ಮನುಷ್ಯರು, ಪರಿಸರದ ಮೇಲೆ ರಾತ್ರಿಯ ಕೃತಕ ಬೆಳಕಿನ ಪ್ರಭಾವ: ಸರ್ಕಾರದ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

ಕೃತಕ ಬೆಳಕು ಮಾನವನ ಆಂತರಿಕ ಗಡಿಯಾರದ (ಸಿರ್ಕಾಡಿಯನ್ ಲಯಗಳು) ಮೇಲೆ ಪ್ರತಿಕೂಲ ಪರಿಣಾಮ ಬೀರಿ ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ ಮತ್ತು ನಿಶಾಚರ ವನ್ಯಜೀವಿಗಳ ಚಟುವಟಿಕೆಗಳಿಗೆ ತೊಂದರೆಯೊಡ್ಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
National Green Tribunal (NGT)
National Green Tribunal (NGT)
Published on

ರಾತ್ರಿ ವೇಳೆ ಕೃತಕ ಬೆಳಕಿನಿಂದಾಗಿ (ಎಎಲ್‌ಎಎನ್‌) ಸಸ್ಯಲೋಕ, ಪ್ರಾಣಿಗಳು ಹಾಗೂ ಮಾನವರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ದೂರಿರುವ ಅರ್ಜಿ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೋಮವಾರ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ಪ್ರತಿಕ್ರಿಯೆ ಕೇಳಿದೆ [ಪಂಚತತ್ವ ಪ್ರತಿಷ್ಠಾನ ಮತ್ತು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಸಂಸ್ಥೆಗಳ ಸಚಿವಾಲಯ].

ನೈಸರ್ಗಿಕ ಜೈವಿಕ ಪ್ರಕ್ರಿಯೆಗಳ ಮೇಲೆ ಕೃತಕ ಬೆಳಕಿನ ವಿಚ್ಛಿದ್ರಕಾರಿ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಪರಿಸರವಾದಿ ಸಂಸ್ಥೆ ಪಂಚತತ್ವ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ಪರಿಣಿತ ಸದಸ್ಯ ಡಾ.ಎ ಸೆಂಥಿಲ್ ವೇಲ್‌ ಅವರಿದ್ದ ಪೀಠ ಈ ನಿರ್ದೇಶನ ನೀಡಿತು.

Also Read
ಹಲಸೂರು ಕೆರೆಗೆ ತ್ಯಾಜ್ಯ ಪ್ರಕರಣ: ಕೇಂದ್ರಕ್ಕೆ ಎನ್‌ಜಿಟಿ ವಿಧಿಸಿದ್ದ ₹2.94 ಕೋಟಿ ದಂಡ ಬದಿಗೆ ಸರಿಸಿದ ಹೈಕೋರ್ಟ್‌

ರಾತ್ರಿಯ ಕೃತಕ ಬೆಳಕು ಮಾನವನ ಆಂತರಿಕ ಗಡಿಯಾರದ (ಸಿರ್ಕಾಡಿಯನ್ ಲಯಗಳು) ಮೇಲೆ ಪ್ರತಿಕೂಲ ಪರಿಣಾಮ ಬೀರಿ ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ ಮತ್ತು ನಿಶಾಚರ ವನ್ಯಜೀವಿಗಳ ಚಟುವಟಿಕೆಗಳಿಗೆ ತೊಂದರೆಯೊಡ್ಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದಲ್ಲದೆ, ಇರುಳಿನ ಕೃತಕ ಬೆಳಕು ಸಸ್ಯಗಳಲ್ಲಿನ ದ್ಯುತಿಸಂಶ್ಲೇಷಣಾ ಕ್ಷಮತೆ ಹಾಗೂ ಶಾರೀರಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದೂ ದೂರಲಾಗಿದೆ.

ರಾತ್ರಿಯ ಕೃತಕ ಬೆಳಕಿನ ಬಳಕೆ ನಿಯಂತ್ರಿಸಲು ಭಾರತದಲ್ಲಿ ಮಿತಿ ಇಲ್ಲ. ಇದರಿಂದಾಗಿ ಪರಿಸರ ಮತ್ತು ಆರೋಗ್ಯದ ಮೇಲೆ ಬೆಳಕಿನ ಮಾಲಿನ್ಯ ಗಮನಾರ್ಹ ಪರಿಣಾಮ ಬೀರಲು ಅವಕಾಶ ಮಾಡಿಕೊಟ್ಟಿದೆ. ತುರ್ತಾಗಿ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅರ್ಜಿ ಕೋರಿದೆ.

Also Read
ಬೆಂಗಳೂರು ಸಹಿತ 10 ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿತ, ವಾರ್ಷಿಕ 33,000 ಸಾವು: ಎನ್‌ಜಿಟಿ ಸ್ವಯಂಪ್ರೇರಿತ ವಿಚಾರಣೆ

ಹಿಂದಿನ ಪ್ರಕರಣಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಗುರುತಿಸಲಾಗಿತ್ತು. ಅನಿಲ್ ಮೆಹ್ತಾ ಮತ್ತು ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ ಬೆಳಕಿನ ಮಾಲಿನ್ಯದ ಬಗ್ಗೆ ವಿವರವಾದ ಅಧ್ಯಯನದ ಅಗತ್ಯವನ್ನು ಎನ್‌ಜಿಟಿ ಎತ್ತಿ ತೋರಿಸಿತ್ತು ಎಂದು ಅರ್ಜಿ ಹೇಳಿದೆ.

ಈ ಹಿನ್ನೆಲೆಯಲ್ಲಿ 2025ರ ಏಪ್ರಿಲ್ 17ರಂದು ನಡೆಯಲಿರುವ ವಿಚಾರಣೆಗೆ ಕನಿಷ್ಠ ಒಂದು ವಾರ ಮೊದಲು ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಎನ್‌ಜಿಟಿ ಸೂಚಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ನವನೀತ್ ವೈಭವ್ ಮತ್ತು ಪ್ರಣಯ್ ಜೋ ಸೆಬಾಸ್ಟಿಯನ್ ವಾದ ಮಂಡಿಸಿದರು.

Kannada Bar & Bench
kannada.barandbench.com