

ಬೌದ್ಧ ಧರ್ಮಕ್ಕೆ ಮತಾಂತರವಾಗಿ ಆ ಧರ್ಮೀಯರಿಗೆ ಇರುವ ಅಲ್ಪಸಂಖ್ಯಾತ ಮೀಸಲಾತಿ ಕೋರಿದ ಮೇಲ್ಜಾತಿಯ ಹಿಂದೂ ಸಮುದಾಯದ ವ್ಯಕ್ತಿ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ [ನಿಖಿಲ್ ಕುಮಾರ್ ಪುನಿಯಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಇದೊಂದು ಹೊಸ ರೀತಿಯ ವಂಚನೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಟೀಕಿಸಿತು.
ತಾನು ಅಲ್ಪಸಂಖ್ಯಾತ ಎಂಬ ಆಧಾರದ ಮೇಲೆ ಮೀಸಲಾತಿ ಒದಗಿಸುವಂತೆ ಕೋರಿ ನಿಖಿಲ್ ಕುಮಾರ್ ಪುನಿಯಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸಿಜೆಐ ಸೂರ್ಯ ಕಾಂತ್ “ನೀವು ಪುನಿಯಾ? ಯಾವ ರೀತಿಯ ಅಲ್ಪಸಂಖ್ಯಾತರು ನೀವು? ನೇರವಾಗಿ ಕೇಳುತ್ತೇನೆ. ಯಾವ ಪುನಿಯಾ ನೀವು?” ಎಂದು ಸಿಜೆಐ ಕಾಂತ್ ಪ್ರಶ್ನಿಸಿದರು. ಆಗ ತಮ್ಮ ಕಕ್ಷಿದಾರರು ಜಾಟ್ ಪುನಿಯಾ ಸಮುದಾಯಕ್ಕೆ ಸೇರಿದವರು ಎಂದು ಅರ್ಜಿದಾರರ ಪರ ವಕೀಲರು ಉತ್ತರಿಸಿದರು. "ಹಾಗಾದರೆ ಅದು ಅಲ್ಪಸಂಖ್ಯಾತ ಸಮುದಾಯಕ್ಕೆ ಹೇಗೆ ಸೇರಲಿದೆ" ಎಂದು ಪೀಠ ಪ್ರಶ್ನಿಸಿತು. ಕಕ್ಷಿದಾರರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದು ಅದು ಅವರ ಹಕ್ಕು ಎಂದು ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ “ವಾಹ್! ಇದು ಹೊಸ ಬಗೆಯ ವಂಚನೆ” ಎಂದು ಕಿಡಿ ಕಾರಿದರು.
ಬಳಿಕ ಪೀಠ ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡುವ ಸಂಬಂಧ ಇರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆಂದು ಹೇಳಿಕೊಂಡು ಮೇಲ್ಜಾತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಅಲ್ಪಸಂಖ್ಯಾತ ಪ್ರಮಾಣಪತ್ರ ಪಡೆಯಲು ಸಾಧ್ಯವಿದೆಯೇ ಎಂಬ ಕುರಿತು ತನಗೆ ಮಾಹಿತಿ ನೀಡುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿತು.
“ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡುವ ಮಾರ್ಗಸೂಚಿಗಳು ಯಾವುವು ಎಂಬುದನ್ನು ಹರಿಯಾಣ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ತಿಳಿಸಬೇಕು. ವಿಶೇಷವಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರದ ಮೇಲ್ಜಾತಿ ಸಾಮಾನ್ಯ ವರ್ಗದ ಅಭ್ಯರ್ಥಿಯೊಬ್ಬ, ಹಿಂದಿನ ಅರ್ಜಿಯಲ್ಲಿ ತಾನು ಸಾಮಾನ್ಯ ವರ್ಗಕ್ಕೆ ಸೇರಿದವನೆಂದು ಘೋಷಿಸಿಕೊಂಡಿದ್ದರೂ, ಈಗ ತಾನು ಬೌದ್ಧ ಅಲ್ಪಸಂಖ್ಯಾತನೆಂದು ಘೋಷಿಸಿಕೊಂಡರೆ, ಅಂತಹವರಿಗೆ ಅಲ್ಪಸಂಖ್ಯಾತ ಪ್ರಮಾಣಪತ್ರ ನೀಡಲು ಅನುಮತಿ ಇದೆಯೇ ?” ಎಂದು ಅದು ಪ್ರಶ್ನಿಸಿತು.