

ಗಂಗಾ- ಯಮುನಾ ನದಿಗಳು ಮತ್ತಿತರ ಜಲಮೂಲಗಳಲ್ಲಿ ತ್ಯಾಜ್ಯ ಸುರಿಯುತ್ತಿರುವ ಎಲ್ಲಾ ಒಟ್ಟು ಮಾಲಿನ್ಯಕಾರಕ ಕೈಗಾರಿಕೆಗಳಲ್ಲಿ (ಜಿಪಿಐಗಳು) ಕೂಡಲೇ ಆನ್‌ಲೈನ್ ನಿರಂತರ ತ್ಯಾಜ್ಯ ಮೇಲ್ವಿಚಾರಣಾ ವ್ಯವಸ್ಥೆ (ಒಸಿಇಎಂಎಸ್) ರೂಪಿಸುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಉತ್ತರ ಪ್ರದೇಶ, ಹರಿಯಾಣ, ಬಿಹಾರ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದೆ.
ಕೈಗಾರಿಕೆಗಳು ಹೊರಹಾಕುವ ತ್ಯಾಜ್ಯ ನೀರಿನ ಗುಣಮಟ್ಟ ಮತ್ತು ಪ್ರಮಾಣ ಪತ್ತೆಹಚ್ಚಲು ರೂಪಿಸಲಾದ ಸ್ವಯಂಚಾಲಿತ ಮತ್ತು ನೈಜ- ಸಮಯ ಮೇಲ್ವಿಚಾರಣಾ ವ್ಯವಸ್ಥೆಯೇ ಒಸಿಇಎಂಎಸ್.
ಜಿಪಿಎಸ್ ಲೋಪವಾಗದಂತೆ ಮತ್ತು ವಿಳಂಬರಹಿತವಾಗಿ ಒಸಿಎಂಎಸ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಅಫ್ರೋಜ್ ಅಹ್ಮದ್ ಅವರ ಪೀಠ ಹೇಳಿದೆ.
ಸಿಪಿಸಿಬಿ ಅಧ್ಯಕ್ಷರು 08.03.2025ರಂದು ಅರ್ಜಿದಾರರು ಸಲ್ಲಿಸಿದ ಮನವಿಯನ್ನು ಪರಿಗಣಿಸಿ, ಉತ್ತರ ಪ್ರದೇಶ, ಹರಿಯಾಣ, ಬಿಹಾರ ಹಾಗೂ ದೆಹಲಿ ರಾಜ್ಯಗಳ ಮಾಲಿನ್ಯ ಒಸಿಇಎಂಎಸ್ ವ್ಯವಸ್ಥೆ ಸ್ಥಾಪನೆ ಹಾಗೂ ಅದರ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸೂಇಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉತ್ತರ ಪ್ರದೇಶ, ಹರಿಯಾಣ, ಬಿಹಾರ ಮತ್ತು ದೆಹಲಿಯಾದ್ಯಂತ 1,700 ಕ್ಕೂ ಹೆಚ್ಚು ಕೈಗಾರಿಕೆಗಳು ಸಿಪಿಸಿಬಿಯ ನಿರ್ದೇಶನ ಪಾಲಿಸಲು ವಿಫಲವಾಗಿದ್ದು ಗಂಗಾ ಮತ್ತು ಯಮುನಾ ನದಿ ಸೇರಿದಂತೆ ಪ್ರಮುಖ ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯ ನೀರನ್ನು ಬಿಡುವುದನ್ನು ಮುಂದುವರೆಸುತ್ತಿವೆ, ಇದರಿಂದಾಗಿ ತೀವ್ರ ಪರಿಸರ ಹಾನಿ ಉಂಟಾಗುತ್ತಿದೆ ಎಂದು ಆರೋಪಿಸಿ ಮೊಹಮ್ಮದ್ ಇಮ್ರಾನ್ ಅಹ್ಮದ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಸದಸ್ಯ ಕಾರ್ಯದರ್ಶಿಗಳು ಎರಡು ತಿಂಗಳೊಳಗೆ ಸಿಪಿಸಿಬಿಗೆ ಅನುಪಾಲನಾ ವರದಿ ಸಲ್ಲಿಸಬೇಕು. ಅದಾದ ಒಂದು ತಿಂಗಳೊಳಗೆ ನಿಯಮ ಪಾಲಿಸದ ಕೈಗಾರಿಕೆಗಳ ವಿರುದ್ಧ ಸಿಪಿಸಿಬಿ ದಂಡನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
[ಆದೇಶದ ಪ್ರತಿ]