾತಿ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ, ಜ.7 ರಂದು ನೀಡಲಿದೆ [ನೀಲ್ ಆರೆಲಿಯೊ ನ್ಯೂನ್ಸ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].
ತೀರ್ಪು ಕಾಯ್ದಿರಿಸುವ ಮೊದಲು ಕಕ್ಷೀದಾರರ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ "ರಾಷ್ಟ್ರೀಯ ಹಿತಾಸಕ್ತಿ" ಪರಿಗಣಿಸಿ ಆದೇಶ ಪ್ರಕಟಿಸಬೇಕಿದ್ದು ಅದೇ ದೃಷ್ಟಿಯಿಂದ ನೀಟ್ ಕೌನ್ಸೆಲಿಂಗ್ ಆರಂಭಿಸಬೇಕು ಎಂದಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ 10:30ಕ್ಕೆ ತೀರ್ಪು ಪ್ರಕಟವಾಗಲಿದೆ.
“ಯಾವುದೇ ಪರಿಷ್ಕೃತ ಮಾನದಂಡಗಳನ್ನು ಭವಿಷ್ಯದಲ್ಲಿ ಅನ್ವಯಿಸುವಂತೆ ಮಾಡಬೇಕು ಮತ್ತು ಪ್ರಸ್ತುತ ಪ್ರವೇಶಾತಿಯನ್ನು ಈಗಿನ ಮಾನದಂಡಗಳ ಪ್ರಕಾರ ನಡೆಸಬೇಕು ಎಂದು ಇಂದಿನ ವಿಚಾರಣೆಯ ವೇಳೆ, ಕೇಂದ್ರ ಸರ್ಕಾರ ಸೂಚಿಸಿತು. ಒಬಿಸಿ ಮೀಸಲಾತಿ ಮತ್ತು ಇಡಬ್ಲ್ಯೂಎಸ್ ನಿರ್ಧರಿಸಲು ₹8 ಲಕ್ಷ ಆದಾಯದ ಮಾನದಂಡ ಒದಗಿಸಿರುವುದನ್ನು ಅದು ಸಮರ್ಥಿಸಿತು.
ನ್ಯಾಯಾಲಯ ನಿರ್ದಿಷ್ಟವಾಗಿ ಪರಿಶೀಲಿಸುತ್ತಿರುವ ಅಂಶಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿಗಾಗಿ ಇಡಬ್ಲ್ಯೂಎಸ್ ಅಡಿ ಸೀಟು ಪಡೆಯಲು ₹8 ಲಕ್ಷ ವಾರ್ಷಿಕ ಆದಾಯವನ್ನು ಮಿತಿಯಾಗಿ ಬಳಸುವ ಸಾಧ್ಯತೆಯೂ ಒಂದಾಗಿದೆ.
ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರವಿಂದ ದಾತಾರ್ ಅವರು, ಆರ್ಥಿಕ ಮೀಸಲಾತಿ ಕುರಿತ ಸಿನ್ಹೋ ಆಯೋಗದ ವರದಿಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದರು. ಅಲ್ಲದೆ “₹ 8 ಲಕ್ಷ ಆದಾಯದ ಮಾನದಂಡವು ಮನಸೋಇಚ್ಛೆಯಾಗಿ ರೂಪಿಸಿರುವುದಾಗಿದೆ, ಆಸ್ತಿ ಮಾನದಂಡಗಳಂತೂ ಮತ್ತೂ ಕೆಟ್ಟದಾಗಿವೆ. 5 ಎಕರೆ ಕೃಷಿ ಭೂಮಿಯನ್ನು ರಾಷ್ಟ್ರೀಯ ಮಿತಿಯಾಗಿ ಮಾಡಿರುವುದು ಸಂಪೂರ್ಣ ತಪ್ಪಾಗಿದೆ. ಕೇರಳದಲ್ಲಿ ಜನಸಾಂದ್ರತೆಯ ಕಾರಣದಿಂದಾಗಿ 5 ಎಕರೆ ಭೂಮಿಯನ್ನು ಹೊಂದಲು ಅಸಾಧ್ಯ, ಇದೆಲ್ಲಾ ಯಾವುದರ ಆಧಾರದ ಮೇಲೆ ಬಂದಿದೆ ಎಂಬುದಕ್ಕೆ ಉತ್ತರವಿಲ್ಲ. ಬಾಂಬೆ, ಚೆನ್ನೈನಲ್ಲಿರುವ ವಸತಿ ಫ್ಲಾಟ್‌ಗಳ ಬೆಲೆಯಲ್ಲಿ ತುಂಬಾ ವ್ಯತ್ಯಾಸವಿದೆ” ಎಂದರು. ಆದ್ದರಿಂದ ವಾರ್ಷಿಕ ಆದಾಯದ ಮಿತಿಯನ್ನು ರೂ 2.5 ಲಕ್ಷಕ್ಕೆ ಇಳಿಸಬೇಕು ಎಂದು ವಾದಿಸಿದರು.
₹ 8 ಲಕ್ಷದ ಮಾನದಂಡ ಮನಸೋಇಚ್ಛೆಯಾಗಿದೆ ಎಂಬ ದಾತಾರ್ ಅವರ ವಾದಕ್ಕೆ ಹಿರಿಯ ವಕೀಲ ಆನಂದ್ ಗ್ರೋವರ್ ಕೂಡ ಸಹಮತ ವ್ಯಕ್ತಪಡಿಸಿದರು. ₹ 8 ಲಕ್ಷ ಮಿತಿಯಿಂದಾಗಿ ಕೆನೆ ಪದರದಲ್ಲಿರುವವರು ಕೂಡ ಮೀಸಲಾತಿಯಡಿ ಬರುವಂತಾಗುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರ ಅಪೌಷ್ಟಿಕತೆ, ಭೂರಹಿತತೆ, ನಿರುದ್ಯೋಗ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ವಿವರಿಸಿದರು.
