ನೀಟ್ ಪ್ರಕರಣಗಳ ವರ್ಗಾವಣೆ ಕೋರಿದ್ದ ಮನವಿ: ಕೇಂದ್ರ, ಎನ್‌ಟಿಎಗೆ ಸುಪ್ರೀಂ ಕೋರ್ಟ್ ನೋಟಿಸ್

ಈ ಹಿಂದೆ ಎನ್‌ಟಿಎ ಸಲ್ಲಿಸಿದ್ದ ಇದೇ ಬಗೆಯ ಮನವಿಯನ್ನು ಈ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಲಗತ್ತಿಸಿತು. ಎನ್‌ಟಿಎ ಮನವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಉಚ್ಚ ನ್ಯಾಯಾಲಯಗಳ ವಿಚಾರಣೆಗೆ ತಡೆ ನೀಡಿತ್ತು.
Supreme Court, NEET 2024
Supreme Court, NEET 2024
Published on

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪದವಿ ಪರೀಕ್ಷೆಗೆ (ನೀಟ್‌ 2024) ಸಂಬಂಧಿಸಿದಂತೆ ಹೈಕೋರ್ಟ್‌ಗಳು ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತಾಗಿ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ನೀಡಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಹಿಂದೆ ಎನ್‌ಟಿಎ ಸಲ್ಲಿಸಿದ್ದ ಇದೇ ಬಗೆಯ ಮನವಿಯನ್ನು ಈ ಅರ್ಜಿಗಳೊಂದಿಗೆ ಲಗತ್ತಿಸಿತು. ಎನ್‌ಟಿಎ ಮನವಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಉಚ್ಚ ನ್ಯಾಯಾಲಯಗಳ ವಿಚಾರಣೆಗೆ ತಡೆ ನೀಡಿತ್ತು.   

Also Read
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವಿಡಿಯೋ ನಕಲಿ: ಸುಪ್ರೀಂ ಕೋರ್ಟ್‌ಗೆ ಎನ್‌ಟಿಎ ಅಫಿಡವಿಟ್‌

ನೀಟ್‌ ಪರೀಕ್ಷೆಯ ಸಾಮೂಹಿಕ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮತ್ತಿತರ ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ನೋಟಿಸ್‌ ನೀಡಿತು.

ಅಕ್ರಮಗಳ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವಂತೆ ಅರ್ಜಿದಾರರು ಕೋರಿದ್ದರು. ಕೆಲವು ಅರ್ಜಿದಾರರು ಸೋರಿಕೆಗಳು ವೈಯಕ್ತಿಕ ನೆಲೆಯಲ್ಲಿ ನಡೆದಿದ್ದು ವ್ಯಾಪಕವಾಗಿಲ್ಲ ಎಂದು ಹೇಳುವ ಮೂಲಕ ಮರುಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. .

ಜೂನ್ 11 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಪ್ರತಿಕ್ರಿಯಿಸಲು ಎನ್‌ಟಿಎಗೆ ಆದೇಶಿಸಿತ್ತು. ಕೌನ್ಸೆಲಿಂಗ್‌ಗೆ ತಡೆ ನೀಡುವುದಿಲ್ಲ ಎಂದು ಆಗಲೂ ಕೂಡ ಅದು ತಿಳಿಸಿತ್ತು.

ಜುಲೈ 8ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಮರುಪರೀಕ್ಷೆ ನಡೆಸುವ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸುವುದಕ್ಕಾಗಿ ಪ್ರಶ್ನೆ ಪತ್ರಿಕೆಯ ಸೋರಿಕೆಯ ಪ್ರಮಾಣ ಎಷ್ಟಿದೆ ಎಂಬುದನ್ನು ತೀರ್ಮಾನಿಸುವ ಅಗತ್ಯವಿದೆ  ಎಂದು ನ್ಯಾಯಾಲಯ ಹೇಳಿತ್ತು.

Also Read
ನೀಟ್ ಅಕ್ರಮ ನಡೆದಿರುವುದರಲ್ಲಿ ಸಂದೇಹವೇ ಇಲ್ಲ ಎಂದ ಸುಪ್ರೀಂ: ಮರುಪರೀಕ್ಷೆ ಕುರಿತು ಶೀಘ್ರ ನಿರ್ಧಾರ

ದೊಡ್ಡ ಪ್ರಮಾಣದ ಗೌಪ್ಯತೆ ಉಲ್ಲಂಘನೆಯಾಗದೆ ಇರುವುದರಿಂದಾಗಿ ಮರು ಪರೀಕ್ಷೆ ಅನಗತ್ಯ ಎಂದು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಪ್ರತಿಪಾದಿಸಿದ್ದವು. ಈ ಮಧ್ಯೆ ನೀಟ್‌ಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬೇರೆ ಬೇರೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಅನೇಕ ವಿಚಾರಣೆಗಳನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ಗೆ ಪ್ರಕರಣಗಳನ್ನು ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com