ಸ್ಥಾನಿಕ ವೈದ್ಯರನ್ನು ಪ್ರತಿನಿಧಿಸಿದ್ದ ವಕೀಲೆ ಅರ್ಚನಾ ಪಾಠಕ್ ದವೆ, ಇಡಬ್ಲ್ಯೂಎಸ್ ಮಾನದಂಡ ಕುರಿತು ನಂತರ ನಿರ್ಧರಿಸಬಹುದಾಗಿದ್ದು ತಕ್ಷಣ ಕೌನ್ಸೆಲಿಂಗ್ ಪ್ರಾರಂಭಕ್ಕೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿದರು. "3ನೇ ವರ್ಷದ ಸ್ಥಾನಿಕ ವೈದ್ಯರು ಇನ್ನು 4 ತಿಂಗಳಲ್ಲಿ ಉತ್ತೀರ್ಣರಾಗಲಿರುವ ಕಾರಣ ಕೌನ್ಸೆಲಿಂಗ್ ಅನ್ನು ತಕ್ಷಣವೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ 33% ಉದ್ಯೋಗಿಗಳು ಮಾತ್ರ ಉಳಿಯುತ್ತಾರೆ. ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ನಮಗೆ ವೈದ್ಯರ ಅಗತ್ಯವಿದೆ. 8 ಲಕ್ಷ ಅಥವಾ 5 ಲಕ್ಷ ಮಿತಿ ಕುರಿತು ನಂತರ ತೀರ್ಮಾನ ಮಾಡಬಹುದು," ಎಂದು ಅವರು ಹೇಳಿದರು. ಈ ವಾದಕ್ಕೆ ಮೆಚ್ಚುಗೆ ಸೂಚಿಸಿದ ನ್ಯಾಯಾಲಯ ಇದರಿಂದ ವೈದ್ಯರಿಗೆ ಮಾತ್ರವಲ್ಲ ಜನರಿಗೂ ಅನುಕೂಲವಾಗಲಿದೆ ಎಂದಿತು.
ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ₹ 8 ಲಕ್ಷ ಆದಾಯದ ಮಾನದಂಡವನ್ನು ಸಮರ್ಥಿಸಿಕೊಳ್ಳುತ್ತಾ ಆರ್ಥಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಯಾವುದೇ ನಿಶ್ಚಿತ ಸೂತ್ರವಿಲ್ಲ. ಬಡತನವನ್ನು ಯಾವುದೇ ಸೂಚ್ಯಂಕ ಪತ್ತೆ ಮಾಡಲಾಗದು” ಎಂದರು. ಇಡಬ್ಲ್ಯೂಎಸ್ ಕುರಿತ ನಿರ್ಧರಣವು ಹೆಚ್ಚು ಒಳಗೊಳ್ಳುವಿಕೆಯಿಂದ ಯಾವುದೇ ತೊಂದರೆಯನ್ನೇನು ಎದುರಿಸುವುದಿಲ್ಲ ಎಂದರು. ಇದೇ ವೇಳೆ, ಈ ಪ್ರಕ್ರಿಯೆಯು ಬಡವರು ಯಾರು ಎಂದು ನಿರ್ಧರಿಸುವುದಕ್ಕಾಗಿ ಇರುವಂತಹುದಲ್ಲ ಎಂದು ವಾದಿಸಿದರು.
"ಬಡವರು ಯಾರು ಎಂಬುದನ್ನು ನಾವು ಪತ್ತೆ ಹಚ್ಚುತ್ತಿಲ್ಲ. ಬಳಸಿದ ಪದ ʼಆರ್ಥಿಕವಾಗಿ ದುರ್ಬಲʼ ಎಂಬುದಾಗಿದೆ. ಇದು ಬಡತನ ರೇಖೆಗಿಂತ (ಬಿಪಿಎಲ್) ಕೆಳಗೆ ಇರಬೇಕಾಗಿಲ್ಲ, ಅದು ಬಡತನ ರೇಖೆಗಿಂತ ಸ್ವಲ್ಪ ಮೇಲಿರಬಹುದು" ಎಂದು ಅವರು ಹೇಳಿದರು.
ನಾವು ಇಡಬ್ಲ್ಯೂಎಸ್ ಬಗ್ಗೆ ಗಮನಹರಿಸಿದ್ದೇವೆಯೇ ವಿನಾ ಬಡವರ ಬಗ್ಗೆ ಅಲ್ಲ. ಆದಾಯ ತೆರಿಗೆ ಮಿತಿಯನ್ನು ರೂಪಿಸುವಾಗಲೂ, ಸರ್ಕಾರ ಒಳಗೊಳ್ಳುವಿಕೆ ಕುರಿತು ಒಲವು ತೋರುತ್ತದೆ. ನಾವು ಉಳಿತಾಯ ಹೊಂದಿದ್ದೇವೆ ಎಂದು ಭಾವಿಸುವವರನ್ನು ಕೂಡ ಇದು ಒಳಗೊಳ್ಳುತ್ತದೆ” ಎಂದು ಎಸ್‌ಜಿ ವಾದಿಸಿದರು.